Advertisement
ಭಾನುವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಎಡಿಎಂಕೆ ಶಾಸಕರ ಸಭೆ ಕರೆಯಲಾಗಿದೆ. ಆದರೆ ಇದುವರೆಗೂ ಸಭೆಯ ಅಜೆಂಡಾ ಏನು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಕೊಟ್ಟಿಲ್ಲ. ಒಂದು ಮೂಲಗಳ ಪ್ರಕಾರ, ಈ ಸಭೆಯಲ್ಲಿ ಶಶಿಕಲಾ ನಟರಾಜನ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಮಾಡಿ, ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡುವ ಸಂಭವಗಳಿವೆ. ಅಲ್ಲದೆ ಹಾಲಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ರಾಜಿನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Related Articles
Advertisement
ಶಶಿಕಲಾ ನಟರಾಜನ್ ಅವರು, ಜನವರಿ ಅಂತ್ಯದಲ್ಲೇ ಸಿಎಂ ಗಾದಿಗೆ ಕುಳಿತುಕೊಳ್ಳಬೇಕಿತ್ತು. ಆದರೆ ಜಲ್ಲಿಕಟ್ಟು ಕ್ರೀಡೆ ವಿವಾದ ಸಂಬಂಧ ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆಗಳು ಶುರುವಾದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನೆನಗುದಿಗೆ ಬಿದ್ದಿತ್ತು.
ಜಯಾ ಆಪ್ತರಿಗೆ ಗೇಟ್‌ಪಾಸ್: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸಿಎಂ ಕಚೇರಿಯಲ್ಲಿ ಆಪ್ತರಾಗಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಸಿಎಂ ಅವರ ಸಲಹೆಗಾರರಾದ ಶೀಲಾ ಬಾಲಕೃಷ್ಣನ್, ಕೆ ಎನ್ ವೆಂಕಟರಾಮನ್ ಅವರನ್ನು ತೆಗೆದುಹಾಕಲಾಗಿದ್ದು, ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿ ರಾಮಲಿಂಗಂ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಇದರ ಜತೆಗೆ ಜಯಲಲಿತಾ ಅವರ ಕಾಲದಲ್ಲಿ ನೇಪಥ್ಯಕ್ಕೆ ಸರಿದಿದ್ದ ನಾಯಕರಾದ ಕೆ ಎ ಸೆಂಗೋಟ್ಟಿಯನ್ ಮತ್ತು ಸಾಯಿದಾಯಿ ಎಸ್ ದೊರೆಸ್ವಾಮಿ ಅವರನ್ನು ಸಂಘಟನಾ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಎಂಜಿಆರ್ ಯೂಥ್ ವಿಂಗ್‌ನ ಕಾರ್ಯದರ್ಶಿ ಅಲೆಕ್ಸಾಂಡರ್ ಅವರನ್ನು ಹೊರಗೆ ಹಾಕಲಾಗಿದೆ.
ಜಲ್ಲಿಕಟ್ಟು ಗಲಾಟೆಯಲ್ಲಿ ಮೌನ: ವಿಶೇಷವೆಂದರೆ ಚೆನ್ನೈನ ಮರೀನಾ ಬೀಚ್‌ನಲ್ಲಿ ಜಲ್ಲಿಕಟ್ಟು ಬೆಂಬಲಿಸಿ ನಡೆದ ಪ್ರತಿಭಟನೆ ವೇಳೆ ಶಶಿಕಲಾ ನಟರಾಜನ್ ಅವರು ತುಟಿ ಬಿಚ್ಚಿರಲಿಲ್ಲ. ಆದರೆ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ದೆಹಲಿಗೆ ಹೋಗಿ ಕೇಂದ್ರದ ಜತೆ ಮಾತನಾಡಿ, ವಿವಾದ ಬಗೆಹರಿಸಿಕೊಳ್ಳುವ ಮುನ್ಸೂಚನೆ ದೊರೆಯುತ್ತಿದ್ದಂತೆ, ಹೇಳಿಕೆ ಹೊರಡಿಸಿದ್ದರು. ಇದರಲ್ಲಿ ಜಲ್ಲಿಕಟ್ಟು ವಿವಾದ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಪಕ್ಷದ ಸಂಸದರನ್ನು ಕಳುಹಿಸಲಾಗಿದೆ ಎಂದು ಹೇಳಿದ್ದರು. ಈ ಮೂಲಕ ಜಲ್ಲಿಕಟ್ಟು ಕ್ರೀಡೆ ವಿಚಾರದಲ್ಲಿ ಪನ್ನೀರ್‌ಸೆಲ್ವಂ ಅವರಷ್ಟೇ ಹೆಸರು ಪಡೆಯಬಾರದು ಎಂಬ ಉದ್ದೇಶದಿಂದಲೇ ಈ ರೀತಿ ಮಾಡಿದ್ದರು ಎಂದು ಹೇಳಲಾಗಿದೆ.
ದೂರಿಗೆ ಪ್ರತಿಕ್ರಿಯೆ ಕೊಡಿ ಎಂದ ಆಯೋಗಮತ್ತೂಂದು ಬೆಳವಣಿಗೆಯಲ್ಲಿ ಎಐಎಡಿಎಂಕೆಯಿಂದ ಉಚ್ಚಾಟಿತರಾಗಿರುವ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದನ್ನು ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಅದನ್ನು ಸ್ವೀಕರಿಸಿರುವ ಆಯೋಗ ನೇಮಕ ಬಗ್ಗೆ ಸ್ಪಷ್ಟನೆ ನೀಡಿ ಎಂದು ತಿಳಿಸಿದೆ. ಶಶಿಕಲಾ ಪುಷ್ಪ ಅವರ ದೂರಿನ ವಿವರವನ್ನು ಆಯೋಗ ಬಹಿರಂಗಮಾಡಿಲ್ಲ.