Advertisement

ಮಹಿಳೆಯ ಅತ್ಯಾಚಾರಗೈದು ಹತ್ಯೆ ಆರೋಪಿಯ ಅಪರಾಧ ಕೃತ್ಯ ಸಾಬೀತು

12:46 AM Jun 27, 2023 | Team Udayavani |

ಮಂಗಳೂರು: ಮಹಿಳೆಯ ಅತ್ಯಾಚಾರ, ಹತ್ಯೆ ನಡೆಸಿದ ಪ್ರಕರಣ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಶಿಕ್ಷೆಯ ಪ್ರಮಾಣದ ವಿಚಾರಣೆ ಮಂಗಳವಾರ ನಡೆಯಲಿದೆ.

Advertisement

ಮಂಜೇಶ್ವರ ಪಾತೂರು ವರ್ಕಾಡಿ ಬದಿಮಾಲೆ ನಿವಾಸಿ ಮಹಮ್ಮದ್‌ ಅಶ್ರಫ್‌ ಯಾನೆ ಅಶ್ರಫ್‌ (33) ಶಿಕ್ಷೆಗೊಳಗಾದನು. ಬಾಳೆಪುಣಿ ಗ್ರಾಮದ ಬೆಳ್ಕೆರಿಯ ಮಹಿಳೆ ಹತ್ಯೆಯಾದವರು.

ಮಹಮ್ಮದ್‌ ಅಶ್ರಫ್‌ ಕೂಲಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಈತ ಮಹಿಳೆಯ ಸಹೋದರನ ಮನೆಗೆ ತೋಟದ ಕೆಲಸಕ್ಕೆ ಹೋಗಿದ್ದು, ಈ ಸಂದರ್ಭ ಮಹಿಳೆ ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ್ದ. ಒಂದು ದಿನ ಮಹಿಳೆ ವಾಸವಿದ್ದ ಮನೆಯ ಬಾವಿಗೆ ಹೆಬ್ಟಾವು ಬಿದ್ದಿತ್ತು. ಅದನ್ನು ತೆಗೆಯಲು ಹೋದಾಗ ಪರಿಚಯ ಮಾಡಿಕೊಂಡಿದ್ದ. ಮಹಿಳೆಯನ್ನು ಅತ್ಯಾಚಾರಗೈಯುವ ಉದ್ದೇಶದಿಂದ 2020ರ ಸೆ. 24ರಂದು ಬೆಳಗ್ಗೆ 10 ಗಂಟೆಗೆ ಮಹಿಳೆಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಚಿಲಕ ಹಾಕಿದ್ದ. ಬಾತ್‌ರೂಮ್‌ನಲ್ಲಿ ಕ್ಲೀನ್‌ ಮಾಡುತ್ತಿದ್ದ ಮಹಿಳೆಯನ್ನು ಹಿಂದಿನಿಂದ ಬಿಗಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದ್ದ. ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಅತ್ಯಾಚಾರವೆಸಗಿದ್ದಾನೆ. ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ.

ಮಹಿಳೆ ಮೇಲೆ ಬೆಂಕಿ ಹಚ್ಚಿದ್ದ
ಹತ್ಯೆಯ ಬಳಿಕ ಆರೋಪಿ ಅಶ್ರಫ್‌ ಮಹಿಳೆಯ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನು ತೆಗೆದಿದ್ದ. ಮನೆಯಲ್ಲಿದ್ದ 18,000 ರೂ. ದೋಚಿದ್ದ. ಬಳಿಕ ಮಹಿಳೆಯ ಮೈಮೇಲೆ ಬಟ್ಟೆ ಹಾಕಿ ಬೆಂಕಿ ಕೊಟ್ಟು ಸಾಕ್ಷ್ಯ ನಾಶ ಮಾಡಿದ್ದ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಕೊಣಾಜೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು 2020ರ ಜು. 13ರಂದು ಬಂಧಿಸಿದ್ದರು.

6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್‌.ವಿ. ಪ್ರಕರಣದ ಸಮಗ್ರ ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಐಪಿಸಿ 376 (ಅತ್ಯಾಚಾರ), ಐಪಿಸಿ 302 (ಕೊಲೆ) ಪ್ರಕರಣವನ್ನು ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್‌ ಆಯುಕ್ತ ರಂಜಿತ್‌ ಕುಮಾರ್‌ ಬಂಡಾರು ವಿಶೇಷ ತನಿಖಾಧಿಕಾರಿಯಾಗಿದ್ದು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Advertisement

ಆರೋಪಿಯ ಅತ್ಯಾಚಾರ, ಕೊಲೆ ಪ್ರಕರಣಗಳು ಸಾಬೀತಾಗಲು ಬಲವಾದ ಸಾಕ್ಷ್ಯ, ದಾಖಲೆಗಳು ಕಾರಣವಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ಡಾ| ಮಹಾಬಲ ಶೆಟ್ಟಿ ಮತ್ತು ಡಾ| ಸೂರಜ್‌ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯ ಹೇಳಿದ್ದರು. ಸರಕಾರದ ಪರ ಅಭಿಯೋಜಕಿ ಜ್ಯೋತಿ ಪ್ರಮೋದ್‌ ನಾಯಕ್‌ ಮತ್ತು ಬಿ. ಶೇಖರ್‌ ಶೆಟ್ಟಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next