Advertisement

Rapes: ಮಾನವೀಯ ನೆಲೆಗಟ್ಟುಗಳನ್ನೇ ನಾಶ ಮಾಡುತ್ತಿವೆ ಅತ್ಯಾಚಾರಗಳು

09:10 PM Aug 22, 2023 | Team Udayavani |

2012ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಅತಿಕ್ರೂರ ಅತ್ಯಾಚಾರ ಪ್ರಕರಣ ದೆಹಲಿಯಲ್ಲಿ ನಡೆದಿತ್ತು. ಆ ಪೈಶಾಚಿಕ ಘಟನೆ ಮಾನವೀಯ ಕಂಗಳಲ್ಲಿ ಅಶ್ರುಧಾರೆಯನ್ನೇ ಹರಿಸಿತ್ತು. ಹಾಗಂತ ದೇಶದಲ್ಲಿ ಸ್ಥಿತಿ ಬದಲಾಗಿದೆಯಾ ಎಂದು ಪ್ರಶ್ನಿಸಿಕೊಂಡರೆ ಇಲ್ಲವೆಂದೇ ಹೇಳಬೇಕಾಗುತ್ತದೆ. ದಿನನಿತ್ಯ ಎಲ್ಲಾದರೊಂದು ಕಡೆ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇನ್ನು ಹೊರಜಗತ್ತಿಗೆ ತಿಳಿಯದೇ ಒಳಗೊಳಗೇ ಮುಗಿದುಹೋಗುವ ಘಟನೆಗಳಂತೂ ಲೆಕ್ಕವಿಲ್ಲದಷ್ಟಿವೆ. ಇಂತಹದ್ದೊಂದು ಕ್ರೂರ ಮನಃಸ್ಥಿತಿಯನ್ನು ಇಡೀ ದೇಶವಾಗಿ ನಾವು ಬದಲಿಸಿಕೊಳ್ಳಲೇಬೇಕಾಗಿದೆ. ಒಂದು ಆರೋಗ್ಯವಂತ ದೇಶಕ್ಕೆ ಈ ರೀತಿಯ ಮನಸ್ಸು ಅನಿವಾರ್ಯ ಮತ್ತು ಅಗತ್ಯ.

Advertisement

ಇತ್ತೀಚೆಗೆ ದೆಹಲಿಯಲ್ಲಿ ಒಂದು ಅತ್ಯಾಚಾರ ಪ್ರಕರಣ ಬಯಲಾಯಿತು. ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತನ್ನ ಗೆಳೆಯನ ಮಗಳನ್ನೇ ಅತ್ಯಾಚಾರಕ್ಕೊಳಪಡಿಸಿದ್ದಾನೆ. ಗೆಳೆಯ ತೀರಿಕೊಂಡನೆಂದು, 14 ವರ್ಷದ ಹುಡುಗಿಯನ್ನು ಮನೆಯಲ್ಲಿ ತಂದಿಟ್ಟುಕೊಂಡ ಪರಮೋದಯ್‌ ಖಾಕಾ, ಆಕೆಯನ್ನು ಹಲವು ಬಾರಿ ಅತ್ಯಾಚಾರಕ್ಕೊಳಪಡಿಸಿದ್ದಾನೆ. ಗರ್ಭಿಣಿಯಾದ ಆಕೆಗೆ ಗರ್ಭಪಾತ ಮಾಡಿಸಿದ್ದು ಆತನ ಪತ್ನಿ! ಇಂತಹದ್ದೊಂದು ವಿಕೃತ ಘಟನೆ ಬಯಲಾಗುತ್ತಿದ್ದಂತೆ, ಹೊರಜಗತ್ತಿನಲ್ಲಿ ಕೂಗಾಟ, ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಹುಡುಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಸ್ತುಸ್ಥಿತಿಯಲ್ಲಿ ಯುವತಿಯ ಪರಿಸ್ಥಿತಿ ಹೇಗಿದೆ ಎನ್ನುವುದು ಹೊರಜಗತ್ತಿಗೆ ಗೊತ್ತಾಗಿಲ್ಲ.

2020 -21ರಲ್ಲಿ ಹಲವು ಬಾರಿ ಹುಡುಗಿಯ ಮೇಲೆ ಅತ್ಯಾಚಾರವಾಗಿದೆ. ಆಕೆಗೆ ಉದ್ದೀಪನ ನೀಡಿ, ನಂತರ ಆತ ತನ್ನ ವಿಕೃತಿಯನ್ನು ತೀರಿಸಿಕೊಂಡಿದ್ದಾನೆ. ಅದಕ್ಕೆ ಆತನ ಪತ್ನಿಯೇ ಬೆಂಬಲ ನೀಡಿದ್ದಾಳೆನ್ನುವುದು ಅತ್ಯಂತ ಹತಾಶ ಸ್ಥಿತಿಗೆ ನಮ್ಮನ್ನು ನೂಕುತ್ತದೆ. ಈ ಪ್ರಕರಣ ಅತ್ಯಂತ ತಡವಾಗಿ ಬೆಳಕಿಗೆ ಬಂದಿದೆ.

ಇನ್ನು ಮೊನ್ನೆ ಭಾನುವಾರ ಮೂವರು ವ್ಯಕ್ತಿಗಳು ಹೈದರಾಬಾದ್‌ನಲ್ಲಿ ಮನೆಯೊಂದಕ್ಕೆ ನುಗ್ಗಿ 15 ವರ್ಷದ ಅಪ್ರಾಪ್ತ ವಯಸ್ಕ ಯುವತಿಯನ್ನು ಅತ್ಯಾಚಾರಕ್ಕೊಳಪಡಿಸಿದ್ದಾರೆ. ಮೇಲಿನೆರಡೂ ಅಪ್ರಾಪ್ತರ ಮೇಲೆಯೇ ಆಗಿರುವ ದೌರ್ಜನ್ಯ.

ಇದನ್ನು ಕೇವಲ ಅತ್ಯಾಚಾರ ಪ್ರಕರಣ ಎಂದು ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಲ್ಲಿ ಹಲವು ಸೂಕ್ಷ್ಮಗಳಿವೆ. ಮಾನವೀಯ ಸಂವೇದನೆಯೇ ನಾಶವಾಗುತ್ತಿರುವ, ಸಂಬಂಧಗಳೇ ಮೌಲ್ಯ ಕಳೆದುಕೊಳ್ಳುತ್ತಿರುವ, ಪರಸ್ಪರ ಅಪನಂಬಿಕೆ ಹೆಚ್ಚುತ್ತಿರುವ ದುಃಸ್ಥಿತಿ ಉಂಟಾಗಿದೆ. ತಂದೆಯ ಸ್ಥಾನದಲ್ಲಿರಬೇಕಾಗಿದ್ದ ವ್ಯಕ್ತಿ ನಡೆದುಕೊಂಡಿರುವ ರೀತಿ ಎಂತಹ ಕಲ್ಲುಹೃದಯವನ್ನೂ ಕರಗಿಸದೇ ಇರದು. ನಮ್ಮ ನೈತಿಕ ಶಿಕ್ಷಣದಲ್ಲಿ ಇಂತಹ ವಿಚಾರಗಳನ್ನು ತಿಳಿಸದೇ ಹೋದರೆ, ಮಕ್ಕಳಾಗಿರುವಾಗಲೇ ಅರಿವು ಮೂಡಿಸದೇ ಹೋದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಭೀಕರವಾಗುವುದರಲ್ಲಿ ಸಂಶಯವೇ ಇಲ್ಲ.

Advertisement

ಭಾರತದಲ್ಲಿ ಮಹಿಳೆಯರಿಗೆ ನಿಜವಾಗಿಯೂ ಸುರಕ್ಷತೆ ಇದೆಯಾ ಎಂಬುವುದು ಇನ್ನೊಂದು ಪ್ರಶ್ನೆ. ಎಲ್ಲ ಸಂದರ್ಭಗಳಲ್ಲಿ ಪೊಲೀಸರೇ ಜಾಗರೂಕರಾಗಿದ್ದು ರಕ್ಷಿಸಲು ಸಾಧ್ಯವೇ ಇಲ್ಲ. ಒಂದು ಸಮಾಜವಾಗಿ ನಾವೇ ಒಗ್ಗೂಡಬೇಕಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅಪರಿಚಿತರಲ್ಲ, ನಂಬಿರುವ ವ್ಯಕ್ತಿಗಳೇ ವಂಚಿಸುತ್ತಿದ್ದಾರೆ. ಇದು ನಂಬಿಕೆಗಳನ್ನೇ ಅಲ್ಲಾಡಿಸುತ್ತಿದೆ. ನಾವು ಎಚ್ಚರಗೊಳ್ಳಲೇಬೇಕು, ಕೇವಲ ಸರ್ಕಾರವನ್ನೂ ದೂಷಿಸಿ ಪ್ರಯೋಜನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next