Advertisement
ಮಾಯಾಂಕ್ ಅಗರ್ವಾಲ್ ಸಾರಥ್ಯದಲ್ಲಿ ಕಣಕ್ಕಿಳಿದಿರುವ ಕರ್ನಾಟಕ ಈ ಕೂಟದ ಅಜೇಯ ತಂಡವೆಂಬುದನ್ನು ಮರೆಯುವಂತಿಲ್ಲ. ಲೀಗ್‌ನಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದೆ. 5 ಪಂದ್ಯಗಳಲ್ಲಿ ಜಯ ಸಾಧಿಸಿದೆ, ಮೂರರಲ್ಲಿ ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ ದುರ್ಬಲ ಉತ್ತರಾಖಂಡ ಎದುರಾಗಿತ್ತಾದರೂ ಇನ್ನಿಂಗ್ಸ್ ಹಾಗೂ 281 ರನ್ ಜಯಭೇರಿ ಮೊಳಗಿಸಿ ಸೆಮಿಫೈನಲ್‌ಗೆ ಹುರಿಗೊಂಡಿದೆ.
ಕರ್ನಾಟಕ ತಂಡ ಪ್ರಸಕ್ತ ಋತುವಿನಲ್ಲಿ ಸ್ಥಿರವಾದ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ಉತ್ತಮ ಆರಂಭ, ಭರವಸೆಯ ಮಧ್ಯಮ ಕ್ರಮಾಂಕ, ಬೌಲರ್‌ಗಳ ಪರಿಣಾಮಕಾರಿ ದಾಳಿ, ಆಲ್‌ರೌಂಡರ್‌ಗಳ ಅಮೋಘ ಆಟವೆಲ್ಲ ರಾಜ್ಯ ತಂಡವನ್ನು ಫೇವರಿಟ್ ಪಟ್ಟಕ್ಕೇರಿಸಿದೆ.
Related Articles
Advertisement
“ಗ್ರೂಪ್ ವಿನ್ನರ್’ ಆಗಿರುವ ಕರ್ನಾಟಕಕ್ಕೆ ಆರ್. ಸಮರ್ಥ್-ಮಾಯಾಂಕ್ ಅಗರ್ವಾಲ್ ಸಮರ್ಥ ಆರಂಭಿಕ ಜೋಡಿ ಎಂಬುದರಲ್ಲಿ ಎರಡು ಮಾತಿಲ್ಲ. ಇಬ್ಬರೂ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದ ಯುವ ಬ್ಯಾಟರ್ ನಿಕಿನ್ ಜೋಸ್ 420 ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಅನುಭವಿಗಳಾದ ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ ಕ್ರೀಸ್ ಆಕ್ರಮಿಸಿಕೊಳ್ಳುವ ಅಗತ್ಯವಿದೆ. ಅನಾರೋಗ್ಯದಿಂದಾಗಿ ಬಿ.ಆರ್. ಶರತ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಇವರ ಬದಲು ನಿಹಾಲ್ ಉಳ್ಳಾಲ್ ಸ್ಥಾನ ಪಡೆದಿದ್ದಾರೆ.
ಕರ್ನಾಟಕದ ಬೌಲಿಂಗ್ ಈ ಬಾರಿ ಹೆಚ್ಚು ಹರಿತವಾಗಿದೆ. ವಿದ್ವತ್ ಕಾವೇರಪ್ಪ, ವಿಜಯಕುಮಾರ್ ವೈಶಾಖ್, ಪದಾರ್ಪಣ ಪಂದ್ಯದಲ್ಲೇ 5 ವಿಕೆಟ್ ಕಿತ್ತ ಮುರಳೀಧರ್ ವೆಂಕಟೇಶ್ ವೇಗದ ಅಸ್ತ್ರಗಳು. ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾದ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್ ವಿಕೆಟ್ ಬೇಟೆಗೆ ಮುಂದಾದರೆ ಕರ್ನಾಟಕದ ಮೇಲುಗೈ ನಿರೀಕ್ಷಿಸಲಡ್ಡಿಯಿಲ್ಲ. ಶ್ರೇಯಸ್ ಕ್ವಾರ್ಟರ್ ಫೈನಲ್‌ನಲ್ಲಿ ಅಜೇಯ 161 ರನ್ ಬಾರಿಸಿ ಮಿಂಚಿದ್ದರು.
ಮೂವರು ಪ್ರಮುಖರ ಗೈರುಸೌರಾಷ್ಟ್ರದ ಮೂವರು ಆಟಗಾರರು ಟೆಸ್ಟ್ ತಂಡದಲ್ಲಿರುವುದರಿಂದ ಅಷ್ಟರ ಮಟ್ಟಿಗೆ ತಂಡಕ್ಕೆ ಹಿನ್ನಡೆಯಾಗಲಿದೆ. ನಾಯಕ ಜೈದೇವ್ ಉನಾದ್ಕತ್, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ ಗೈರಲ್ಲಿ ತಂಡ ಕಣಕ್ಕಿಳಿಯಬೇಕಿದೆ.
ಕ್ವಾರ್ಟರ್ ಫೈನಲ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಪಾರ್ಥ ಭಟ್, ನಾಯಕ ಅರ್ಪಿತ್ ವಸವಾಡ, ಪ್ರೇರಕ್ ಮಂಕಡ್, ಚೇತನ್ ಸಕಾರಿಯ, ಹಾರ್ವಿಕ್ ದೇಸಾಯಿ, ಶೆಲ್ಡನ್ ಜಾಕ್ಸನ್ ಅವರನ್ನೊಳಗೊಂಡ ಸೌರಾಷ್ಟ ಎಷ್ಟರ ಮಟ್ಟಿಗೆ ಹೋರಾಟ ಸಂಘಟಿಸೀತು ಎಂಬುದೊಂದು ಕುತೂಹಲ. ಕೊನೆಯ ಮುಖಾಮುಖಿ
ಕರ್ನಾಟಕ-ಸೌರಾಷ್ಟ್ರ ಕೊನೆಯ ಸಲ ಎದುರಾದದ್ದು 2020ರ ಲೀಗ್ ಹಂತದಲ್ಲಿ. ಪೂಜಾರ ಅವರ 248 ರನ್ ಸಾಹಸದಿಂದ 7ಕ್ಕೆ 581 ರನ್ ಪೇರಿಸಿದ ಸೌರಾಷ್ಟ್ರ, ಕರ್ನಾಟಕವನ್ನು ಪರಾಭವಗೊಳಿಸಿತ್ತು. ಸಂಭಾವ್ಯ ತಂಡಗಳು
ಕರ್ನಾಟಕ: ಮಾಯಾಂಕ್ ಅಗರ್ವಾಲ್ (ನಾಯಕ), ಆರ್. ಸಮರ್ಥ್, ದೇವದತ್ತ ಪಡಿಕ್ಕಲ್, ನಿಕಿನ್ ಜೋಸ್, ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್, ಎಸ್. ಶರತ್ (ವಿ.ಕೀ.), ಕೆ. ಗೌತಮ್, ಎಂ. ವೆಂಕಟೇಶ್, ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್‌ಕುಮಾರ್. ಸೌರಾಷ್ಟ್ರ: ಹಾರ್ವಿಕ್ ದೇಸಾಯಿ (ವಿ.ಕೀ.), ಸ್ನೆಲ್ ಪಟೇಲ್, ವಿಶ್ವರಾಜ್ ಜಡೇಜ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಸವಾಡ (ನಾಯಕ), ಚಿರಾಗ್ ಜಾನಿ, ಪ್ರೇರಕ್ ಮಂಕಡ್, ಧರ್ಮೇಂದ್ರಸಿನ್ಹ ಜಡೇಜ, ಪಾರ್ಥ್ ಭಟ್, ಚೇತನ್ ಸಕಾರಿಯ, ಯುವರಾಜ್‌ಸಿನ್ ದೋಡಿಯ.