Advertisement

Ranji; ವಿ. ಕೌಶಿಕ್‌, ದೇವದತ್ತ ಪಡಿಕ್ಕಲ್‌ ಪ್ರಚಂಡ ಪರಾಕ್ರಮ

11:46 PM Jan 05, 2024 | Team Udayavani |

ಹುಬ್ಬಳ್ಳಿ: ನೂತನ ರಣಜಿ ಋತುವಿನಲ್ಲಿ ಕರ್ನಾಟಕ ಭರವಸೆಯ ಆರಂಭ ಪಡೆದಿದೆ. ಪಂಜಾಬ್‌ ವಿರುದ್ಧ ಹುಬ್ಬಳ್ಳಿಯಲ್ಲಿ ಆರಂಭಗೊಂಡ ಎಲೈಟ್‌ “ಸಿ’ ವಿಭಾಗದ ಮುಖಾಮುಖಿಯಲ್ಲಿ ರಾಜ್ಯ ತಂಡ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆ ರಡರಲ್ಲೂ ಮೇಲುಗೈ ಸಾಧಿಸಿದೆ.

Advertisement

ಪಂಜಾಬ್‌ ಪಡೆಯನ್ನು 152 ರನ್ನುಗಳ ಸಾಮಾನ್ಯ ಮೊತ್ತಕ್ಕೆ ನಿಭಾಯಿಸಿದ ಬಳಿಕ 3 ವಿಕೆಟಿಗೆ 142 ರನ್‌ ಮಾಡಿ ಮೊದಲ ದಿನದಾಟ ಮುಗಿಸಿದೆ. 7 ವಿಕೆಟ್‌ ಉಡಾಯಿಸಿದ ಬಲಗೈ ಮಧ್ಯಮ ವೇಗಿ ವಾಸುಕಿ ಕೌಶಿಕ್‌ ಮತ್ತು 80 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿರುವ ದೇವದತ್ತ ಪಡಿಕ್ಕಲ್‌ ಮೊದಲ ದಿನದಾಟದ ಹೀರೋಗಳೆನಿಸಿದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು ಕೊಂಡ ಪಂಜಾಬ್‌ಗ ಆತಿಥೇಯರ ಬೌಲಿಂಗ್‌ ಆಕ್ರಮಣವನ್ನು ಎದುರಿಸಿ ನಿಲ್ಲಲಾಗಲಿಲ್ಲ. 15 ಓವರ್‌ ವೇಳೆ 37ಕ್ಕೆ 4 ವಿಕೆಟ್‌ ಉದುರಿಸಿಕೊಂಡು ಸಂಕಟಕ್ಕೆ ಸಿಲುಕಿತು. ವಿ. ಕೌಶಿಕ್‌ ಎಸೆತ ಗಳು ಪಂಜಾಬ್‌ ಪಾಲಿಗೆ ಅತ್ಯಂತ ಕಠಿನವಾಗಿ ಪರಿಣಮಿಸಿದವು. ಅಗ್ರ ಕ್ರಮಾಂಕದ 6 ಆಟಗಾರರು ಕೌಶಿಕ್‌ ಎಸೆತಗಳ ಮೋಡಿಗೆ ಸಿಲುಕಿದರು. ಕೌಶಿಕ್‌ ಸಾಧನೆ 41ಕ್ಕೆ 7 ವಿಕೆಟ್‌. 15 ಓವರ್‌ ಎಸೆದ ಅವರು 6 ಮೇಡನ್‌ ಮೂಲಕ ಗಮನ ಸೆಳೆದರು. ವಿಜಯ್‌ಕುಮಾರ್‌ ವೈಶಾಖ್‌ 2, ಎಡಗೈ ಸ್ಪಿನ್ನರ್‌ ರೋಹಿತ್‌ ಕುಮಾರ್‌ ಒಂದು ವಿಕೆಟ್‌ ಕೆಡವಿದರು.
ಪಂಜಾಬ್‌ ಪರ ಮಧ್ಯಮ ಕ್ರಮಾಂಕದ ಬ್ಯಾಟರ್‌ ನೇಹಲ್‌ ವಧೇರ ಸರ್ವಾಧಿಕ 44, ಗೀತಾಂಶ್‌ ಖೇರ 27, ಅಭಿಷೇಕ್‌ ಶರ್ಮ ಮತ್ತು ಮಾಯಾಂಕ್‌ ಮಾರ್ಕಂಡೆ ತಲಾ 26 ರನ್‌ ಮಾಡಿದರು.

ಪಡಿಕ್ಕಲ್‌ ಮಿಂಚಿನ ಆಟ
ಕರ್ನಾಟಕದ ಆರಂಭ ಆಘಾತಕಾರಿ ಆಗಿತ್ತು. ನಾಯಕ ಮಾಯಾಂಕ್‌ ಅಗರ್ವಾಲ್‌ ಖಾತೆ ತೆರೆಯದೆಯೇ ಪೆವಿಲಿಯನ್‌ ಸೇರಿಕೊಂಡರು. ದ್ವಿತೀಯ ವಿಕೆಟಿಗೆ ಜತೆಗೂಡಿದ ಆರ್‌. ಸಮರ್ಥ್ ಮತ್ತು ಪಡಿಕ್ಕಲ್‌ 76 ರನ್‌ ಪೇರಿಸಿ ತಂಡದ ನೆರವಿಗೆ ನಿಂತರು. ಆಗ 38 ರನ್‌ ಗಳಿಸಿದ ಸಮರ್ಥ್ ವಿಕೆಟ್‌ ಬಿತ್ತು (62 ಎಸೆತ, 5 ಬೌಂಡರಿ). ನಿಕಿನ್‌ ಜೋಸ್‌ ಆಟ ಎಂಟೇ ರನ್ನಿಗೆ ಮುಗಿಯಿತು.

ಪಡಿಕ್ಕಲ್‌ ಅತ್ಯಂತ ಆಕ್ರಮಣಕಾರಿ ಆಟವಾಡಿ ಪಂಜಾಬ್‌ ಬೌಲರ್‌ಗಳ ಮೇಲೆರಗಿದರು. ಅವರ ಅಜೇಯ 80 ರನ್‌ ಸರಿಯಾಗಿ 80 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 14 ಬೌಂಡರಿ.

Advertisement

ಸಂಕ್ಷಿಪ್ತ ಸ್ಕೋರ್‌
ಪಂಜಾಬ್‌-152 (ನೇಹಲ್‌ ವಧೇರ 44, ಗೀತಾಂಶ್‌ ಖೇರ 27, ಅಭಿಷೇಕ್‌ ಶರ್ಮ 26, ಮಾಯಾಂಕ್‌ ಮಾರ್ಕಂಡೆ ಔಟಾಗದೆ 26, ವಾಸುಕಿ ಕೌಶಿಕ್‌ 41ಕ್ಕೆ 7, ವಿಜಯ್‌ಕುಮಾರ್‌ ವೈಶಾಖ್‌ 35ಕ್ಕೆ 2, ರೋಹಿತ್‌ ಕುಮಾರ್‌ 18ಕ್ಕೆ 1). ಕರ್ನಾಟಕ-3 ವಿಕೆಟಿಗೆ 142 (ಪಡಿಕ್ಕಲ್‌ ಬ್ಯಾಟಿಂಗ್‌ 80, ಸಮರ್ಥ್ 38, ಪಾಂಡೆ ಬ್ಯಾಟಿಂಗ್‌ 13, ಜೋಸ್‌ 8, ಅಗರ್ವಾಲ್‌ 0, ನಮನ್‌ ಧಿರ್‌ 13ಕ್ಕೆ 1, ಪ್ರೇರಿತ್‌ ದತ್ತ 18ಕ್ಕೆ 1, ಅರ್ಷದೀಪ್‌ ಸಿಂಗ್‌ 37ಕ್ಕೆ 1).

ಮುಂಬಯಿಗೆ ಬಿಹಾರ ಬ್ರೇಕ್‌
ಪಾಟ್ನಾ: ಎಲೈಟ್‌ “ಬಿ’ ವಿಭಾಗದ ರಣಜಿ ಪಂದ್ಯದಲ್ಲಿ ಮುಂಬಯಿಗೆ ಆತಿಥೇಯ ಬಿಹಾರ ಭಾರೀ ಬ್ರೇಕ್‌ ಹಾಕಿದೆ. ಮೊದಲ ದಿನದಾಟದ ಅಂತ್ಯಕ್ಕೆ ಮುಂಬಯಿ 9 ವಿಕೆಟಿಗೆ 235 ರನ್‌ ಗಳಿಸಿದೆ.ಮಧ್ಯಮ ವೇಗಿಗಳಾದ ವೀರ್‌ ಪ್ರತಾಪ್‌ ಸಿಂಗ್‌ (32ಕ್ಕೆ 4), ಶಕೀಬುಲ್‌ ಗನಿ (60ಕ್ಕೆ 2) ಮತ್ತು ಹಿಮಾಂಶು ಸಿಂಗ್‌ (21ಕ್ಕೆ 2) ತವರಿನ ಅಂಗಳದಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನವಿತ್ತು.ಮುಂಬಯಿ ಸರದಿಯಲ್ಲಿ ಮೂವರಿಂದ ಅರ್ಧ ಶತಕ ದಾಖಲಾಯಿತು. ಭೂಪೇನ್‌ ಲಾಲ್ವಾನಿ 65, ಸುವೇದ್‌ ಪಾರ್ಕರ್‌ ಮತ್ತು ತನುಷ್‌ ಕೋಟ್ಯಾನ್‌ ತಲಾ 50 ರನ್‌ ಮಾಡಿದರು. ನಾಯಕ ಅಜಿಂಕ್ಯ ರಹಾನೆ ಗೈರಾದ ಕಾರಣ ಶಮ್ಸ್‌ ಮುಲಾನಿ ಅವರಿಗೆ ಮುಂಬಯಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತು.

Advertisement

Udayavani is now on Telegram. Click here to join our channel and stay updated with the latest news.

Next