ಕಲಬುರಗಿ: ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಎಸ್‌ಐ ಮೆಡಿಕಲ್ ಕಾಲೇಜು, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜು (ಎಂಆರ್‌ಎಂಸಿ) ಅಥವಾ ಬಸವೇಶ್ವರ ಆಸ್ಪತ್ರೆ ಹಾಗೂ ಕೆಬಿಎನ್ ಆಸ್ಪತ್ರೆಗಳಲ್ಲಿ ಶೀಘ್ರ ಸೋಂಕು ಮತ್ತೆ ಲ್ಯಾಬ್ ಆರಂಭಿಸಲಾಗುವುದು ಎಂದು ಸಂಸದ ಉಮೇಶ್ ಜಾಧವ್ ಹೇಳಿದರು.
ಡಿಸಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದ (ಐಸಿಎಂಆರ್) ಮಹಾ ನಿರ್ದೇಶಕ ಭಾರ್ಗವ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಂಸದರು, ಜಿಲ್ಲೆಯಲ್ಲಿ ಕೋವಿಡ್ ಪತ್ತೆಗಾಗಿ ಲ್ಯಾಬ್‌ಗಳ ಅವಶ್ಯಕತೆಯಿದೆ ಎಂದರು.
ಇಎಸ್‌ಐ ಮೆಡಿಕಲ್ ಆಸ್ಪತ್ರೆಯಲ್ಲಿ ಅವಶ್ಯಕತೆಯಿರುವ ಹುದ್ದೆಗಳಿಗಾಗಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಕರೆದು, ಸ್ಥಳೀಯ ಜನರಿಗೆ ಉದ್ಯೋಗಾವಕಾಶ ನೀಡಲಾಗುವುದು. ಕೋವಿಡ್ ದಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಆತ್ಮವಿಶ್ವಾಸ ಮೂಡಿಸುವಲ್ಲಿ ವೈದ್ಯರು ಪ್ರಮುಖ ಪಾತ್ರವಹಿಸಬೇಕು ಎಂದು ಸಲಹೆ ನೀಡಿದರು. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತಿಮ ಸಂಸ್ಕಾರ ಸಂದರ್ಭದಲ್ಲಿ ಕೋವಿಡ್ ಸ್ವಯಂ ಸೇವಕರಿಗೆ ಅಗತ್ಯ ಸಹಕಾರ ನೀಡುವುದರ ಮೂಲಕ ಅಂತ್ಯಸಂಸ್ಕಾರದಲ್ಲಿ ಯಾವುದೇ ಅಡೆ ತಡೆಯಾಗದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಜಿಮ್ಸ್‌ಗೆ ಭೇಟಿ: ಇದೇ ಸಂದರ್ಭದಲ್ಲಿ ಜಿಮ್ಸ್ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಕೊರೊನಾ ಸೋಂಕಿತ ವ್ಯಕ್ತಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ಜಿಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸವಲತ್ತುಗಳಿದ್ದು, ರೋಗಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದೇ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಧೈರ್ಯ ತುಂಬಿದರು.
ಡಾ| ಕವಿತಾ ಪಾಟೀಲ, ಡಾ| ಶಫಿಯೋದ್ದಿನ್, ಡಾ| ಎಸ್. ಎಂ. ಅವಂತಿ, ಡಾ| ಮಹಮ್ಮದ್ ಫಾರೂಕ್, ಡಾ| ಎಂ.ಅಲಿ ಪಟೇಲ್, ಡಾ| ಪಾಕಂಡೆಕರ್, ಪ್ರಶಾಂತ್ ಕೆ., ಇದ್ದರು.