ಹುಬ್ಬಳ್ಳಿ: ವಾಸ್ತವದಲ್ಲಿ ಬಿಜೆಪಿ ಹಾಗೂ ಪಕ್ಷದ ನಾಯಕರು ಹಿಂದುಳಿದ ವರ್ಗದ ಮೀಸಲಾತಿ ವಿರೋಧಿಗಳು. ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಹೆದರಿ ವೈದ್ಯಕೀಯ ಕೋರ್ಸ್‌ನಲ್ಲಿ ಒಬಿಸಿಗೆ ಶೇ.27 ಮೀಸಲಾತಿ ಘೋಷಿಸಿದ್ದಾರೆ ವಿನಃ ಕಾಳಜಿಯಿಂದಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2007ರಲ್ಲಿ ಯುಪಿಎ ಸರ್ಕಾರ ಈ ಮೀಸಲಾತಿ ಜಾರಿಗೊಳಿಸಿತ್ತು. ಆದರೆ ಆರಂಭದಲ್ಲಿ ಕೇಂದ್ರ ಸರ್ಕಾರ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಲ್ಲಿ ಇದು ಜಾರಿಯಾಗಿತ್ತು. ರಾಜ್ಯಮಟ್ಟದ ಶಿಕ್ಷಣ ಸಂಸ್ಥೆಗೆ ಅನ್ವಯಿಸಿರಲಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಮೀಸಲಾತಿಯನ್ನು ವಿಸ್ತರಿಸಲಿಲ್ಲ. ಇದೀಗ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎನ್ನುವ ಭಯದಿಂದ ಜಾರಿ ಮಾಡಿ ತಾವು ಹಿಂದುಳಿದ ವರ್ಗಗಳ ಪರವಾಗಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ ದೂರು, ನ್ಯಾಯಾಂಗ ನಿಂದನೆ ಆದೇಶದ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಒಬಿಸಿ ವಿದ್ಯಾರ್ಥಿಗಳಿಗೆ ಶೇ.27 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿನಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಈ ಮೀಸಲಾತಿ ಸಂವಿಧಾನಾತ್ಮಕವಾಗಿದ್ದು, ಇದನ್ನು ಜಾರಿ ಮಾಡುವಂತೆ ಆದೇಶಿಸಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಜಾರಿ ಮಾಡಿರಲಿಲ್ಲ. ಇದನ್ನು ಖಂಡಿಸಿ ಎಐಎಡಿಎಂಕೆ ಹಾಗೂ ಕಾಂಗ್ರೆಸ್‌ನಿಂದ ಮದ್ರಾಸ್ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲು ಮಾಡಿದ್ದೆವು. 2021, ಜು.21ರಂದು ಆದೇಶ ಬಂದಿತ್ತು. ಅದರನ್ವಯ ಮೀಸಲಾತಿ ಘೋಷಿಸಲಾಗಿದೆ. ಈ ಕುರಿತು ಸೋನಿಯಾ ಗಾಂಧಿ 2020ರಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ದಾಖಲೆ ಬಿಡುಗಡೆ ಮಾಡಿದರು.
ಕಲಹಕ್ಕೆ ಕೇಂದ್ರವೇ ಕಾರಣ: ಮಿಜೋರಾಂ ಹಾಗೂ ಅಸ್ಸಾಂ ರಾಜ್ಯದ ನಡುವಿನ ಕಲಹಕ್ಕೆ ಕೇಂದ್ರ ಸರ್ಕಾರವೇ ಕಾರಣ. ಎರಡು ರಾಜ್ಯದ ನಡುವೆ ನಡೆಯುತ್ತಿರುವ ಗೊಂದಲಕ್ಕೆ ಕೇಂದ್ರ ಸರ್ಕಾರ ತೆರೆ ಎಳೆಯುವ ಕೆಲಸ ಮಾಡುತ್ತಿಲ್ಲ. ಗೃಹ ಸಚಿವ ಅಮಿತ್ ಶಾ ಪೆಗಾಸಿಸ್ ಸಂಸ್ಥೆ ಮೂಲಕ ಗೂಢಚಾರದಲ್ಲಿ ತೊಡಗಿದ್ದಾರೆ. ಎರಡು ರಾಜ್ಯದ ಮುಖ್ಯಮಂತ್ರಿ ಮೇಲೆ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರ್ಕಾರ ತಟಸ್ಥವಾಗಿರುವುದು ಸರಿಯಲ್ಲ ಎಂದರು. ಸಿದ್ದರಾಮಯ್ಯ, ಎಸ್.ಆರ್.ಪಾಟೀಲ, ಡಿ.ಕೆ. ಶಿವಕುಮಾರ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಆರ್.ವಿ.ದೇಶಪಾಂಡೆ, ಎಚ್.ಕೆ. ಪಾಟೀಲ, ಎಂ.ಬಿ.ಪಾಟೀಲ, ಪ್ರಸಾದ ಅಬ್ಬಯ್ಯ ಇದ್ದರು.