Advertisement

ಗುರ್ಬಾನಿ ಹ್ಯಾಟ್ರಿಕ್‌ ಗುದ್ದು, ಜಾಫ‌ರ್‌ ಜಬರ್ದಸ್ತ್

06:10 AM Dec 31, 2017 | Team Udayavani |

ಇಂದೋರ್‌: ವಿದರ್ಭದ ಮಧ್ಯಮ ವೇಗಿ ರಜನೀಶ್‌ ಗುರ್ಬಾನಿ ಮತ್ತೂಮ್ಮೆ ಎದುರಾಳಿ ಪಾಲಿಗೆ ಸಿಂಹಸ್ವಪ್ನರಾಗಿದ್ದಾರೆ. ರಣಜಿ ಫೈನಲ್‌ನಲ್ಲಿ ಅಮೋಘ ಹ್ಯಾಟ್ರಿಕ್‌ ಸಾಧಿಸಿ ದಿಲ್ಲಿಯನ್ನು ಸಾಮಾನ್ಯ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ದಿಲ್ಲಿಯ ಮೊದಲ ಇನ್ನಿಂಗ್ಸ್‌ 295 ರನ್ನಿಗೆ ಕೊನೆಗೊಂಡಿದ್ದು, ಜವಾಬು ನೀಡಲಾರಂಭಿಸಿದ ವಿದರ್ಭ 4 ವಿಕೆಟ್‌ ಕಳೆದುಕೊಂಡು 295 ರನ್‌ ಗಳಿಸಿದೆ. ಮಹತ್ವದ ಇನ್ನಿಂಗ್ಸ್‌ ಮುನ್ನಡೆಗೆ 90 ರನ್‌ ಅಗತ್ಯವಿದೆ; 6 ವಿಕೆಟ್‌ ಕೈಲಿದೆ. ಅಕಸ್ಮಾತ್‌ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ ಆಗ ಮೊದಲ ಇನ್ನಿಂಗ್ಸ್‌ ಮುನ್ನಡೆಯೇ ಪ್ರಶಸ್ತಿಗೆ ನಿರ್ಣಾಯಕವಾಗಲಿದೆ. ಅನುಭವಿ ಬ್ಯಾಟ್ಸ್‌ಮನ್‌ ವಾಸಿಮ್‌ ಜಾಫ‌ರ್‌ ಅಜೇಯ 61 ರನ್‌ ಬಾರಿಸಿ ವಿದರ್ಭ ಪಾಲಿನ ಆಶಾಕಿರಣವಾಗಿ ಉಳಿದಿದ್ದಾರೆ.

6 ವಿಕೆಟ್‌ ಹಾರಿಸಿದ ಗುರ್ಬಾನಿ
ಮೊದಲ ದಿನ 6 ವಿಕೆಟಿಗೆ 271 ರನ್‌ ಮಾಡಿದ್ದ ದಿಲ್ಲಿ, ಶನಿವಾರ ಬ್ಯಾಟಿಂಗ್‌ ಮುಂದುವರಿಸಿ ಮತ್ತೆ 24 ರನ್‌ ಸೇರಿಸುವಷ್ಟರಲ್ಲಿ ಆಲೌಟ್‌ ಆಯಿತು. ಉಳಿದ ನಾಲ್ಕೂ ವಿಕೆಟ್‌ಗಳನ್ನು ರಜನೀಶ್‌ ಗುರ್ಬಾನಿ 7 ಎಸೆತಗಳ ಅಂತರದಲ್ಲಿ ಉರುಳಿಸಿದರು. ಇದರಲ್ಲಿ ಕ್ಲೀನ್‌ಬೌಲ್ಡ್‌ ಸಾಹಸದ ಹ್ಯಾಟ್ರಿಕ್‌ ಕೂಡ ಸೇರಿತ್ತು. ಗುರ್ಬಾನಿ ಸಾಧನೆ 59ಕ್ಕೆ 6 ವಿಕೆಟ್‌.
ಗುರ್ಬಾನಿ ವಿದರ್ಭ ಇನ್ನಿಂಗ್ಸಿನ 101ನೇ ಓವರಿನ ಕೊನೆಯ 2 ಎಸೆತಗಳಲ್ಲಿ ವಿಕಾಸ್‌ ಮಿಶ್ರಾ ಮತ್ತು ನವದೀಪ್‌ ವಿಕೆಟ್‌ ಉಡಾಯಿಸಿದರು. ಅವರ ಹ್ಯಾಟ್ರಿಕ್‌ಗೆ ಶತಕವೀರ ಧ್ರುವ ಶೋರೆ ಅಡ್ಡಿಯಾಗಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಗುರ್ಬಾನಿಗೆ ಶೋರೆ ಸಮಸ್ಯೆಯೇ ಆಗಲಿಲ್ಲ. ದಿಲ್ಲಿ ಸರದಿಯ ಪ್ರಥಮ ಓವರಿನಿಂದಲೇ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಶೋರೆ ಅವರನ್ನೂ ಗುರ್ಬಾನಿ ಕ್ಲೀನ್‌ಬೌಲ್ಡ್‌ ಮಾಡಿದರು!

ಇದು ರಣಜಿ ಫೈನಲ್‌ನಲ್ಲಿ ದಾಖಲಾದ ಕೇವಲ 2ನೇ ಹ್ಯಾಟ್ರಿಕ್‌ ನಿದರ್ಶನ. 1972-73ರ ಪ್ರಶಸ್ತಿ ಸಮರದಲ್ಲಿ ತಮಿಳುನಾಡಿನ ಬಿ. ಕಲ್ಯಾಣಸುಂದರಂ ಮುಂಬಯಿ ವಿರುದ್ಧ ಹ್ಯಾಟ್ರಿಕ್‌ ಸಾಧನೆಯೊಂದಿಗೆ ಸುದ್ದಿಯಾಗಿದ್ದರು.

123 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಧ್ರುವ ಶೋರೆ 145 ರನ್‌ ಗಳಿಸಿ ಔಟಾದರು. 294 ಎಸೆತಗಳನ್ನು ನಿಭಾಯಿಸಿದ ಶೋರೆ 21 ಬೌಂಡರಿಗಳೊಂದಿಗೆ ರಂಜಿಸಿದರು. ವಿಕಾಸ್‌ ಮಿಶ್ರಾ 7 ರನ್ನಿಗೆ ಔಟಾದರೆ, ನವದೀಪ್‌ ಸೈನಿ ಮತ್ತು ಕುಲವಂತ್‌ ಖೆಜೊÅàಲಿಯಾ ಖಾತೆ ತೆರೆಯುವಲ್ಲಿ ವಿಫ‌ಲರಾದರು.

Advertisement

ವಿದರ್ಭ ದಿಟ್ಟ ಆರಂಭ
ವಿದರ್ಭದ ಆರಂಭ ಅಮೋಘವಾಗಿತ್ತು. ನಾಯಕ ಫೈಜ್‌ ಫ‌ಜಲ್‌-ರಾಮಸ್ವಾಮಿ ಸಂಜಯ್‌ ಸೇರಿಕೊಂಡು ದಿಲ್ಲಿ ಆಕ್ರಮಣವನ್ನು ಭರ್ತಿ 30 ಓವರ್‌ಗಳ ತನಕ ನಿಭಾಯಿಸಿದರು. ಇವರಿಬ್ಬರ ಜತೆಯಾಟದಲ್ಲಿ 96 ರನ್‌ ಹರಿದು ಬಂತು. ಸಂಜಯ್‌ ಅವರನ್ನು ಬೌಲ್ಡ್‌ ಮಾಡುವ ಮೂಲಕ ಆಕಾಶ್‌ ಸುದಾನ್‌ ಈ ಜೋಡಿಯನ್ನು ಬೇರ್ಪಡಿಸಿದರು. 92 ಎಸೆತ ನಿಭಾಯಿಸಿದ ಸಂಜಯ್‌ 5 ಬೌಂಡರಿ ಹೊಡೆದರು.

ಹೆಚ್ಚು ಆಕ್ರಮಣಕಾರಿಯಾಗಿ ಕಂಡುಬಂದ ಕಪ್ತಾನ ಫ‌ಜಲ್‌ 101 ಎಸೆತ ನಿಭಾಯಿಸಿ 67 ರನ್‌ ಬಾರಿಸಿದರು. ಸುದಾನ್‌ 11 ರನ್‌ ಅಂತರದಲ್ಲಿ ಈ ದೊಡ್ಡ ಬೇಟೆಯಾಡಿದರು. 101 ಎಸೆತಗಳಿಗೆ ಜವಾಬಿತ್ತ ಫ‌ಜಲ್‌ 10 ಸಲ ಚೆಂಡನ್ನು ಬೌಂಡರಿಗೆ ಅಟ್ಟಿದರು.

ವನ್‌ಡೌನ್‌ನಲ್ಲಿ ಬಂದ ವಾಸಿಮ್‌ ಜಾಫ‌ರ್‌ ಅಜೇಯ ಆಟದ ಮೂಲಕ ವಿದರ್ಭದ ರಕ್ಷಣೆಗೆ ನಿಂತಿದ್ದಾರೆ. ಅತ್ಯಂತ ಜವಾಬ್ದಾರಿಯುತ ಆಟದ ಮೂಲಕ ತಮ್ಮ ಅನುಭವವನ್ನೆಲ್ಲ ತೆರೆದಿರಿಸಿರುವ ಮುಂಬಯಿಯ ಈ ಮಾಜಿ ಆಟಗಾರ 120 ಎಸೆತಗಳಿಂದ 61 ರನ್‌ ಬಾರಿಸಿದ್ದಾರೆ. ಇದರಲ್ಲಿ 8 ಬೌಂಡರಿ ಸೇರಿದೆ.

ಈ ಮಧ್ಯೆ ಕರ್ನಾಟಕದ ಮಾಜಿ ಕ್ರಿಕೆಟಿಗ ಗಣೇಶ್‌ ಸತೀಶ್‌ (12) ಮತ್ತು ಅಪೂರ್ವ್‌ ವಾಂಖೇಡೆ (28) ವಿಕೆಟ್‌ ಹಾರಿಸುವಲ್ಲಿ ದಿಲ್ಲಿ ಯಶಸ್ವಿಯಾಯಿತು. ಹೀಗಾಗಿ ಪಂದ್ಯವಿಇಗ ಸಮಬಲ ಸ್ಥಿತಿ ತಲುಪಿದೆ ಎನ್ನಲಡ್ಡಿಯಿಲ್ಲ.

ಸಂಕ್ಷಿಪ್ತ ಸ್ಕೋರ್‌: ದಿಲ್ಲಿ-295 (ಶೋರೆ 145, ಹಿಮ್ಮತ್‌ ಸಿಂಗ್‌ 66, ರಾಣ 21, ಗುರ್ಬಾನಿ 59ಕ್ಕೆ 6, ಠಾಕ್ರೆ 74ಕ್ಕೆ 2). ವಿದರ್ಭ-4 ವಿಕೆಟಿಗೆ 206 (ಫ‌ಜಲ್‌ 67, ಜಾಫ‌ರ್‌ ಬ್ಯಾಟಿಂಗ್‌ 61, ವಾಂಖೇಡೆ 28, ಸುದಾನ್‌ 53ಕ್ಕೆ 2, ಸೈನಿ 57ಕ್ಕೆ 1, ಖೆಜೊÅàಲಿಯಾ 30ಕ್ಕೆ 1).

ರಣಜಿ ಫೈನಲ್‌ನಲ್ಲಿ 2ನೇ ಹ್ಯಾಟ್ರಿಕ್‌
ಸೆಮಿಫೈನಲ್‌ನಲ್ಲಿ ಕರ್ನಾಟಕವನ್ನು ಕಾಡಿದ ವಿದರ್ಭದ ಮಧ್ಯಮ ವೇಗಿ ಜನೀಶ್‌ ಗುರ್ಬಾನಿ ಫೈನಲ್‌ನಲ್ಲಿ ದಿಲ್ಲಿಗೆ ಸಿಂಹಸ್ವಪ್ನರಾದರು. ಹ್ಯಾಟ್ರಿಕ್‌ ಸಾಧನೆಯೊಂದಿಗೆ 7 ಬಾರಿಯ ಚಾಂಪಿಯನ್‌ ದಿಲ್ಲಿಯನ್ನು ದಿಕ್ಕೆಡಿಸಿದರು. ಗುರ್ಬಾನಿ ರಣಜಿ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಸಾಧಿಸಿದ ಕೇವಲ 2ನೇ ಬೌಲರ್‌. ತಮಿಳುನಾಡಿನ ಕಲ್ಯಾಣಸುಂದರಂ ಮೊದಲಿಗ.

ರಜನೀಶ್‌ ಗುರ್ಬಾನಿ ವಿದರ್ಭ ಸರದಿಯ 100ನೇ ಓವರಿನ ಕೊನೆಯ 2 ಎಸೆತಗಳಲ್ಲಿ ವಿಕಾಸ್‌ ಮಿಶ್ರಾ ಮತ್ತು ನವದೀಪ್‌ ಸೈನಿ ಅವರ ವಿಕೆಟ್‌ ಕಿತ್ತರೆ, ತಮ್ಮ ಮುಂದಿನ ಓವರಿನ ಮೊದಲ ಎಸೆತದಲ್ಲಿ ಶತಕ ಸಾಹಸಿ ಧ್ರುವ ಶೋರೆ ಅವರನ್ನು ಔಟ್‌ ಮಾಡಿ ಹ್ಯಾಟ್ರಿಕ್‌ ಹೀರೋ ಎನಿಸಿಕೊಂಡರು. ಗುರ್ಬಾನಿ ಮೂವರನ್ನೂ ಕ್ಲೀನ್‌ಬೌಲ್ಡ್‌ ಮಾಡಿದ್ದು ವಿಶೇಷ.

ಗುರ್ಬಾನಿ ಸಾಧನೆ 59ಕ್ಕೆ 6 ವಿಕೆಟ್‌. ಆವರು ಕೊನೆಯ 4 ವಿಕೆಟ್‌ಗಳನ್ನು 7 ಎಸೆತಗಳ ಅಂತರದಲ್ಲಿ ಕೆಡವಿದರು.
ಕಲ್ಯಾಣಸುಂದರಂ ಅವರು 1972-73ರ ಮುಂಬಯಿ ವಿರುದ್ಧದ ಪ್ರಶಸ್ತಿ ಸಮರದಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಆದರೆ ಮದ್ರಾಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ತಮಿಳುನಾಡು 123 ರನ್ನುಗಳಿಂದ ಸೋತು ಪ್ರಶಸ್ತಿ ವಂಚಿತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next