ರಾಯಚೂರು: ಅನ್ನಭಾಗ್ಯ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎನ್ನಲಾಗುತ್ತಿದ್ದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರುವ ಕರಾಳ ದಂಧೆ ಮತ್ತೂಮ್ಮೆ ಬಯಲಾಗಿದ್ದು, ಅಧಿಕಾರಿಗಳ ತಂಡ ಬುಧವಾರ ಭರ್ಜರಿ ಭೇಟೆಯಾಡಿದೆ.
ನಗರದಲ್ಲಿನ ನಾಲ್ಕು ರೈಸ್‌ಮಿಲ್‌ಗಳ ಮೇಲೆ ದಾಳಿ ನಡೆಸಿದ ಅದಿಕಾರಿಗಳ ತಂಡ ಬರೊಬ್ಬರಿ 6.61 ಲಕ್ಷ ಮೌಲ್ಯದ 884 ಪ್ಯಾಕೆಟ್ ಪಡಿತರ ಅಕ್ಕಿ ವಶಪಡಿಸಿಕೊಂಡಿದೆ. ಆ ಮೂಲಕ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಬೇಕಾಬಿಟ್ಟಿ ರವಾನೆಯಾಗುತ್ತಿದೆ ಎಂಬುದು ರುಜುವಾಗಿದೆ. ಸಹಾಯಕ ಆಯುಕ್ತ ಸಂತೋಷ್ ಎಸ್.ಕಾಮಗೌಡ ನೇತೃತ್ವದಲ್ಲಿ ಆಹಾರ ನಿರೀಕ್ಷರು ಬುಧವಾರ ಏಕಕಾಲಕ್ಕೆ ನಾಲ್ಕು ಕಡೆ ದಾಳಿ ನಡೆಸಿದ್ದಾರೆ.
ಮನ್ಸಲಾಪುರ ರಸ್ತೆಯಲ್ಲಿನ ಜಿ.ಕೃಷ್ಣಸ್ವಾಮಿ ರೈಸ್ ಮಿಲ್‌ನಲ್ಲಿ 337 ಪ್ಯಾಕೆಟ್, ಜಿ.ಶಂಕರ್ ಇಂಡಸ್ಟ್ರೀಸ್ 378, ಗದ್ವಾಲ್ ರಸ್ತೆಯ ಚಂದ್ರಿಕಾ ರೈಸ್ ಮಿಲ್‌ನಲ್ಲಿ 60 ಹಾಗೂ ನರಸಿಂಹ ರೈಸ್ ಮಿಲ್‌ನಲ್ಲಿ 109 ಪ್ಯಾಕೆಟ್ ಪಡಿತರ ಅಕ್ಕಿ ಸಿಕ್ಕಿದೆ. ಮಿಲ್ ಗಳಲ್ಲಿ ರಾಜಾರೋಷವಾಗಿ ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಿರುವುದು ಬೆಳಕಿಗೆ ಬಂದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಬಿ.ಆರ್.ಯಂಕಣ್ಣ ನೀಡಿದ ದೂರಿನ ಮೇರೆಗೆ ಗ್ರಾಮೀಣ ಠಾಣೆಯಲ್ಲಿ ನಾಲ್ಕು ರೈಸ್ ಮಿಲ್‌ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೇಗಾಗುತ್ತಿದೆ ದಂಧೆ..?: ಸರ್ಕಾರ ಪ್ರತಿ ತಿಂಗಳು ಬಡವರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸುತ್ತಿದೆ. ಅದರ ಜತೆಗೆ ವಿವಿಧ ವಸತಿ ನಿಲಯಗಳು, ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಅಕ್ಕಿ ಪೂರೈಕೆಯಾಗುತ್ತದೆ. ಆದರೆ, ಆ ಅಕ್ಕಿ ಅರ್ಹರಿಗೆ ಸೇರದೆ ನೇರವಾಗಿ ಕಾಳಸಂತೆಗೆ ಹೋಗುತ್ತಿದೆ. ಅದರಲ್ಲಿ ಮಂಡಕ್ಕಿ ಭಟ್ಟಿಗೆ ಒಂದಿಷ್ಟು ಹೋದರೆ, ರೈಸ್‌ಮಿಲ್‌ಗಳಿಗೆ ಸಿಂಹಪಾಲಿನಷ್ಟು ಹೋಗುತ್ತಿದೆ. ಇದನ್ನೇ ಕೆಲವರು ದಂಧೆ ಮಾಡಿಕೊಂಡಿದ್ದು, ಬಡವರ ಪಾಲಿನ ಅಕ್ಕಿ ಉಳ್ಳವರ ಜೇಬಿಗೆ ಹಾಕುತ್ತಿದ್ದಾರೆ.
ಪಾಲೀಶ್ ಮಾಡಿ ಸೇರ್ಪಡೆ: ಅನ್ನದ ಬಟ್ಟಲು ಎಂದೇ ಹೆಸರಾದ ರಾಯಚೂರು ಸೋನಾ ಮಸೂರಿ ಅಕ್ಕಿಗೆ ಹೆಸರುವಾಸಿ. ಇಲ್ಲಿ ಬೆಳೆಯುವ ಅಕ್ಕಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಇದೆ. ಆದರೆ, ಇಲ್ಲೂ ಕಲಬೆರಕೆ ನಡೆಯುತ್ತಿದ್ದು, ಕೆಲ ಮಿಲ್‌ಗಳು ಅನ್ನಭಾಗ್ಯ ಅಕ್ಕಿಯನ್ನೇ ಪಾಲೀಶ್ ಮಾಡಿ ಸೋನಾ ಮಸೂರಿ ಜತೆ ಸೇರಿಸುತ್ತಿದ್ದಾರೆ. ಸೋನಾ ಮಸೂರಿಗೆ ಸಿಗುವ ಬೆಲೆಯೇ ಇದಕ್ಕೂ ಸಿಗುವುದರಿಂದ ಈ ದಂಧೆ ಇತ್ತೀಚೆಗೆ ಬಲಗೊಂಡಿದೆ.
ಇನ್ನಷ್ಟು ದಾಳಿಗಳು ನಡೆಯಲಿ: ಅನ್ನಭಾಗ್ಯ ಅಕ್ರಮ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಬೇರು ಬಿಟ್ಟಿರುವ ಗುಮಾನಿಗಳಿಗೆ. ಜಿಲ್ಲೆಯ ಎಲ್ಲೆಡೆ ಈ ವಹಿವಾಟು ನಡೆಯುತ್ತಿದ್ದು, ಅಂತಾರಾಜ್ಯಗಳ ಜತೆಗೆ ಅಕ್ರಮ ವಹಿವಾಟು ನಡೆಸುತ್ತಿರುವ ದೂರುಗಳಿವೆ. ಇನ್ನೂ ಹೆಚ್ಚಿನ ತನಿಖೆ ನಡೆಸಿದಲ್ಲಿ ಇಂಥ ಇನ್ನಷ್ಟು ಅಕ್ರಮ ಬಯಲಿಗೆಳೆಯಬಹುದು ಎಂಬುದು ಜನರ ಅಭಿಪ್ರಾಯ.
ಸರ್ಕಾರ ಎಲ್ಲ ಯೋಜನೆಗಳಿಗೂ ಒಂದೇ ಅಕ್ಕಿ ಬಳಸುತ್ತಿದೆ. ಹೀಗಾಗಿ ಇದನ್ನು ಅನ್ನಭಾಗ್ಯ ಅಕ್ಕಿ ಎಂದು ಹೇಳಲಾಗದು. ವಸತಿ ನಿಲಯಗಳಿಗೆ,ಮಧ್ಯಾಹ್ನ ಬಿಸಿಯೂಟ ಸೇರಿದಂತೆ ವಿವಿಧ ಯೋಜನೆಗಳಿಗೆ ಒಂದೇ ರೀತಿಯ ಅಕ್ಕಿ ಪೂರೈಕೆಯಾಗುತ್ತದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಏಕಕಾಲಕ್ಕೆ ಅಕ್ಕಿ ಬಿಡುಗಡೆ ಮಾಡುವುದರಿಂದ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಬಂದಿರುವ ಸಾಧ್ಯತೆ ಇರಬಹುದು. ಆದರೆ, ಮೇಲ್ನೋಟಕ್ಕೆ ಪಡಿತರ ಅಕ್ಕಿ ರೀತಿ ಕಂಡಿರುವ ಕಾರಣ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸಿದ ಬಳಿಕ ಅಕ್ಕಿ ಎಲ್ಲಿಂದ ಬಂದಿದೆ ಎಂಬ ನಿಖರ ಮಾಹಿತಿ ಸಿಗಲಿದೆ.
ಅರುಣಕುಮಾರ ಸಂಗಾವಿ,
ಉಪನಿರ್ದೇಶ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ