Advertisement

ರಣಜಿ ಫೈನಲ್‌:ಟ್ರೋಫಿ ಗೆಲುವಿನತ್ತ ವಿದರ್ಭ

12:30 AM Feb 07, 2019 | Team Udayavani |

ನಾಗ್ಪುರ: ವಿದರ್ಭ-ಸೌರಾಷ್ಟ್ರ ನಡುವಿನ ರಣಜಿ ಕ್ರಿಕೆಟ್‌ ಫೈನಲ್‌ ಪಂದ್ಯ ರೋಚಕ ಹಂತಕ್ಕೆ ಬಂದು ತಲುಪಿದೆ. ಹಾಲಿ ಚಾಂಪಿಯನ್‌ ವಿದರ್ಭ ಮತ್ತೂಂದು ಬಾರಿಗೆ ಟ್ರೋಫಿ ಮೇಲೆ ಪಾರುಪತ್ಯ ಸ್ಥಾಪಿಸುವ ಕನಸಿಗೆ ಹತ್ತಿರವಾಗಿದೆ.

Advertisement

ಎಲ್ಲ ವಿದರ್ಭ ಅಂದುಕೊಂಡಂತೆ ನಡೆದರೆ, ಸೌರಾಷ್ಟ್ರದ ಉಳಿದಿರುವ 5 ವಿಕೆಟ್‌ ಬೇಗ ಉರುಳಿದರೆ, ಅಂತಿಮ ದಿನದ ಆಟದ ಮಧ್ಯಾಹ್ನದ ಒಳಗಾಗಿ ವಿದರ್ಭ ಜಯಭೇರಿ ಬಾರಿಸಲಿದೆ. ಮತ್ತೂಂದು ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಲಿದೆ. ವಿದರ್ಭ ನೀಡಿದ 206 ರನ್‌ ಸವಾಲನ್ನು ಬೆನ್ನಟ್ಟಿತ್ತಿರುವ ಸೌರಾಷ್ಟ್ರ 4ನೇ ದಿನದ ಆಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 58ಕ್ಕೆ5 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದೆ. ಆದಿತ್ಯ ಸರ್ವಟೆ (13ಕ್ಕೆ3), ಉಮೇಶ್‌ ಯಾದವ್‌ (27ಕ್ಕೆ1) ಹಾಗೂ ಅಕ್ಷಯ್‌ ವಖಾರೆ (18ಕ್ಕೆ1) ಸೌರಾಷ್ಟ್ರ ಬ್ಯಾಟ್ಸ್‌ಮೆನ್‌ಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. 

ತ್ರಿಮೂರ್ತಿಗಳ ಬೆಂಕಿಯುಂಡೆಯಂತಹ ದಾಳಿಗೆ ಉತ್ತರಿಸಲಾಗದೆ  ಸೌರಾಷ್ಟ್ರ ಅಗ್ರ ಬ್ಯಾಟ್ಸ್‌ಮೆನ್‌ಗಳು ಈಗಾಗಲೇ ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಸೌರಾಷ್ಟ್ರದ ಗೆಲುವಿಗೆ ಇನ್ನೂ 148 ರನ್‌ ಬೇಕಿದೆ. ಕೈಯಲ್ಲಿ 5 ವಿಕೆಟ್‌ ಅಷ್ಟೆ ಇದೆ. ಗುರುವಾರ ಅಂತಿಮ ದಿನದ ಆಟ ಬಾಕಿ ಇದೆ. ವಿಶ್ವರಾಜ್‌ ಜಡೇಜ (ಅಜೇಯ 23) ಹಾಗೂ ಕಮಲೇಶ್‌ ಮಕ್ವಾನ (ಅಜೇಯ 2 ರನ್‌) ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

206 ರನ್‌ಗಳಿಸಲೂ ಒದ್ದಾಟ: ಮೊದಲ ಇನಿಂಗ್ಸ್‌ನಲ್ಲಿ 6 ರನ್‌ನಿಂದ ಹಿನ್ನಡೆ ಅನುಭವಿಸಿದ್ದ ಸೌರಾಷ್ಟ್ರಕ್ಕೆ ಒಟ್ಟಾರೆ ಗೆಲ್ಲಲು 206 ರನ್‌ ಗುರಿಯನ್ನು ವಿದರ್ಭ ನೀಡಿತು. ಇದನ್ನು ಬೆನ್ನಟ್ಟುವಲ್ಲಿ ಹಾದಿಯಲ್ಲಿ ಸೌರಾಷ್ಟ್ರ ಅನೇಕ ತಪ್ಪು ಎಸಗಿತು. ಎರಡನೇ ಇನಿಂಗ್ಸ್‌ನಲ್ಲಿ ಸೌರಾಷ್ಟ್ರದ ಮೊದಲ ವಿಕೆಟ್‌ಗೆ ಕೇವಲ 19 ರನ್‌ಗೆ ಪತನಗೊಂಡಿತು. ನಂತರ ತಂಡದ ಒಟ್ಟಾರೆ ಮೊತ್ತ 55 ರನ್‌ ಆಗುವಷ್ಟರಲ್ಲಿ ಸೌರಾಷ್ಟ್ರ  ಒಟ್ಟಾರೆ ಪ್ರಮುಖ 5 ವಿಕೆಟ್‌ ಕಳೆದುಕೊಂಡಿತ್ತು. ಸೌರಾಷ್ಟ್ರ ಪರ ಆರಂಭಿಕ ಹರ್ವಿಕ್‌ ದೇಸಾಯಿ (8 ರನ್‌) ಹಾಗೂ ಸ್ನೇಲ್‌ ಪಟೇಲ್‌ (12 ರನ್‌) ಇನಿಂಗ್ಸ್‌ ಆರಂಭಿಸಿದರು. ಮೊದಲ ಇನಿಂಗ್ಸ್‌ನಲ್ಲಿ  ಶತಕ ಸಿಡಿಸಿ ತಂಡವನ್ನು ಬಾರೀ ಕುಸಿತದಿಂದ ಪಾರು ಮಾಡಿದ್ದ ಸ್ನೇಲ್‌ ಪಟೇಲ್‌ ಈ ಸಲ ಕಳಪೆ ರನ್‌ಗೆ ಔಟಾದರು. ಇವರು ಮೊದಲನೆಯವರಾಗಿ ವಿಕೆಟ್‌ ಕಳೆದುಕೊಂಡರು. ಇವರ ಬೆನ್ನಲ್ಲೇ ಹರ್ವಿಕ್‌ ದೇಸಾಯಿ ಕೂಡ ಪೆವಿಲಿಯನ್‌ ಹಾದಿ ಹಿಡಿದರು. 

ಮೊದಲ ಇನಿಂಗ್ಸ್‌ನಲ್ಲಿ ವಿಫ‌ಲನಾಗಿದ್ದ ಚೇತೇಶ್ವರ ಪೂಜಾರ ಮತ್ತೂಮ್ಮೆ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು. ಅವರು ಆದಿತ್ಯ ಸರ್ವಟೆ ಎಸೆತದಲ್ಲಿ ಎಲ್‌ಬಿ ಆಗಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ಅರ್ಪಿತ್‌ ವಸವದ (5 ರನ್‌), ಶೆಲ್ಡನ್‌ ಜಾಕ್ಸನ್‌ (7 ರನ್‌) ಕೂಡ ವಿಕೆಟ್‌ ಕಳೆದುಕೊಂಡಾಗ ಗಾಯದ ಮೇಲೆ ಬರೆ ಎಳೆದಂತಾಯಿತು.

Advertisement

ಧರ್ಮೇಂದ್ರ ಮಿಂಚು, ವಿದರ್ಭ 200ಕ್ಕೆ ಆಲೌಟ್‌: ಮೂರನೇ ದಿನದ ಆಟದ ಅಂತ್ಯಕ್ಕೆ ವಿದರ್ಭ 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 55 ರನ್‌ಗಳಿಸಿತು. ಬುಧವಾರ ಇಲ್ಲಿಂದ ಬ್ಯಾಟಿಂಗ್‌ ಮುಂದುವರಿಸಿ ಕೇವಲ 200 ರನ್‌ಗಳಿಸಿ ಆಲೌಟಾಯಿತು. ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ ಕೇವಲ 6 ರನ್‌ ಅಲ್ಪ ಮುನ್ನಡೆ ಪಡೆದುಕೊಂಡಿತ್ತು. ಬುಧವಾರ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕ ಮೂಲದ ಬ್ಯಾಟ್ಸ್‌ಮೆನ್‌ ಗಣೇಶ್‌ ಸತೀಶ್‌ (35  ರನ್‌) ಹಾಗೂ ವಾಸಿಂ ಜಾಫ‌ರ್‌ (11 ರನ್‌) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ತಂಡದ ಒಟ್ಟು 71 ರನ್‌ ಆಗಿದ್ದಾಗ ಜಾಫ‌ರ್‌ ಔಟಾದರು. ಇದಕ್ಕೊಂದು ಸೇರಿಕೊಳ್ಳುವಷ್ಟರಲ್ಲಿ ಗಣೇಶ್‌ ಸತೀಶ್‌ ಕೂಡ ಪೆವಿಲಿಯನ್‌ ದಾರಿ ಹಿಡಿದರು. ಮೋಹಿತ್‌ ಕಾಳೆ (38 ರನ್‌) ಹಾಗೂ ಆದಿತ್ಯ ಸರ್ವಟೆ (49 ರನ್‌) ಸ್ವಲ್ಪ ಬ್ಯಾಟ್‌ ಬೀಸಿ ರನ್‌ ಕಲೆಹಾಕಿದ್ದರಿಂದ 200 ರನ್‌ ತನಕ ಸಾಗಲು ವಿದರ್ಭಕ್ಕೆ ಸಾಧ್ಯವಾಯಿತು.

ಧರ್ಮೇಂದ್ರಸಿನ್ಹ ಜಡೇಜ (96ಕ್ಕೆ6) ವಿಕೆಟ್‌ ಕಬಳಿಸಿ ಸೌರಾಷ್ಟ್ರ ಪರ ಯಶಸ್ವಿ ಬೌಲರ್‌ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ-312 ಮತ್ತು 200. ಸೌರಾಷ್ಟ್ರ-307 ಮತ್ತು 5 ವಿಕೆಟಿಗೆ 58 (ಜಡೇಜ ಬ್ಯಾಟಿಂಗ್‌ 23, ಸ್ನೆಲ್‌ ಪಟೇಲ್‌ 12, ದೇಸಾಯಿ 8, ಜಾಕ್ಸನ್‌ 7, ವಸವಾಡ 5, ಪೂಜಾರ 0, ಸರ್ವಟೆ 13ಕ್ಕೆ 3, ವಖಾರೆ 18ಕ್ಕೆ 1, ಯಾದವ್‌ 27ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next