Advertisement

Ranji Trophy ಸೆಮಿಫೈನಲ್ಸ್‌ : ಮೊದಲ ದಿನವೇ ಮುಂಬಯಿ ಮೆರೆದಾಟ

11:24 PM Mar 02, 2024 | Team Udayavani |

ಮುಂಬಯಿ: ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ಮೊದಲ ದಿನವೇ ಮುಂಬಯಿ ಬೌಲರ್ ಮೆರೆದಾಡಿದ್ದಾರೆ. ತಮಿಳುನಾಡು ಹಳಿ ತಪ್ಪಿದ್ದು, ಕೇವಲ 146 ರನ್ನುಗಳಿಗೆ ಸರ್ವಪತನ ಕಂಡಿದೆ. ಮುಂಬಯಿ ಕೂಡ ಆತಂಕದ ಕ್ಷಣಗಳನ್ನೆದುರಿಸಿದ್ದು, 2 ವಿಕೆಟಿಗೆ 45 ರನ್‌ ಮಾಡಿದೆ.

Advertisement

ತಮಿಳುನಾಡು 7 ವರ್ಷಗಳ ಬಳಿಕ ರಣಜಿ ಸೆಮಿಫೈನಲ್‌ ಆಡಲಿಳಿದಿತ್ತು. ಆದರೆ “ಶರದ್‌ ಪವಾರ್‌ ಕ್ರಿಕೆಟ್‌ ಅಕಾಡೆಮಿ ಬಿಕೆಸಿ’ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ನಾಯಕ ಬಿ. ಸಾಯಿ ಕಿಶೋರ್‌ ನಿರ್ಧಾರ ತಲೆ ಕೆಳಗಾಗಲು ಹೆಚ್ಚು ವೇಳೆ ಹಿಡಿಯಲಿಲ್ಲ. 4ನೇ ಎಸೆತದಿಂದಲೇ ತಂಡದ ಕುಸಿತ ಮೊದಲ್ಗೊಂಡಿತು. 42 ರನ್‌ ಆಗುವಷ್ಟರಲ್ಲಿ ಐವರು ಪೆವಿಲಿಯನ್‌ ಸೇರಿ ಆಗಿತ್ತು. ತುಷಾರ್‌ ದೇಶಪಾಂಡೆ, ಶಾದೂìಲ್‌ ಠಾಕೂರ್‌, ಮೋಹಿತ್‌ ಅವಸ್ಥಿ ಸೇರಿಕೊಂಡು ತಮಿಳುನಾಡು ಮೇಲೆ ಬೌಲಿಂಗ್‌ ಆಕ್ರಮಣಗೈದರು.

ಸಾಯಿ ಸುದರ್ಶನ್‌ (0) 4ನೇ ಎಸೆತದಲ್ಲಿ ಶಾದೂìಲ್‌ ಠಾಕೂರ್‌ಗೆ ಲೆಗ್‌ ಬಿಫೋರ್‌ ಆದರು. ಬೆನ್ನಲ್ಲೇ ಎನ್‌. ಜಗದೀಶನ್‌ (4), ಪ್ರದೋಷ್‌ ಪೌಲ್‌ (8), ಸಾಯಿ ಕಿಶೋರ್‌ (1), ಬಾಬಾ ಇಂದ್ರಜಿತ್‌ (11) ಘೋರ ವೈಫ‌ಲ್ಯ ಕಂಡರು. ಇವರು ಸೇರಿ ಗಳಿಸಿದ್ದು ಕೇವಲ 24 ರನ್‌. ಮುಂಬಯಿ ಬೌಲರ್ ಮುಂಜಾನೆಯ ಮಂಜಿನ ಸಂಪೂರ್ಣ ಲಾಭವೆತ್ತಿದರು.

5ನೇ ವಿಕೆಟ್‌ ಪತನದ ಬಳಿಕ ತಮಿಳು ನಾಡಿನ ಬ್ಯಾಟಿಂಗ್‌ ಒಂದಿಷ್ಟು ಚೇತರಿಸಿ ಕೊಂಡಿತು. ವಿಜಯ್‌ ಶಂಕರ್‌ (44), ವಾಷಿಂಗ್ಟನ್‌ ಸುಂದರ್‌ (43), ಎಂ. ಮೊಹಮ್ಮದ್‌ (17) ಮತ್ತು ಎಸ್‌. ಅಜಿತ್‌ ರಾಮ್‌ (15) ಸೇರಿಕೊಂಡು ಮೊತ್ತವನ್ನು ನೂರೈವತ್ತರ ಗಡಿ ತನಕ ಕೊಂಡೊಯ್ದರು. ಆದರೆ ಸೆಮಿಫೈನಲ್‌ನಂಥ ಮಹತ್ವದ ಮುಖಾಮುಖೀಗೆ ಈ ಮೊತ್ತ ಏನೂ ಸಾಲದಾಗಿದೆ.

ಮುಂಬಯಿ ಪರ ಶಮ್ಸ್‌ ಮುಲಾನಿ ಹೊರತುಪಡಿಸಿ ಉಳಿದವರೆಲ್ಲ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ತುಷಾರ್‌ ದೇಶಪಾಂಡೆ 3 ವಿಕೆಟ್‌; ಶಾರ್ದೂಲ್‌ ಠಾಕೂರ್‌, ಮುಶೀರ್‌ ಖಾನ್‌ ಮತ್ತು ತನುಷ್‌ ಕೋಟ್ಯಾನ್‌ ತಲಾ 2 ವಿಕೆಟ್‌ ಕೆಡವಿದರು.

Advertisement

ನಡೆದೀತೇ ಮ್ಯಾಜಿಕ್‌?
ಮುಂಬಯಿ ಈಗಾಗಲೇ ಆರಂಭಿಕ ರಾದ ಪೃಥ್ವಿ ಶಾ (5) ಮತ್ತು ಭೂಪೇನ್‌ ಲಾಲ್ವಾನಿ (15) ಅವರ ವಿಕೆಟ್‌ ಕಳೆದುಕೊಂಡಿದೆ. ಮುಶೀರ್‌ ಖಾನ್‌ (24) ಮತ್ತು ಮೋಹಿತ್‌ ಅವಸ್ಥಿ (1) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ವಿಕೆಟ್‌ ಕೆಡವಿದವರು ಕುಲ್ದೀಪ್‌ ಸೇನ್‌ ಮತ್ತು ಸಾಯಿ ಕಿಶೋರ್‌.
ರವಿವಾರದ ಮೊದಲ ಅವಧಿಯ ಆಟದಲ್ಲಿ ಬೌಲಿಂಗ್‌ ಮ್ಯಾಜಿಕ್‌ ನಡೆದರಷ್ಟೇ ತಮಿಳುನಾಡು ಸಮಬಲದ ಹೋರಾಟ ನೀಡೀತು. ಇಲ್ಲವಾದರೆ ಮುಂಬಯಿ ದೊಡ್ಡ ಮುನ್ನಡೆಯೊಂದಿಗೆ ಪಂದ್ಯದ ಮೇಲಿನ ಹಿಡಿತವನ್ನು ಬಿಗಿಗೊಳಿಸುವುದರಲ್ಲಿ ಅನುಮಾನವಿಲ್ಲ.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು-146 (ವಿಜಯ್‌ ಶಂಕರ್‌ 44, ವಾಷಿಂಗ್ಟನ್‌ ಸುಂದರ್‌ 43, ಎಂ. ಮೊಹಮ್ಮದ್‌ 17, ಎಸ್‌. ಅಜಿತ್‌ ರಾಮ್‌ 15, ತುಷಾರ್‌ ದೇಶಪಾಂಡೆ 24ಕ್ಕೆ 3, ತನುಷ್‌ ಕೋಟ್ಯಾನ್‌ 10ಕ್ಕೆ 2, ಮುಶೀರ್‌ ಖಾನ್‌ 18ಕ್ಕೆ 2, ಶಾದೂìಲ್‌ ಠಾಕೂರ್‌ 48ಕ್ಕೆ 2, ಮೋಹಿತ್‌ ಅವಸ್ಥಿ 23ಕ್ಕೆ 1). ಮುಂಬಯಿ-2 ವಿಕೆಟಿಗೆ 45 (ಮುಶೀರ್‌ ಖಾನ್‌ ಬ್ಯಾಟಿಂಗ್‌ 24, ಭೂಪೇನ್‌ ಲಾಲ್ವಾನಿ 15, ಸಾಯಿ ಕಿಶೋರ್‌ 3ಕ್ಕೆ 1, ಕುಲ್ದೀಪ್‌ ಸೇನ್‌ 25ಕ್ಕೆ 1).

ಆವೇಶ್‌ಗೆ 4 ವಿಕೆಟ್‌; ವಿದರ್ಭ 170 ಆಲೌಟ್‌
ನಾಗ್ಪುರ: ಆವೇಶ್‌ ಖಾನ್‌ ಆ್ಯಂಡ್‌ ಕಂಪೆನಿಯ ಬೌಲಿಂಗ್‌ ಆಕ್ರಮಣಕ್ಕೆ ಆತಿಥೇಯ ವಿದರ್ಭ ತತ್ತರಿಸಿದೆ. ಮಧ್ಯ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ಮೊದಲ ದಿನವೇ 170ಕ್ಕೆ ಆಲೌಟ್‌ ಆಗಿದೆ. ಜವಾಬು ನೀಡಲಾರಂಭಿಸಿದ ಮಧ್ಯ ಪ್ರದೇಶ ಒಂದು ವಿಕೆಟಿಗೆ 47 ರನ್‌ ಗಳಿಸಿ ಮೇಲುಗೈ ಸಾಧಿಸಿದೆ.

ತಮಿಳುನಾಡಿನಂತೆ ವಿದರ್ಭ ಕೂಡ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿತ್ತು. ಆದರೆ ತವರಿನ ಪಿಚ್‌ ಮೇಲೆ ಚಡಪಡಿಸಿತು. ಆವೇಶ್‌ ಖಾನ್‌, ಕುಲ್ವಂತ್‌ ಖೆಜೊಲಿಯ, ವೆಂಕಟೇಶ್‌ ಅಯ್ಯರ್‌, ಕುಮಾರ ಕಾರ್ತಿಕೇಯ ಮತ್ತು ಅನುಭವ್‌ ಅಗರ್ವಾಲ್‌ ಸೇರಿಕೊಂಡು ಆತಿಥೇಯರ ಮೇಲೆರಗಿದರು.

106 ರನ್‌ ಆಗುವಷ್ಟರಲ್ಲಿ ವಿದರ್ಭದ 5 ವಿಕೆಟ್‌ ಉರುಳಿತು. ಕೊನೆಯ 5 ವಿಕೆಟ್‌ಗಳು ಬರೀ 38 ರನ್‌ ಅಂತರದಲ್ಲಿ ಬಿದ್ದವು. ವಿದರ್ಭದ ಬ್ಯಾಟಿಂಗ್‌ ಸರದಿಯಲ್ಲಿ ಹೋರಾಟ ಸಂಘಟಿಸಿದವರು ಇಬ್ಬರು ಮಾತ್ರ-ಕರ್ನಾಟಕವನ್ನು ತೊರೆದು ಹೋಗಿದ್ದ ಕರುಣ್‌ ನಾಯರ್‌ ಮತ್ತು ಆರಂಭಕಾರ ಅಥರ್ವ ತೈಡೆ. ನಾಯರ್‌ 105 ಎಸೆತಗಳನ್ನೆದುರಿಸಿ 63 ರನ್‌ ಮಾಡಿದರು (9 ಬೌಂಡರಿ). ಇದು ವಿದರ್ಭ ಸರದಿಯ ಏಕೈಕ ಅರ್ಧ ಶತಕವಾಗಿತ್ತು. ಅಥರ್ವ ತೈಡೆ 39 ರನ್‌ ಹೊಡೆದರು. 49ಕ್ಕೆ 4 ವಿಕೆಟ್‌ ಉರುಳಿಸಿದ ಆವೇಶ್‌ ಖಾನ್‌ ಮಧ್ಯ ಪ್ರದೇಶದ ಯಶಸ್ವಿ ಬೌಲರ್‌.

Advertisement

Udayavani is now on Telegram. Click here to join our channel and stay updated with the latest news.

Next