ಪಿರಿಯಾಪಟ್ಟಣ: ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಲೆ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಹರಾಜು ಪ್ರಕ್ರಿಯೆ ತಡೆದು ಪ್ರತಿಭಟಿಸಿದರು. ತಾಲೂಕಿನ ಕಗ್ಗುಂಡಿಯ ತಂಬಾಕು ಮಾರಾಟ ಕೇಂದ್ರ ಪ್ಲಾಟ್ ಫಾಂ ನಂ.04, 05, 06 ರಲ್ಲಿ ರೈತರ ತಂಬಾಕಿಗೆ ನಿರ್ದಿಷ್ಟ ಮೊತ್ತ ಬೆಲೆ ನೀಡದೆ ತಂಬಾಕು ಖರೀದಿ ಕಂಪನಿಗಳು ಹರಾಜು ಪ್ರಕ್ರಿಯೆಯನ್ನು ಯಥಾ ಪ್ರಕಾರ ಮುಂದುವರಿಸಿದರು.
ಇದನ್ನು ಮನಗಂಡ ರೈತರು, ಬುಧವಾರ ಬೆಳಗ್ಗೆ ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ತಂಬಾಕಿನಲ್ಲಿ ಬೆಲೆಯಲ್ಲಿ 20 ರಿಂದ 30 ರೂ.,ಗಳ ಕುಸಿತ ಕಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಹರಾಜು ಕಂಪನಿ ಮತ್ತು ಅಧೀಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾರುಕಟ್ಟೆ ಬಾಗಿಲು ಮುಚ್ಚಿಸಿ ಮಾತನಾಡಿದ ರೈತರು, ಮಾರುಕಟ್ಟೆಯಲ್ಲಿ ರೈತರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ.
ರೈತರ ತಂಬಾಕನ್ನು ಖರೀದಿ ಮಾಡಿದ ನಂತರ ಇಲ್ಲಿನ ನೌಕರರು ಬೇಲುಗಳನ್ನು ಕಂಪನಿಗಳಿಗೆ ಸಾಗಿಸಲು ಪ್ರತಿ ಬೇಲಿಗೆ ತಲಾ 500 ರಿಂದ 1000 ರೂ.,ಗೆ ಬೇಡಿಕೆ ಇಡುತ್ತಿದ್ದಾರೆ. ಕೆಲವು ಪ್ಲಾಟ್ ಫಾಂಗಳಲ್ಲಿ ಐಟಿಐ ಕಂಪನಿ ಖರೀದಿ ಮಾಡಿದ ಬೇಲುಗಳನ್ನು ಕಂಪನಿ ಪರೀಕ್ಷಕ ಕಡಿಮೆ ಗುಣಮಟ್ಟದ ತಂಬಾಕು ಎಂದು ಹಿರಿಯ ಅಧಿಕಾರಿಗೆ ಗಮನಕ್ಕೆ ತರುತ್ತಿರುವುದರಿಂದ ತಂಬಾಕು ಬೆಲೆ ಕಡಿಮೆಯಾಗುತ್ತಿದೆ ಎಂದು ಆರೋಪಿಸಿದರು.
ಪೊಲೀಸ್ ಉಪ ನಿರೀಕ್ಷಕ ಗಣೇಶ್ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಿ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕರನ್ನು ಸ್ಥಳಕ್ಕೆ ಬರುವಂತೆ ಕರೆ ಮಾಡಿ ಪರಿಸ್ಥತಿ ನಿಯಂತ್ರಿಸಿದರು. ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ತಲಪ ಸಾಯಿ ಮಾತನಾಡಿ, ನೆರೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಳದರ್ಜೆ ತಂಬಾಕು ಉತ್ಪತ್ತಿಯಾಗುತ್ತಿದ್ದು, ಇದರ ಪರಿಣಾಮದಿಂದ ಇಲ್ಲಿನ ರೈತರ ತಂಬಾಕಿಗೆ ಕಡಿಮೆ ಬೆಲೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಂಪನಿ ಮತ್ತು ಮಂಡಳಿ ಜೊತೆ ಚರ್ಚಿಸಿ ಸೂಕ್ತ ಬೆಲೆ ನೀಡುವ ಭರವಸೆ ನೀಡಿದರು.