Advertisement

ಬಾಂಗ್ಲಾದೇಶಿಯರ ಪತ್ತೆ ಕಾರ್ಯ ಚುರುಕು

12:55 AM Jan 21, 2020 | Lakshmi GovindaRaj |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ನಗರದಲ್ಲಿ ಭಯೋತ್ಪಾದಕರ ಬಂಧನದ ಬೆನ್ನಲ್ಲೇ ನಗರದಲ್ಲಿ ಅಕ್ರಮ ಬಾಂಗ್ಲಾದೇಶಿಯರ ಪತ್ತೆ ಕಾರ್ಯ ಚುರುಕುಗೊಂಡಿದೆ. ಚಿಂದಿ ಆಯುವುದು, ರಸ್ತೆ ಬದಿ ಆಟಿಕೆ ವಸ್ತುಗಳ ಮಾರಾಟ, ಕಟ್ಟಡ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದ ಬಾಂಗ್ಲಾವಲಸಿಗರು ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ ಎಂಬುದು ಗೊತ್ತಾಗಿದೆ. ವೈಟ್‌ಫೀಲ್ಡ್‌, ಮುನೇಕೊಳಲು, ಕಾಡು ಬೀಸನಹಳ್ಳಿ, ದೇವರ ಬೀಸನಹಳ್ಳಿ, ಬೆಳ್ಳಂದೂರು, ವರ್ತೂರು ಭಾಗದ ಕೆಲವು ಜೋಪಡಿಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂಬುದು ಪತ್ತೆಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಎರಡೂವರೆ ವರ್ಷಗಳ ಹಿಂದೆ ಬೆಂಗಳೂರು ಸೇರಿ ರಾಜ್ಯದಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾದೇಶಿಯರ ಪತ್ತೆಗೆ ಸೂಚಿಸಲಾಗಿತ್ತು. ಅದರಂತೆ ರಾಜ್ಯದಲ್ಲಿ ಸುಮಾರು ಏಳು ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ಕೂಡ ಸಂಗ್ರಹಿಸಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಳಿಸಿರಲಿಲ್ಲ. ಇದೀಗ ಆ ಕಾರ್ಯಕ್ಕೆ ಮತ್ತೆ ಚಾಲನೆ ದೊರತಿದೆ ಎಂದು ಹೇಳಲಾಗಿದೆ.

ಬೆಳ್ಳಂದೂರು ಶೆಡ್‌ ತೆರವು ಪ್ರಕರಣ: ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಮಂತ್ರಿ ಎಸ್ಪಾನ ಅರ್ಪಾಟ್‌ಮೆಂಟ್‌ ಪಕ್ಕದ ಖಾಲಿ ನಿವೇಶನದಲ್ಲಿ ಬಾಂಗ್ಲಾದೇಶದ ನಿವಾಸಿಗಳು ಅನಧಿಕೃತವಾಗಿ ಶೆಡ್ಡ್ಗಳನ್ನು ನಿರ್ಮಿಸಿದ್ದು, ಇದನ್ನು ತೆರವು ಮಾಡುವುದಕ್ಕೆ ಭದ್ರತೆ ನೀಡುವಂತೆ ಮಾರತ್‌ಹಳ್ಳಿ ಪೊಲೀಸರಿಗೆ ಪತ್ರ ಬರೆದಿದ್ದ ಮಾರತ್ತಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.

ಈ ಸಂಬಂಧ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾರತ್‌ಹಳ್ಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಈ ರೀತಿ ಪತ್ರ ಬರೆದಿರುವುದು ಬಿಬಿಎಂಪಿ ಆಯುಕ್ತರಾದ ಬಿ.ಎಚ್‌.ಅನಿಲ್‌ಕುಮಾರ್‌ ಸೇರಿದಂತೆ ಯಾರ ಗಮನಕ್ಕೂ ಬಂದಿಲ್ಲ. ತೆರವು ಮಾಡುವಂತೆ ಪತ್ರ ಬರೆಯುವ ಅಧಿಕಾರ ಅವರಿಗೆ ಇರುವುದಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ತೆರವು ಕಾರ್ಯಚರಣೆ ವೇಳೆ ಪಾಲಿಕೆಯ ಯಾವುದೇ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರಲಿಲ್ಲ ಎಂದು ಹೇಳಿದ್ದಾರೆ. ತೆರವು ಕಾರ್ಯಾಚರಣೆ ನಡೆದ ಮೇಲೆ ಈ ವಿಷಯ ಬೆಳಕಿಗೆ ಬಂದಿದೆ ಎಂದು ಸ್ಪಷ್ಟನೆ ನೀಡಿದರು.

ಜ.18ರಂದು ಮಾರತ್‌ಹಳ್ಳಿ ಪೊಲೀಸರಿಗೆ ಪತ್ರ ಬರೆದಿದ್ದ ಎಇಇ ಈ ಭಾಗದಲ್ಲಿ ಅಕ್ರಮ ಬಾಂಗ್ಲಾದೇಶದ ನಿವಾಸಿಗಳು ನೆಲೆಸಿದ್ದು, ಕೊಳಚೆ ಪ್ರದೇಶಗಳು ನಿರ್ಮಾಣವಾಗುತ್ತಿರುವ ಬಗ್ಗೆ ನಿರಂತರವಾಗಿ ದೂರುಗಳು ಕೇಳಿಬರುತ್ತಿದ್ದು, ಅಕ್ರಮ ಶೆಡ್ಡ್ಗಳನ್ನು ತೆರವು ಮಾಡಬೇಕಾಗಿದೆ. ಅಕ್ರಮ ಶೆಡ್ಡ್ ತೆರವು ಕಾರ್ಯಾಚರಣೆ ನಡೆಸುವ ವೇಳೆ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಪೊಲೀಸ್‌ ಭದ್ರತೆ ನೀಡಬೇಕು ಎಂದು ಮನವಿ ಮಾಡಿದ್ದರು.

Advertisement

ಮತ್ತೆ ನಾಲ್ಕು ದಿನಗಳ ವಶಕ್ಕೆ ಎಸ್‌ಡಿಪಿಐ ಸದಸ್ಯರು: ನಗರದ ಪುರಭವನ ಮುಂಭಾಗ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಪರವಾದ ಸಮಾವೇಶದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಯತ್ನಿಸಿದ ಪ್ರಕರಣದ ಎಸ್‌ಡಿಪಿಐ ಸಂಘಟನೆಯ ಎಲ್ಲ ಆರೋಪಿಗಳನ್ನು ಹೆಚ್ಚುವರಿ ನಾಲ್ಕು ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ ತನಿಖಾಧಿಕಾರಿಗಳು ಆರೋಪಿಗಳು ಕೃತ್ಯಕ್ಕೂ ಮೊದಲು ಆರೋಪಿಗಳು ಕೆಲವೊಂದು ಕೋಡ್‌ವರ್ಡ್‌ಗಳ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಹೀಗಾಗಿ ಆರೋಪಿಗಳನ್ನು ನಾಲ್ಕು ದಿನಗಳ ವಶಕ್ಕೆ ನೀಡಬೇಕು ಎಂದು ತನಿಖಾಧಿ ಕಾರಿಗಳು ಮನವಿ ಮಾಡಿ ದರು. ಈ ಮನವಿ ಪುರಸ್ಕರಿಸಿದ ಕೋರ್ಟ್‌ ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದೆ. ಪೊಲೀಸ್‌ ಮೂಲಗಳ ಪ್ರಕಾರ ಆರೋಪಿಗಳು ತನಿಮ್‌(ಸಂಘಟನೆ), ಹಲಾಲ್‌ಕಟ್‌(ಮುಂಭಾಗದಿಂದ ಹೊಡೆಯುವುದು), ಬಿಲಾಲ್‌ಕಟ್‌(ಹಿಂಭಾಗದಿಂದ ಹೊಡೆಯುವುದು), ಮುರುಗಿ ಕಟ್‌( ವ್ಯಕ್ತಿ ನಡೆದು ಹೋಗುವಾಗ ಹೊಡೆಯುವುದು)

ಪಂಚರ್‌ ಕಟ್‌(ಡ್ರ್ಯಾಗರ್‌ನಿಂದ ಚುಚ್ಚುವುದು) ಹೀಗೆ ನಾನಾ ರೀತಿಯಲ್ಲಿ ಕೋಡ್‌ವರ್ಡ್‌ ಗಳನ್ನು ಇಟ್ಟುಕೊಂಡು ಕೃತ್ಯ ಎಸಗಲು ಸಜ್ಜಾಗಿದ್ದರು ಎಂದು ಹೇಳಲಾಗಿದೆ. ಎಸ್‌ಡಿಪಿಐನ ನಗರದ ಘಟಕದ ಸದಸ್ಯರಾದ ಆರ್‌.ಟಿ.ನಗರದ ಮೊಹಮ್ಮದ್‌ ಇರ್ಫಾನ್‌(33), ಸೈಯದ್‌ ಅಕ್ಬರ್‌(46), ಸನಾವುಲ್ಲಾ ಷರೀಫ್(28), ಲಿಂಗರಾಜುಪುರದ ಸೈಯದ್‌ ಸಿದ್ದಿಕ್‌ ಅಕ್ಬರ್‌(30), ಕೆ.ಜಿ.ಹಳ್ಳಿಯ ಅಕ್ಬರ್‌ ಬಾಷಾ(27) ಮತ್ತು ಶಿವಾಜಿನಗರದ ಸಾದಿಕ್‌ ಉಲ್‌ ಅಮೀನ್‌(39) ಈ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮುಸುಕಿನ ಗುದ್ದಾಟ: ಈ ಮಧ್ಯೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳ ಮುಂದಾಳತ್ವದಲ್ಲಿ ಬಾಂಗ್ಲಾದೇಶಿಯರು ವಾಸವಾಗಿರುವ ಶೆಡ್‌ಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತು ನಗರ ಪೊಲೀಸ್‌ ಇಲಾಖೆ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಪೊಲೀಸ್‌ ಇಲಾಖೆ ಅಧಿಕಾರಿಗಳು ಬಿಬಿಎಂಪಿ ಸೂಚನೆ ಮೇರೆಗೆ ತೆರವು ಕಾರ್ಯಕ್ಕೆ ಭದ್ರತೆ ನೀಡಲಾಗಿದೆ ಎನ್ನುತ್ತಿದ್ದಾರೆ. ಮತ್ತೂಂದೆಡೆ ಬಿಬಿಎಂಪಿ ಅಧಿಕಾರಿಗಳು ಪೊಲೀಸರೇ ಖುದ್ದಾಗಿ ತೆರವುಗೊಳಿಸುತ್ತಿದ್ದಾರೆ. ಜತೆಗೆ ನಿವೇಶನ ಮಾಲೀಕರಿಗೆ ನೋಟಿಸ್‌ ಕೂಡ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬೆಳ್ಳಂದೂರು ವಾರ್ಡ್‌ನಲ್ಲಿ ಅಕ್ರಮ ಬಾಂಗ್ಲಾವಲಸಿಗರು ನಿರ್ಮಿಸಿರುವ ಅನಧಿಕೃತ ಶೆಡ್‌ಗಳನ್ನು ತೆರವು ಮಾಡಬೇಕಿದ್ದು, ಈ ಸಂದರ್ಭದಲ್ಲಿ ಬಿಗಿ ಪೊಲೀಸ್‌ ಭದ್ರತೆ ನೀಡುವಂತೆ ಬಿಬಿಎಂಪಿಯ ಮಾರತ್ತಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಜ.18ರಂದು ಪತ್ರದ ಮೂಲಕ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿತ್ತು.
-ಎಂ.ಎನ್‌.ಅನುಚೇತ್‌, ವೈಟ್‌ಫೀಲ್ಡ್‌ ವಿಭಾಗ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next