ಮಂಗಳೂರು: ಅಪ್ರಾಪ್ತ ವಯಸ್ಸಿನ ಪುತ್ರಿ ಮೇಲೆ ನಿರಂತರ ಅತ್ಯಾಚಾರ ಮಾಡಿ ಆಕೆ ಮಗುವಿಗೆ ಜನ್ಮ ನೀಡಿದ ಅಪರಾಧವು ಮಂಗಳೂರಿನ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ (ಪೋಕ್ಸೋ)ದಲ್ಲಿ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಕಾದಿರಿಸಿದೆ. ಉತ್ತರ ಭಾರತ ಮೂಲದ ನಿವಾಸಿಯಾಗಿದ್ದು, ಪ್ರಸ್ತುತ ನಗರದಲ್ಲಿ ವಾಸವಿರುವ ಕಿಶೋರ್ ಭಯ್ನಾ (36) ಅಪರಾಧಿಯಾಗಿದ್ದು, ಈತ ತನ್ನ 13 ವರ್ಷದ ಪುತ್ರಿ ಮೇಲೆ ಅತ್ಯಾಚಾರ ಎಸಗಿದ್ದ.
ಆರೋಪಿ ವಿರುದ್ಧ ಐಪಿಸಿ 376 (ಅತ್ಯಾಚಾರ), 506 (ಕೊಲೆ ಬೆದರಿಕೆ) ಹಾಗೂ ಪೋಕ್ಸೋ ಕಾಯಿದೆಯ 5 ಮತ್ತು 6ಕಲಂ (ನಿರಂತರ ಲೈಂಗಿಕ ದೌರ್ಜನ್ಯ) ಅನ್ವಯ ಅಪರಾಧ ಸಾಬೀತಾಗಿದೆ ಎಂದು 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಶುಕ್ರವಾರ ತೀರ್ಪು ನೀಡಿದರು.
ಪ್ರಕರಣದ ವಿವರ: 2016ರಲ್ಲಿ ಕಿಶೋರ್ ಭಯ್ನಾ ತನ್ನ ಪತ್ನಿ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾಗ ಪುತ್ರಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ್ದ. ಆರೋಪಿ ಕೊಲೆ ಬೆದರಿಕೆಯನ್ನೂ ಹಾಕಿದ್ದರಿಂದ ಆಕೆ ಹೆದರಿ ಸುಮ್ಮನಾಗಿದ್ದಳು. ಬಳಿಕ ಆತ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದರ ಪರಿಣಾಮ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಆರೋಪಿ ವಿರುದ್ಧ ಬಾಲಕಿಯ ತಾಯಿ (ಕಿಶೋರ್ ಭಯ್ನಾನ ಪತ್ನಿ) ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇನ್‌ಸ್ಪೆಕ್ಟರ್ ಕಲಾವತಿ ಅವರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 12 ಮಂದಿ ಸಾಕ್ಷಿದಾರರನ್ನು ಹಾಗೂ 24 ದಾಖಲೆಗಳನ್ನು ಪರಿಗಣಿಸ ಲಾಗಿದೆ. ಮಗುವಿನ ಡಿಎನ್‌ಎ ಪರೀಕ್ಷೆಯಲ್ಲೂ ಕಿಶೋರ್ ಭಯ್ನಾವು ಜೈವಿಕ ತಂದೆ ಎನ್ನುವುದು ಸಾಬೀತಾಗಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು.
ಬಾಲಕಿಗೆ ಲೈಂಗಿಕ ಕಿರುಕುಳ : 10 ವರ್ಷ ಸಜೆ, ದಂಡ
ಕಾಸರಗೋಡು: ಪರಿಶಿಷ್ಟ ಜಾತಿಯ 14ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಂಗಲ್ಪಾಡಿ ಕುಬಣೂರು ನಿವಾಸಿ ಯಶವಂತ್ ಯಾನೆ ಅಪ್ಪು (35) ಎಂಬಾ ತ ನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆೆಶನ್ಸ್ ನ್ಯಾಯಾ ಲಯ(ಪ್ರಥಮ) ಪೋಕ್ಸೋ ಕಾನೂನಿನಂತೆ 10 ವರ್ಷ ಸಜೆ ಮತ್ತು 25 ಸಾ.ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ 2 ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು.
ಮಂಗಲ್ಪಾಡಿ ಗ್ರಾ. ಪಂ. ವ್ಯಾಪ್ತಿಯ ಬಾಲಕಿಗೆ 2014ರ ಡಿಸೆಂಬರ್ ಮತ್ತು ಜನವರಿ 19 ರ ವರೆಗೆ ಶಾಲೆಯೊಂದರ ಪರಿಸರದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ನೀಡಲಾದ ದೂರಿನಂತೆ ಯಶವಂತ್ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಕಾಯ್ದೆ ಪ್ರಕಾರ ಕೇಸು ದಾಖಲಿಸಿದ್ದರು.