Advertisement

ರಣಜಿ: ಕರ್ನಾಟಕಕ್ಕೂ ಇದೆ ಮುನ್ನಡೆಯ ಅವಕಾಶ

12:30 AM Jan 26, 2019 | Team Udayavani |

ಬೆಂಗಳೂರು: ಕರ್ನಾಟಕ-ಸೌರಾಷ್ಟ್ರ ನಡುವಿನ ರಣಜಿ ಸೆಮಿಫೈನಲ್‌ ಪಂದ್ಯದ 2ನೇ ದಿನ ಸಮಬಲದ ಹೋರಾಟ ನಡೆದಿದೆ. ಕರ್ನಾಟಕ ತನ್ನ ಮೊದಲ ಸರದಿಯನ್ನು 275 ರನ್‌ಗಳಿಗೆ ಮುಗಿಸಿತು. ಇದಕ್ಕೆ ಉತ್ತರ ನೀಡತೊಡಗಿದ ಸೌರಾಷ್ಟ್ರ 2ನೇ ದಿನ 7 ವಿಕೆಟ್‌ ಕಳೆದುಕೊಂಡು 227 ರನ್‌ ಗಳಿಸಿದೆ.

Advertisement

ಬಲಾಡ್ಯ ಬ್ಯಾಟಿಂಗ್‌ ಪಡೆ ಹೊಂದಿರುವ ಸೌರಾಷ್ಟ್ರ ಪಂದ್ಯದ ಮೇಲೆ ಬಿಗಿ ನಿಯಂತ್ರಣ ಹೊಂದಿತ್ತು. 178 ರನ್‌ಗಳಾಗುವಾಗ 4 ವಿಕೆಟ್‌ಗಳು ಮಾತ್ರ ಉರುಳಿದ್ದವು. ಇಲ್ಲಿಂದ ತಂಡ ಇಕ್ಕಟ್ಟಿಗೆ ಸಿಲುಕಿತು. ಇದಕ್ಕೆ ಕಾರಣ ಬಲಗೈ ಮಧ್ಯಮ ವೇಗಿ ರೋನಿತ್‌ ಮೋರೆ. ಅಮೋಘ ದಾಳಿ ಸಂಘಟಿಸಿ ಮೋರೆ 54 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಅದುವರೆಗೆ ನಿಯಂತ್ರಣ ಕಳೆದುಕೊಂಡು ಒದ್ದಾಡುತ್ತಿದ್ದ ರಾಜ್ಯ ತಂಡ ಮತ್ತೆ ಕಳೆಗಟ್ಟಿಕೊಂಡಿತು.

ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಅವರ ಉಪಸ್ಥಿತಿಯಲ್ಲಿ ಅತ್ಯಂತ ಪ್ರಬಲವಾಗಿದ್ದ ಸೌರಾಷ್ಟ್ರ ಬ್ಯಾಟಿಂಗ್‌ ಪಡೆ, ರಾಜ್ಯದ ಬೌಲಿಂಗ್‌ ಮೇಲೆ ಭಾರೀ ಒತ್ತಡ ತರಬಹುದೆನ್ನುವ ನಿರೀಕ್ಷೆಯಿತ್ತು. ಆದರೆ ಇದೀಗ ಹುಸಿಯಾಗಿದೆ.

ಮೋರೆ ಆಕ್ರಮಣ ಜಾರಿ
ಸೌರಾಷ್ಟ್ರದ ಮೊದಲ ವಿಕೆಟ್‌ ಹಾರ್ವಿಕ್‌ ದೇಸಾಯಿ (16) ರೂಪದಲ್ಲಿ 43 ರನ್ನಿಗೆ ಉರುಳಿತು. ಈ ವಿಕೆಟ್‌ ಮೋರೆ ಪಾಲಾಯಿತು. 63 ರನ್‌ ಆದಾಗ ವಿಶ್ವರಾಜ್‌ ಜಡೇಜ (5) ಔಟಾದರು. ಸ್ಕೋರ್‌ 137ಕ್ಕೆ ಏರಿದಾಗ ಸ್ನೆಲ್‌ ಪಟೇಲ್‌ ನಿರ್ಗಮಿಸಿದರು. ತಾಳ್ಮೆ, ತುಸು ಆಕ್ರಮಣ ಎಲ್ಲವನ್ನೂ ಸೇರಿಸಿ ಆಡಿದ ಅವರು 131 ಎಸೆತ ಎದುರಿಸಿ 85 ರನ್‌ ಗಳಿಸಿದರು. ಇದರಲ್ಲಿ 15 ಬೌಂಡರಿಗಳಿದ್ದವು. ಇನ್ನೇನು ಶತಕ ಗಳಿಸಿಯೇ ಬಿಡುತ್ತಾರೆ ಎನ್ನುವ ಹಂತದಲ್ಲಿ ಅವರು ಔಟಾದದ್ದು ಸೌರಾಷ್ಟ್ರಕ್ಕೆ ದೊಡ್ಡ ಹೊಡೆತ ನೀಡಿತು.

ಚೇತೇಶ್ವರ ಪೂಜಾರ (45) ಎಂದಿನಂತೆ ನಿಧಾನ ಗತಿಯಲ್ಲಿ ಆಡುವ ಮೂಲಕ ಕ್ರೀಸ್‌ಗೆ ಕಚ್ಚಿಕೊಳ್ಳುವ ಎಲ್ಲ ಲಕ್ಷಣ ತೋರಿದರು. ಆದರೆ ವೇಗಿ ಅಭಿಮನ್ಯು ಮಿಥುನ್‌ ಎಸೆತವೊಂದು ಅವರನ್ನು ವಂಚಿಸಿತು. 

Advertisement

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-275 (ಶ್ರೇಯಸ್‌ ಗೋಪಾಲ್‌ 87, ಎಸ್‌. ಶರತ್‌ 83, ಮನೀಷ್‌ ಪಾಂಡೆ 62, ಉನಾದ್ಕತ್‌ 56ಕ್ಕೆ 4, ಮಕ್ವಾನಾ 74ಕ್ಕೆ 3, ಜಡೇಜ 79ಕ್ಕೆ 2). ಸೌರಾಷ್ಟ್ರ-7 ವಿಕೆಟಿಗೆ 227 (ಸ್ನೆಲ್‌ ಪಟೇಲ್‌ 85, ಜಾಕ್ಸನ್‌ 46, ಪೂಜಾರ 45, ಮೋರೆ 54ಕ್ಕೆ 5).

Advertisement

Udayavani is now on Telegram. Click here to join our channel and stay updated with the latest news.

Next