ಭರಮಸಾಗರ: ಜಿಪಂ ಸಿರಿಗೆರೆ ಕ್ಷೇತ್ರದ ಸದಸ್ಯ ಟಿ.ಎಂ.ಪಿ.ತಿಪ್ಪೇಸ್ವಾಮಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿ ಶಿಕ್ಷಕಿಯೊಬ್ಬರು ಭರಮಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿರಿಗೆರೆ ನಿವಾಸಿ ಸಂತ್ರಸ್ತ ಶಿಕ್ಷಕಿ ಮತ್ತು ಜಿಪಂ ಸದಸ್ಯನ ನಡುವೆ ಹಣಕಾಸು ವ್ಯವಹಾರವಿತ್ತು. ಹತ್ತು ತಿಂಗಳ ಹಿಂದೆ ಜಿಪಂ ಸದಸ್ಯ 10 ಲಕ್ಷ ರೂ.ಗಳನ್ನು ಶಿಕ್ಷಕಿಯಿಂದ ಪಡೆದುಕೊಂಡಿದ್ದರು.
ಇದರಲ್ಲಿ 4 ಲಕ್ಷ ರೂ. ಹಿಂದಿರುಗಿಸಿ ಮತ್ತೆ ಲಕ್ಷ ರೂ. ಪಡೆದುಕೊಂಡಿದ್ದರು. ತಮಗೆ ಹಣದ ಅವಶ್ಯಕತೆ ಇದ್ದು, ಸಾಲ ಮರಳಿಸುವಂತೆ ಶಿಕ್ಷಕಿ ಕೇಳಿಕೊಂಡಿದ್ದರಿಂದ ಹಣ ನೀಡುವುದಾಗಿ ಜಿಪಂ ಸದಸ್ಯ ಭರವಸೆ ನೀಡಿದ್ದರು ಎನ್ನಲಾಗಿದೆ. ಜ.18ರಂದು ಸಂಜೆ ಶಿಕ್ಷಕಿಗೆ ದೂರವಾಣಿ ಕರೆ ಮಾಡಿದ ತಿಪ್ಪೇಸ್ವಾಮಿ, ಹೊಸದಾಗಿ ಕಟ್ಟುತ್ತಿರುವ ತಮ್ಮ ಮನೆ ಬಳಿ ಬಂದು ಹಣ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು.
ಅವರು ಹೇಳಿದ ಸ್ಥಳಕ್ಕೆ ತೆರಳಿದಾಗ ಮನೆಯೊಳಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ಆರೋಪಿಸಿದ್ದಾರೆ. ಅತ್ಯಾಚಾರ ನಡೆದ ಸ್ಥಳದಲ್ಲಿ ಯಾರೂ ಇರಲಿಲ್ಲ. ಚಿಕಿತ್ಸೆಗೆ ಚಿತ್ರದುರ್ಗದ ಆಸ್ಪತ್ರೆಗೆ ತೆರಳಲು ಪರಿಚಿತ ಬಾಡಿಗೆ ಕಾರನ್ನು ಕರೆಸಿಕೊಂಡು ಹೋಗುವಾಗ ತಿಪ್ಪೇಸ್ವಾಮಿ ಬಲವಂತವಾಗಿ ತಡೆದಿದ್ದಾರೆ. ಬಳಿಕ ನಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂದು ಗೌರಮ್ಮನಹಳ್ಳಿ ಗೇಟ್ ಬಳಿ ಕಾರಿಗೆ ಅಡ್ಡಗಟ್ಟಿ ನನಗೆ ಬೈದು ನೂಕಾಡಿ ಮೊಬೈಲ್ ಕಿತ್ತುಕೊಂಡಿದ್ದಾರೆ.
ಕಾರು ಚಾಲಕನಿಗೆ ವಾಪಸ್ ಸಿರಿಗೆರೆಗೆ ಕರೆದುಕೊಂಡು ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಕಾರು ಚಾಲಕ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆ ತಂದು ದಾಖಲಿಸಿದ್ದಾನೆ. ನೀನೇನಾದರೂ ಈ ಕುರಿತು ದೂರು ಕೊಟ್ಟರೆ ನಿನ್ನ ಮತ್ತು ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ತಿಪ್ಪೇಸ್ವಾಮಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆಂದು ಪೊಲೀಸರು ಹೇಳಿದರು.