ಚಾಮರಾಜನಗರ: ಕೋವಿಡ್ ಪರೀಕ್ಷೆ ನಡೆಸಿ 1 ಗಂಟೆಯೊಳಗೆ ವರದಿ ನೀಡುವ 1 ಸಾವಿರ ರ್ಯಾಪಿಡ್ ಆ್ಯಂಟಿಜೆನ್ ಕಿಟ್‌ಗಳನ್ನು ಜಿಲ್ಲೆಗೆ ನೀಡಲಾಗಿದೆ. ಅತ್ಯಗತ್ಯ ವಿರುವ ಸಂದರ್ಭಗಳಲ್ಲಿ ಈ ಕಿಟ್‌ಗಳನ್ನು ಬಳಸಲಾಗುವುದು ಎಂದು ಶಿಕ್ಷಣ ಹಾಗೂ ಜಿಲ್ಲಾ ಸಚಿವ ಸುರೇಶ್‌ಕುಮಾರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಕೋವಿಡ್ ಮತ್ತು ಇತರೆ ಅಭಿವೃದ್ಧಿ ಕೆಲಸಗಳ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರ್ಯಾಪಿಡ್ ಆ್ಯಂಟಿಜೆನ್ ಕಿಟ್ ನಿಂದ ಅತಿ ಶೀಘ್ರ ಕೋವಿಡ್ ವರದಿ ಬರಲಿದೆ. ಇದನ್ನು ಹೃದ್ರೋಗ, ಕ್ಯಾನ್ಸರ್, ಡಯಾಲಿಸಿಸ್, ಐಎಲ್‌ಐ, ಸಾರಿ ಪ್ರಕರಣಗಳು, 70 ವರ್ಷದ ಮೇಲ್ಪಟ್ಟ ವ್ಯಕ್ತಿಗಳಿಗೆ, ಗರ್ಭಿಣಿಯರಿಗೆ, ಅನಾರೋಗ್ಯದಿಂದ ಮೃತರಾದವರ ಪರೀಕ್ಷೆಯನ್ನು ಈ ಕಿಟ್‌ಗಳಿಂದ ನಡೆಸಲಾಗುವುದು ಎಂದು ಹೇಳಿದರು.
ಶೀಘ್ರ ವರದಿಗೆ ಕ್ರಮ: ವಿಶೇಷ ವರ್ಗದವರು, ವಿವಿಧ ರೋಗಗಳಿಂದ ಬಳಲುತ್ತಿರುವ 32,405 ಜನರಿದ್ದು, ಇವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಗೊಳಪಡಿಸಲು ಕ್ರಮ ವಹಿಸಲಾಗುತ್ತಿದೆ. ಪರೀಕ್ಷೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ನಡೆಸಲು ಸೂಚಿಸಲಾಗಿದೆ. ಗಂಟಲು ದ್ರವ ಮಾದರಿ ಪರೀಕ್ಷೆಗಳು ಹೆಚ್ಚು ನಡೆಯಬೇಕು. ಪರೀಕ್ಷೆಗಳ ಫಲಿತಾಂಶ 24 ಗಂಟೆಯಿಂದ 48 ಗಂಟೆಯೊಳಗೆ ಬರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-209 ಗುಂಡಿಗಳಿಂದ ಕೂಡಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಒಂದು ವಾರದೊಳಗಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
22 ಕೆರೆ ಅಭಿವೃದ್ಧಿ: ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಮೊದಲು ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು. ಬಳಿಕ ಸಂಪೂರ್ಣ ಅಭಿವೃದ್ಧಿ ಕಾರ್ಯ ನಡೆಯಲಿದೆ. ಜಿಲ್ಲೆಯ 22 ಕೆರೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಇದಕ್ಕೆ ಸೆಸ್ಕ್ ಕೂಡ ಸಹಕಾರ ನೀಡುವುದಾಗಿ ತಿಳಿಸಿದೆ ಎಂದರು. ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದ್ದು, ಈ ಬಾರಿ ಉತ್ತಮ ಬೆಳೆಯಾಗುವ ನಿರೀಕ್ಷೆ ಇದೆ. ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಿಕೊಂಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ನರೇಂದ್ರ, ನಿರಂಜನ್‌ಕುಮಾರ್, ಮಹೇಶ್, ಜಿಪಂ ಸದಸ್ಯ ಬಾಲರಾಜು, ನಾಗರಾಜು (ಕಮಲ್), ಜಿಲ್ಲಾಧಿಕಾರಿ ಡಾ.ಎಂ. ಆರ್. ರವಿ, ಎಸ್ಪಿ ದಿವ್ಯಾ ಸಾರಾ ಥಾಮಸ್, ಎಎಸ್ಪಿ ಅನಿತಾ ಇತರರಿದ್ದರು.
ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಕಾಳಜಿಯಿಂದ ಚಿಕಿತ್ಸೆ ನೀಡಬೇಕು. ಪೌಷ್ಟಿಕ ಆಹಾರ ನೀಡಬೇಕು. ಆಸ್ಪತ್ರೆಯಲ್ಲಿ ಸ್ವತ್ಛತೆ ಕಾಪಾಡಬೇಕು. ಕುಡಿಯಲು ಶುದ್ಧ ನೀರು ಒದಗಿಸಬೇಕು. ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪ್ರತ್ಯೇಕ ತಂಡ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ಸುರೇಶ್ ಕುಮಾರ್, ಜಿಲ್ಲಾ ಸಚಿವ