Advertisement

ದಿಢೀರ್‌ ದಾಳಿ: ಕ್ವಿಂಟಲ್‌ನಷ್ಟು ಪ್ಲಾಸ್ಟಿಕ್‌ ವಶ

09:40 PM Jul 31, 2019 | Team Udayavani |

ಹುಣಸೂರು: ನಗರದ ವಿವಿಧೆಡೆ ನಗರಸಭೆ ಅಧಿಕಾರಿಗಳು ಬುಧವಾರ ದಿಢೀರ್‌ ದಾಳಿ ನಡೆಸಿ ಪ್ಲಾಸ್ಟಿಕ್‌ ಲೋಟ, ಕ್ಯಾರಿಬ್ಯಾಗ್‌ ವಶಕ್ಕೆ ಪಡೆದು ದಂಡ ವಿಧಿಸಿದರು.

Advertisement

ನಗರಸಭೆ ಪರಿಸರ ಎಂಜಿನಿಯರ್‌ ರೂಪಾ ನೇತೃತ್ವದಲ್ಲಿ ಸಿಬ್ಬಂದಿ ನಗರದ ಬೈಪಾಸ್‌ ರಸ್ತೆ, ಬಜಾರ್‌ ರಸ್ತೆ, ಜೆ.ಎಲ್‌.ಬಿ.ರಸ್ತೆಯ ಅಂಗಡಿ, ಹೋಟೆಲ್‌-ಬೇಕರಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಒಂದು ಕ್ವಿಂಟಲ್‌ನಷ್ಟು ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಮತ್ತು ಲೋಟಗಳನ್ನು ವಶಕ್ಕೆ ಪಡೆದರು. ಜೊತೆಗೆ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಕನಿಷ್ಠ ಮೊತ್ತದ ದಂಡ ವಿಧಿಸಿ ಎಚ್ಚರಿಕೆ ನೀಡಿದರು.

ಇನ್ನು ರಸ್ತೆ ಬದಿಯ ಪಾನಿಪುರಿ ಅಂಗಡಿ, ಫಾಸ್ಟ್‌ಫ‌ುಡ್‌ಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ವಶಕ್ಕೆ ಪಡೆದು, ಫಾಸ್ಟ್‌ಫ‌ುಡ್‌ ಗಾಡಿಗಳಲ್ಲಿ ಇಡ್ಲಿ ತಟ್ಟೆಗಳಿಗೆ ಪ್ಲಾಸ್ಟಿಕ್‌ ಬಳಸುತ್ತಿದ್ದುದ್ದನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿದರು.

ಈ ವೇಳೆ ಸಿಲ್ವರ್‌ ಜ್ಯುಬಿಲಿ ರಸ್ತೆಯ ರಾಜಸ್ಥಾನ ಮೂಲದ ಪಾನಿಪುರಿ ಅಂಗಡಿಯಲ್ಲಿ ಸಿಕ್ಕ ಪ್ಲಾಸ್ಟಿಕ್‌ ವಶಕ್ಕೆ ಪಡೆಯುತ್ತಿದ್ದ ವೇಳೆ ಪಾನಿಪುರಿ ತಿನ್ನುತ್ತಿದ್ದ ಕೆಲ ಯುವಕರು ಪ್ಲಾಸ್ಟಿಕ್‌ ಪಶಕ್ಕೆ ಪಡೆಯುತ್ತಿದ್ದೀರಾ, ದಂಡ ವಸೂಲಿಗೆ ಸ್ಥಳದಲ್ಲೇ ರಸೀದಿ ನೀಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಕಚೇರಿಯಲ್ಲಿ ಆನ್‌ಲೈನ್‌ ಮೂಲಕ ರಸೀದಿ ತೆಗೆದುಕೊಡುತ್ತೇವೆ. ನೀವು ಬ್ಯಾಂಕ್‌ ಮೂಲಕವೇ ದಂಡ ಪಾವತಿಸಬೇಕೆಂದು ತಿಳಿವಳಿಕೆ ನೀಡಿದರೂ ಒಪ್ಪದ ಯುವಕರು ಸ್ಥಳದಲ್ಲೇ ನೀಡಬೇಕೆಂದು ಬಿಗಿ ಪಟ್ಟು ಹಿಡಿದರು. ನಂತರ ಅಂಗಡಿ ಮುಚ್ಚಿಸಿ, ದಂಡ ಪಾವತಿಸಿದ ನಂತರವಷ್ಟೆ ಅಂಗಡಿ ನಡೆಸಲು ಅವಕಾಶ ನೀಡುವುದಾಗಿ ತಿಳಿಸಿದರು.

Advertisement

ದಾಳಿಯಲ್ಲಿ ಆರೋಗ್ಯ ನಿರೀಕ್ಷಕರಾದ ಸತೀಶ್‌, ಮೋಹನ್‌, ಸತೀಶ್‌. ಜಿ.ಎಸ್‌.ಜಗದೀಶ್‌ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಕಠಿಣ ಕ್ರಮ ಅನಿವಾರ್ಯ: ಈ ವೇಳೆ ಮಾತನಾಡಿದ ಪರಿಸರ ಎಂಜಿನಿಯರ್‌ ರೂಪಾ, ನಗರದಲ್ಲಿ ಪ್ರತಿದಿನ 20-23 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದೆ. ಹಸಿಕಸ ಮತ್ತು ಒಣಕಸ ಬೇರ್ಪಡಿಸಿ ನೀಡಬೇಕು. ನಾಗರಿಕರು ನಗರಸಭೆಯೊಂದಿಗೆ ಸಹಕಾರ ನೀಡಬೇಕು ಎದು ಮನವಿ ಮಾಡಿದರು.

ಹೋಟೆಲ್‌-ಬೇಕರಿ-ಅಂಗಡಿಗಳವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ, ನಿತ್ಯ ಬರುವ ಆಟೋಗಳಿಗೆ ನೀಡಬೇಕು ಹಾಗೂ ಪ್ಲಾಸ್ಟಿಕ್‌ ನಿಷೇಧವಿದ್ದರೂ ಅವ್ಯಾಹತವಾಗಿ ಬಳಕೆಯಾಗುತ್ತಿದೆ. ಹಸಿರು ನ್ಯಾಯಾಧಿಕರಣದ ಸೂಚನೆಯಂತೆ ಪ್ಲಾಸ್ಟಿಕ್‌ ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಾಗರಿಕರು ಸಹಕಾರ ನೀಡದಿದ್ದರೆ ಬಲವಂತದ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next