ಬದುಕೋದು ನಿನ್ನೊಂದಿಗೇ ಎಂದು ನಿರ್ಧರಿಸಿದ ಆಗಿದೆ. ಇನ್ನಾದ್ರೂ ಲೈಫ್ ಬಗ್ಗೆ ಸೀರಿಯಸ್ ಆಗು. ಓಹೋ ಅನ್ನುವಷ್ಟಲ್ಲದಿದ್ದರೂ ಓಕೆ ಅನ್ನುವಷ್ಟು ಸಂಬಳ, ಸೂಪರ್ ಅಲ್ಲದಿದ್ದರೂ ಸಾಧಾರಣ ಅನ್ನುವಂಥ ಪುಟ್ಟ ಮನೆ ಮಾಡು. ಆ ಮನೇಲಿ ಕೂತು ಭವಿಷ್ಯದ ಬಗ್ಗೆ ಪ್ಲಾನ್ ಮಾಡೋಣ.
ಹಾಯ್ ಈಡಿಯಟ್, ಹೇಗಿದ್ದೀಯಾ? ನಿಂಗೆ ಈಡಿಯಟ್ ಅಲ್ಲದೇ ಬೇರೆ ಹೆಸರು ಒಪ್ಪಲ್ಲ ಕಣೋ. ಅಮ್ಮನ ಪಕ್ಕ ಕುಳಿತು ಲಕ್ಷ್ಮೀ ಸರಸ್ವತಿ ಪೂಜೆ ಮಾಡ್ತಾ ಇದ್ದ ಮುದ್ದು ಗೌರಿಯಂಥ ಹುಡುಗೀನ, ಹೀಗೆ ಕೋಣೆಯ ಬಾಗಿಲು ಹಾಕ್ಕೊಂಡು 143 ಮಗ್ಗಿ ಗಟ್ಟು ಮಾಡುವ ಹಾಗೆ ಮಾಡಿºಟ್ಯಲ್ಲೋ? ನೀನು ಕರಿಯ, ನಾನು ಬೆಳದಿಂಗಳು. ನೀನು ಪೆದ್ದು ನಾನು ಮುದ್ದು. ನೀನು ಕೊಳ್ಕ, ನಾನು ಫೇರ್ ಅಂಡ್ ಲವ್ಲಿ.
ನೀನು ಒರಟ, ನಾನು ಹಾಲುಗೆನ್ನೆಯ ಹುಡುಗಿ. ನೀನು ಎಸ್ಸೆಸ್ಸೆಲ್ಸಿ ಡುಮ್ಕಿ, ನಾನು ಬಿ.ಎಸ್ಸಿ ಟಾಪು. ನಾನು ಎಂ.ಜಿ ರೋಡು, ನೀನು ಕೊತ್ತನೂರು. ನಾನು ಪಿ.ವಿ.ಆರ್, ನೀನು ಬಾಲಜಿ ಟೆಂಟು. ನಾನು ಪುಳಿಯೊಗರೆ, ನೀನು ಎಸ್.ಎಲ್.ವಿ ಕಾಲುಸೂಪು. ನಾನು ಎಮ್ಮೆಸ್ ಸುಬ್ಬುಲಕ್ಷ್ಮೀ ನೀನು ಹರಿಕೃಷ್ಣ. ನಾನು ಶಿವ ಶಿವ ಗುರುರಾಘವೇಂದ್ರ ಸ್ವಾಮಿ, ನೀನು ಜಲಗೇರಮ್ಮ ಮುಳ್ಕಟ್ಟಮ್ಮ ದೇವಿ. ನಾನು ತುಳಸಿ ಪಂಚಾಮೃತ ತೀರ್ಥ, ನೀನು ಪಕ್ಕಾ ಲೋಕಲ್ ಒರ್ಜಿನಲ್ ಚಾಯ್ಸು! ಛೇ ಏನ್ ಜೀವ°ನೋ ನಿಂದು? ನನಗೂ ನಿನಗೂ ಒಂದ್ ವಿಷ್ಯದಲ್ಲೂ ಮ್ಯಾಚ್ ಆಗ್ತಾ ಇಲ್ವಲ್ಲ?
ನಿನ್ನ ಪ್ರೀತೀಲಿ ಬೀಳಬಾರದು ಅಂತ ಎಷ್ಟೆಲ್ಲ ಕಷ್ಟಪಟ್ಟೆ ಗೊತ್ತಾ? ನೀನು ಹೇಳಿದ ಜಾಗಕ್ಕೆ ಬರಲಿಲ್ಲ, ನಿನ್ನ ಪತ್ರಗಳಿಗೆ ಉತ್ತರ ಬರೆಯಲಿಲ್ಲ, ಕಾಲೇಜಿಗೆ ಹೋಗುವಾಗ ಭಿಕ್ಷುಕನ ಹಾಗೆ ನಿಂತಿರುತ್ತಿದ್ದ ನಿನ್ನನ್ನ ತಿರುಗಿ ಕೂಡ ನೋಡಲಿಲ್ಲ, ಆದರೆ ನೀನು ಮಾತ್ರ ಅಖಂಡ ತಪಸ್ವಿ. ನಿನಗೆ ಗೊತ್ತಿತ್ತಾ? ಒಂದಲ್ಲ ಒಂದು ದಿನ ಈ ಪುಳಿಚಾರು, ಚಿಕನ್ ಬಿರಿಯಾನಿಗೆ ಫಿದಾ ಆಗೇ ಆಗುತ್ತೆ ಅಂತ ?
ಬರೋಬ್ಬರಿ ಐದು ವರ್ಷದ ನಿನ್ನ ಪ್ರಾಮಾಣಿಕ ಪ್ರೀತಿಗೆ ಫಿದಾ ಆಗದೆ ಹೇಗಿರಲಿ ಹೇಳು? ನಿನ್ನಲ್ಲಿ ಕಪಟವಿರಲಿಲ್ಲ, ವಂಚನೆಯಿರಲಿಲ್ಲ, ಸುಳ್ಳು ಇರಲಿಲ್ಲ, ನನಗಾಗಿ ಸುಳ್ಳೇ ಬದಲಾಗಲಿಲ್ಲ, ನೀನು ಹೇಗಿದ್ದೆಯೋ ಹಾಗೆ ಇದ್ದೆ. ಅದೇ ಪ್ರೀತಿಯನ್ನ, ಅದೇ ಅಂತರವನ್ನ, ಇವತ್ತಿಗೂ ಉಳಿಸಿಕೊಂಡು ಬಂದಿದ್ದೀಯಾ ಅಲ್ವಾ… ಅದೇ ನನಗಿಷ್ಟವಾಗಿದ್ದು. ಇನ್ನು ಮುಂದೆ ಮನೆ ಕೆಲ್ಸದವಳ ಹತ್ತಿರ ಕಾಗುಣಿತ ಸರಿ ಇಲ್ಲದ ನಿನ್ನ ಪ್ರೇಮ ಪತ್ರ ಕಳ್ಸೋದು ನಿಲ್ಸು ಮಾರಾಯ.
ನಿನ್ನ ಕನ್ನಡ ನೋಡಿ ನನ್ನ ಕನ್ನಡ ಆತ್ಮಹತ್ಯೆ ಮಾಡ್ಕೊಳ್ಳುತ್ತೆ. ಸ್ವಲ್ಪ ಹುಡುಗಾಟ ಕಡ್ಮೆ ಮಾಡು. ಇಲ್ಲಿಯವರೆಗೆ ಹಿಂದೆ ಸುತ್ತಿದ್ದು, ಅತ್ತಿದ್ದು, ಬೇಡಿಕೊಂಡಿದ್ದು ಎಲ್ಲವೂ ಈಗ ಮುಗಿದ ವಿಷಯ. ನಾನು ಬದುಕೋದಾದ್ರೆ ನಿನ್ನ ಜೊತೆ ಅಂತ ತೀರ್ಮಾನಿಸಿಯಾಗಿದೆ, ನನ್ನ ಚೆನ್ನಾಗಿ ನೋಡ್ಕೊತೀಯಾ ಅನ್ನೋ ನಂಬಿಕೆ ನನಗೂ ಬರಬೇಕಲ್ಲ ಹುಡುಗಾ? ಅದಕ್ಕೋಸ್ಕರ ಒಂದು ಸಣ್ಣ ಕೆಲ್ಸ,
ಓಹೋ ಅನ್ನುವಷ್ಟಲ್ಲದಿದ್ರೂ ಓಕೆ ಅನ್ನುವಷ್ಟು ಸಂಬಳ, ಸೂಪರ್ ಅಲ್ಲದಿದ್ದರೂ ಡಬಲ್ ಬೆಡ್‌ರೂಮಿನ, ಸಾಧಾರಣ ಅನ್ನುವಂಥ ಮನೆ, ಈಗ ಉಳಿಸಿಕೊಂಡಿದ್ದೀಯಲ್ಲ ಅದೇ ಪ್ರೀತಿಯನ್ನ ಜೀವನಪೂರ್ತಿ ನನಗೆ ಕೊಡ್ತೀನಿ ಅನ್ನೊ ಒಂದು ನಂಬಿಕೆ.. ಇಷ್ಟೇ ಸಾಕು ಕಣೋ ಈ ಹುಡುಗಿಗೆ. ಮುಂದೆ ನಿನಗೆ ಪುಳಿಯೊಗರೆ ತಿನ್ನಿಸೋದಾ ಅಥವಾ ನಾನೇ ಬಿರಿಯಾನಿ ಮಾಡೋದ್ನ ಕಲಿಯೋದಾ ಅನ್ನೋದನ್ನ ಇಬ್ಬರೂ ಕುಳಿತು ಯೊಚಿಸೋಣ.
ನಿನ್ನ
* ನವಿಲೂರ್ ಹುಡುಗಿ