ಲಂಡನ್/ವಾಷಿಂಗ್ಟನ್ : ವಿಶ್ವಾದ್ಯಂತದ 150ಕ್ಕೂ ಅಧಿಕ ದೇಶಗಳ ಸುಮಾರು ಎರಡು ಲಕ್ಷ ಕಂಪ್ಯೂಟರ್‌ಗಳನ್ನು ಒತ್ತೆ ಇರಿಸಿಕೊಂಡಿರುವ ರಾನ್‌ಸಮ್‌ವೇರ್ ದಾಳಿಯು ಉತ್ತರ ಕೊರಿಯದೊಂದಿಗೆ ನಂಟು ಹೊಂದಿರುವಂತೆ ತೋರಿ ಬರುತ್ತಿದೆ ಎಂಬುದಾಗಿ ಗೂಗಲ್ ಕಂಪೆನಿಯಲ್ಲಿ ಸೈಬರ್ ಭದ್ರತಾ ಸಂಶೋಧಕರಾಗಿರುವ ಭಾರತೀಯ ನೀಲ್ ಮೆಹ್ತಾ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ನೀಲ್ ಮೆಹ್ತಾ ಸಂಶೋಧಿಸಿರುವ ಪ್ರಕಾರ ಉತ್ತರ ಕೊರಿಯದ ಪರವಾಗಿ ಕೆಲಸ ಮಾಡುತ್ತಿರುವ ಕುಖ್ಯಾತ ಲಾಝರಸ್ ಸಮೂಹವು ಈ ರಾನ್‌ಸಮ್‌ವೇರ್ ದಾಳಿಯ ಹಿಂದಿರುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ವನ್ನಾ ಕ್ರಿಪ್ಟ್ ನಲ್ಲಿ ಬಳಸಲಾಗಿರುವ ಕೋಡಿಂಗ್ ಮತ್ತು ಟೂಲ್ಸ್‌ಗಳನ್ನೇ ಬಳಸಿಕೊಂಡು ಈ ಹಿಂದೆಯೂ ಲಾಝರಸ್ ಹ್ಯಾಕಿಂಗ್ ಸಮೂಹ ಈ ರೀತಿಯ ಕುತಂತ್ರಾಂಶವನ್ನು ರೂಪಿಸಿದೆ ಎಂದು ನೀಲ್ ಮೆಹ್ತಾ ಹೇಳಿದ್ದಾರೆ. ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮನ್ನು ಹ್ಯಾಕ್ ಮಾಡುವುದಕ್ಕೆ ವನ್ನಾ ಕ್ರಿಪ್ಟ್ ಬಳಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ನೀಲ್ ಮೆಹ್ತಾ ಅವರು ಬ್ರಿಟಿಷ್ ಕೊಲಂಬಿಯಾ ಯುನಿವರ್ಸಿಟಿಯ ಪದವೀಧರರಾಗಿದ್ದಾರೆ ಮತ್ತು ಈ ಹಿಂದೆ ಐಬಿಎಂ ಇಂಟರ್‌ನೆಟ್ ಸೆಕ್ಯುರಿಟಿ ಸಿಸ್ಟಮ್‌ನಲ್ಲಿ ಕೆಲಸ ಮಾಡಿದವರಾಗಿದ್ದಾರೆ.
ಮೆಹ್ತಾ ಅವರು ವನ್ನಾ ಕ್ರಿಪ್ಟ್ ರಾನ್‌ಸಮ್‌ದಾಳಿಗೆ ರೂಪಿಸಲಾದ ಕುತಂತ್ರಾಂಶಕ್ಕೂ ಕುಖ್ಯಾತ ಲಾಝರಸ್ ಸಮೂಹದ ಈ ಹಿಂದಿನ ಕುತಂತ್ರಾಂಶಕ್ಕೂ ಇರುವ ನಿಕಟ ಹೋಲಿಕೆಯನ್ನು ತೋರಿಸಲು ಟ್ವಿಟರ್‌ನಲ್ಲಿ ತಾನು ಪತ್ತೆಹಚ್ಚಿದ ಕೋಡನ್ನು ಪೋಸ್ಟ್ ಮಾಡಿದ್ದಾರೆ.