Advertisement

ರಾನ್ಸಂವೇರ್ ದಾಳಿ ಭೀತಿ; ದೇಶದ ಹಲವೆಡೆ ಎಟಿಎಂ ಸ್ಥಗಿತ

03:45 AM May 16, 2017 | Team Udayavani |

ನವದೆಹಲಿ: ಜಗತ್ತಿನ ಸೈಬರ್‌ ಜಗತ್ತು “ವಾನಕ್ರೈ ರ್ಯಾನ್ಸಂವೇರ್‌’ ದಾಳಿಗೆ ಕಳೆದ ಶುಕ್ರವಾರದಿಂದಲೇ ತುತ್ತಾಗಿರುವ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಸೋಮವಾರ ಎಟಿಎಂಗಳು ತಮ್ಮ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

Advertisement

ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ನಾಗರಿಕರು ಹಣಕ್ಕಾಗಿ ಹತ್ತಾರು ಎಟಿಎಂಗಳನ್ನು ಸುತ್ತಾಡಿ ಖಾಲಿ ಕೈಯಲ್ಲಿ ಮರಳಿದ ಪ್ರಸಂಗಗಳೂ ವರದಿಯಾಗಿವೆ. ಈ ಮಾಲ್‌ವೇರ್‌ ಮೈಕ್ರೋಸಾಫ್ಟ್ನ ವಿಂಡೋಸ್‌ ಎಕ್ಸ್‌ಪಿ ಸಿಸ್ಟಮ್‌ಗಳ ಮೇಲೆಯೇ ಪ್ರಮುಖ ದಾಳಿ ಮಾಡುತ್ತಿದೆ ಎನ್ನುವುದು. ಏಕೆಂದರೆ ಇಂದು ದೇಶದಲ್ಲಿನ 2.25 ಲಕ್ಷ ಎಟಿಎಂಗಳಲ್ಲಿ 60 ಪ್ರತಿಶತದಷ್ಟು ಯಂತ್ರಗಳು ವಿಂಡೋಸ್‌ ಎಕ್ಸ್‌ಪಿ ತಂತ್ರಾಂಶವನ್ನೇ ಬಳಸುತ್ತಿವೆ!  ಈ ಕಾರಣಕ್ಕಾಗಿಯೇ ಬ್ಯಾಂಕುಗಳ ಕಾರ್ಯನಿರ್ವಹಣೆ ಮೇಲೆ ಆತಂಕದ ಛಾಯೆ ಎದುರಾಗಿತ್ತು. “ಎಟಿಎಂಗಳಲ್ಲಿ ತ್ವರಿತವಾಗಿ ವಿಂಡೋಸ್‌ ಪ್ಯಾಚಸ್‌(ದೋಷ ಸರಿಪಡಿಸುವ ಸಾಫ್ಟ್ವೇರ್‌) ಅನ್ನು ಅಪ್ಡೆàಟ್‌ ಮಾಡಿ’ ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್‌ಗಳಿಗೂ ಸಂದೇಶ ಕಳುಹಿಸಿದೆ.

ಆದರೆ, ಈ ಜಾಗತಿಕ “ಇ ಒತ್ತೆ’ ದಾಳಿಯಿಂದ ಭಾರತಕ್ಕೆ ಹೆಚ್ಚು ಹಾನಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಈ ನಡುವೆಯೂ ರ್ಯಾನ್ಸಂವೇರ್‌ನಿಂದ ಭಾರತದಲ್ಲಿ ಯಾವ ರೀತಿಯಲ್ಲಿ ತೊಂದರೆಯನ್ನುಂಟು ಮಾಡುತ್ತಿದೆ ಎನ್ನುವುದರ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಕೆಲವೇ ದಿನಗಳಲ್ಲಿ ತಿಳಿಯಲಿದೆ ಎನ್ನುವುದು ಸೈಬರ್‌ ಭದ್ರತಾ ಪರಿಣಿತರ ಅಭಿಪ್ರಾಯವಾಗಿದೆ.

ಅಮೆರಿಕ, ಇಂಗ್ಲೆಂಡ್‌, ರಷ್ಯಾ ಸೇರಿದಂತೆ ಜಗತ್ತಿನ 150ಕ್ಕೂ ಹೆಚ್ಚು ರಾಷ್ಟ್ರಗಳ 2 ಲಕ್ಷ ಸಿಸ್ಟಮ್‌ಗಳನ್ನು ಒತ್ತೆಯಾಗಿಟ್ಟುಕೊಂಡು, ವೇಗವಾಗಿ ಹರಡುತ್ತಿರುವ ಈ ಮಾಲ್‌ವೇರ್‌ (ದುರುದ್ದೇಶಪೂರಿತ ಸಾಫ್ಟ್ವೇರ್‌)ನ ಪ್ರಭಾವ ಭಾರತೀಯ ಸೈಬರ್‌ ಕ್ಷೇತ್ರವನ್ನೂ ಕಂಗಾಲಾಗಿಸಿದೆ. ಭಾನುವಾರ ಆಂಧ್ರಪ್ರದೇಶದ ಪೊಲೀಸ್‌ ಇಲಾಖೆಯ ಕಂಪ್ಯೂಟರ್‌ ದಾಖಲೆಗಳನ್ನು ಹೈಜಾಕ್‌ ಮಾಡಿದ್ದ “ವಾನಕ್ರೈ’, ಈಗ ಕೇರಳ ಮತ್ತು ಪಶ್ಚಿಮ ಬಂಗಾಳದ ಕೆಲವು ಸರ್ಕಾರಿ ಇಲಾಖೆಗಳಲ್ಲೂ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಎಟಿಎಂಗಳಿಗೆಷ್ಟಿದೆ ಅಪಾಯ?
ಎಟಿಎಂಗಳೆಲ್ಲ ರ್ಯಾನ್ಸಂವೇರ್‌ ದಾಳಿಗೆ ತುತ್ತಾದರೆ ಹೇಗೆ ಎಂಬ ಭಯ ಸಾರ್ವಜನಿಕರನ್ನು ಕಾಡುತ್ತಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ ಎನ್ನುವುದು ಸೈಬರ್‌ ತಜ್ಞರ ಅಭಿಪ್ರಾಯ. “ರ್ಯಾನ್ಸಂವೇರ್‌ ದಾಳಿಕೋರರ ಉದ್ದೇಶ ಒಂದು ಸಿಸ್ಟಂನಲ್ಲಿನ ಪ್ರಮುಖ ದಾಖಲೆಗಳನ್ನು ಒತ್ತೆಯಾಗಿಟ್ಟುಕೊಂಡು, ಹಣ ವಸೂಲು ಮಾಡುವುದು. ಆದರೆ ಎಟಿಎಂಗಳಲ್ಲಿ ಬಳಕೆದಾರರ ಮಾಹಿತಿ ದಾಖಲಾಗಿರುವುದಿಲ್ಲ. ಈ ಕಾರಣಕ್ಕೇ ಸೈಬರ್‌ ದಾಳಿಕೋರರ ಕಣ್ಣು ಬ್ಯಾಂಕುಗಳತ್ತ ಹರಿಯಬಹುದೇ ಹೊರತು, ಎಟಿಎಂಗಳ ಮೇಲೆ ದಾಳಿಯಾಗುವುದು ಅನುಮಾನ’ ಎನ್ನುತ್ತಾರೆ.

Advertisement

ಆದರೂ ಮುನ್ನೆಚ್ಚರಿಗೆ ಕ್ರಮವಾಗಿ ಸೈಬರ್‌ ಭದ್ರತಾ ಪಡೆ ರಾಷ್ಟ್ರದ ಬ್ಯಾಂಕುಗಳು, ಷೇರುಮಾರುಕಟ್ಟೆ ಸೇರಿದಂತೆ ಇತರೆ ಪ್ರಮುಖ ಸಂಸ್ಥೆಗಳಿಗೆ ಮೈಕ್ರೋಸಾಫ್ಟ್ನ ಪ್ಯಾಚ್‌ಅಪ್‌ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದೆ.

ಮತ್ತೆ ಜೋರಾಗಲಿದೆಯೇ ದಾಳಿ?
ಅಚಾನಕ್ಕಾಗಿ ವಾನಾಕ್ರೈ ಹರಡುವಿಕೆಯನ್ನು ತಪ್ಪಿಸಿ, ಸುಮಾರು 1 ಲಕ್ಷ ಕಂಪ್ಯೂಟರ್‌ಗಳನ್ನು ಬಚಾವು ಮಾಡಿದ್ದ ಮಾರ್ಕಸ್‌ ಹಚಿನ್ಸ್‌  ಎಂಬ ಬ್ರಿಟನ್‌ನ 22 ವರ್ಷದ ಯುವಕ  “ಸೈಬರ್‌ ದಾಳಿಕೋರರು ಹೊಸ ರೂಪದೊಂದಿಗೆ ಆಕ್ರಮಣ ಮಾಡುವ ಸಾಧ್ಯತೆಯಿದೆ. ನಾನೀಗ ಕಂಡು ಹಿಡಿದಿರುವ ಹುಳುಕನ್ನು ಸರಿಪಡಿಸಿಕೊಂಡು ಅವರು ಮತ್ತೆ ವಾನಕ್ರೈ ನ ಹೊಸ ಅಲೆಯೊಂದಿಗೆ ಜಗತ್ತನ್ನು ಅಪ್ಪಳಿಸಬಹುದು’ ಎಂದು ಎಚ್ಚರಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next