Advertisement

ರಣಜಿ ಟ್ರೋಫಿ ಸೆಮಿಫೈನಲ್‌: ಕಾಡಿದ ಸೌರಾಷ್ಟ್ರ; ಕಾಪಾಡಿದ ಅಗರ್ವಾಲ್‌

11:13 PM Feb 08, 2023 | Team Udayavani |

ಬೆಂಗಳೂರು: ನಂಬುಗೆಯ ಬ್ಯಾಟರ್‌ಗಳೆಲ್ಲ ಸಾಲು ಸಾಲಾಗಿ ಕೈಕೊಟ್ಟಾಗ ಕಪ್ತಾನನ ಆಟದ ಮೂಲಕ ಅಜೇಯ ಶತಕ ಬಾರಿಸಿದ ಮಾಯಾಂಕ್‌ ಅಗರ್ವಾಲ್‌, ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಕರ್ನಾಟಕವನ್ನು ಕಾಪಾಡಲು ಟೊಂಕ ಕಟ್ಟಿದ್ದಾರೆ. ಸೌರಾಷ್ಟ್ರ ಎದುರಿನ ಈ ಪಂದ್ಯದಲ್ಲಿ ಆತಿಥೇಯ ಕರ್ನಾಟಕ 5 ವಿಕೆಟಿಗೆ 229 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿದೆ.

Advertisement

ಭಾರೀ ಹೋರಾಟ ನಡೆಸಿ ಗಳಿಸಿದ ಈ ಮೊತ್ತದಲ್ಲಿ ಮಾಯಾಂಕ್‌ ಅಗರ್ವಾಲ್‌ ಕೊಡುಗೆ ಅಜೇಯ 110 ರನ್‌. ಇವರಿಗೆ ವಿಕೆಟ್‌ ಕೀಪರ್‌ ಶ್ರೀನಿವಾಸ್‌ ಶರತ್‌ ಅತ್ಯುತ್ತಮ ಬೆಂಬಲ ನೀಡಿದ್ದು, 58 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 41ನೇ ಓವರ್‌ನಲ್ಲಿ ಕೇವಲ 112 ರನ್ನಿಗೆ 5 ವಿಕೆಟ್‌ ಉರುಳಿದಾಗ ಅಗರ್ವಾಲ್‌-ಶರತ್‌ ಸೇರಿಕೊಂಡು ತಂಡದ ರಕ್ಷಣೆಗೆ ಧಾವಿಸಿದರು. ಮುಂದಿನ 37 ಓವರ್‌ಗಳನ್ನು ತಮ್ಮ ಬ್ಯಾಟಿಂಗ್‌ಗೆ ಮೀಸಲಿರಿಸಿದ ಇವರು ಅಜೇಯ 117 ರನ್‌ ಜತೆಯಾಟ ನಡೆಸಿ ಕರ್ನಾಟಕವನ್ನು ಮೇಲೆತ್ತಿದರು. ಸೌರಾಷ್ಟ್ರ ಬೌಲರ್‌ಗಳಿಗೆ ಭಾರೀ ಸವಾಲಾಗಿ ಉಳಿದರು.

ಆರಂಭಕಾರ ಮಾಯಾಂಕ್‌ ಅಗರ್ವಾಲ್‌ 246 ಎಸೆತಗಳನ್ನು ಎದುರಿಸಿ ಅತ್ಯಂತ ತಾಳ್ಮೆಯ ಹಾಗೂ ಅವಿಸ್ಮರಣೀಯ ಇನ್ನಿಂಗ್ಸ್‌ ಒಂದನ್ನು ಕಟ್ಟಿದರು. ಇವರ 110ರ ಮೊತ್ತದಲ್ಲಿ 11 ಬೌಂಡರಿ, ಒಂದು ಸಿಕ್ಸರ್‌ ಸೇರಿದೆ. ಎಸ್‌. ಶರತ್‌ ಅವರ 58 ರನ್‌ 143 ಎಸೆತಗಳಿಂದ ಬಂದಿದೆ. ಹೊಡೆದದ್ದು 4 ಬೌಂಡರಿ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಸೌರಾಷ್ಟ್ರ ಇದರಲ್ಲಿ ಭರಪೂರ ಯಶಸ್ಸು ಸಾಧಿಸಿತು. ಪ್ರಸಕ್ತ ಕೂಟದುದ್ದಕ್ಕೂ ಅಮೋಘ ಫಾರ್ಮ್ ತೋರ್ಪಡಿಸುತ್ತ ಬಂದ ರವಿಕುಮಾರ್‌ ಸಮರ್ಥ್ಗೆ ಇಲ್ಲಿ ಲಯವೇ ಸಿಗಲಿಲ್ಲ. 20 ಎಸೆತಗಳಿಂದ 3 ರನ್‌ ಮಾಡಿ ಕುಶಾಂಗ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು. ಕುಸಿತಕ್ಕೆ ಚಾಲನೆ ನೀಡಿದರು.

ದೇವದತ್ತ ಪಡಿಕ್ಕಲ್‌ ಬಡಬಡನೆ 2 ಬೌಂಡರಿ ಬಾರಿಸಿ ದರೂ ಈ ಬಿರುಸನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಕೇವಲ 9 ರನ್‌ ಮಾಡಿ ಚೇತನ್‌ ಸಕಾರಿಯಾಗೆ ವಿಕೆಟ್‌ ಒಪ್ಪಿಸಿದರು. 21 ರನ್ನಿಗೆ 2 ವಿಕೆಟ್‌ ಬಿತ್ತು.

Advertisement

ಬಳಿಕ ಅಗರ್ವಾಲ್‌-ನಿಕಿನ್‌ ಜೋಸ್‌ ಜೋಡಿ ಸ್ವಲ್ಪ ಹೊತ್ತು ಕುಸಿತವನ್ನು ತಡೆದು ನಿಂತಿತು. 3ನೇ ವಿಕೆಟಿಗೆ 47 ರನ್‌ ಒಟ್ಟುಗೂಡಿತು. ಸ್ಕೋರ್‌ 68 ರನ್‌ ಆದಾಗ 18 ರನ್‌ ಮಾಡಿದ ಜೋಸ್‌ ಪೆವಿಲಿಯನ್‌ ಸೇರಿಕೊಂಡರು. ಅನುಭವಿ ಮನೀಷ್‌ ಪಾಂಡೆ ಕೂಡ ತಂಡದ ರಕ್ಷಣೆಗೆ ನಿಲ್ಲಲಿಲ್ಲ. 7 ರನ್‌ ಮಾಡಿದ ಅವರು ಪ್ರೇರಕ್‌ ಮಂಕಡ್‌ಗೆ ವಿಕೆಟ್‌ ಒಪ್ಪಿಸಿ ನಡೆದರು. ಕ್ವಾರ್ಟರ್‌ ಫೈನಲ್‌ ಭರ್ಜರಿ ಶತಕ ಹೊಡೆದಿದ್ದ ಶ್ರೇಯಸ್‌ ಗೋಪಾಲ್‌ ಇಲ್ಲಿ 15 ರನ್‌ ಮಾಡಿ ರನೌಟ್‌ ಕಂಟಕಕ್ಕೆ ಸಿಲುಕಬೇಕಾಯಿತು. ಹೀಗೆ 112ಕ್ಕೆ 5 ವಿಕೆಟ್‌ ಹಾರಿಸಿದ ಸೌರಾಷ್ಟ್ರ ಮತ್ತೂಮ್ಮೆ ಕರ್ನಾಟಕದ ಮೇಲೆ ಸವಾರಿ ಮಾಡುವ ಸೂಚನೆ ನೀಡಿತು.

ಸಂಕ್ಷಿಪ್ತ ಸ್ಕೋರ್‌:
ಕರ್ನಾಟಕ-5 ವಿಕೆಟಿಗೆ 229 (ಸಮರ್ಥ್ 3, ಅಗರ್ವಾಲ್‌ ಬ್ಯಾಟಿಂಗ್‌ 110, ಪಡಿಕ್ಕಲ್‌ 9, ಜೋಸ್‌ 18, ಪಾಂಡೆ 7, ಶ್ರೇಯಸ್‌ ಗೋಪಾಲ್‌ 15, ಶರತ್‌ ಬ್ಯಾಟಿಂಗ್‌ 58, ಕುಶಾಂಗ್‌ ಪಟೇಲ್‌ 64ಕ್ಕೆ 2, ಚೇತನ್‌ ಸಕಾರಿಯ 39ಕ್ಕೆ 1, ಪ್ರೇರಕ್‌ ಮಂಕಡ್‌ 42ಕ್ಕೆ 1).

ಘರಾಮಿ, ಅನುಸ್ತೂಪ್‌ ಶತಕ
ಇಂದೋರ್‌: ಇನ್ನೊಂದು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ವಿರುದ್ಧ ಬಂಗಾಲ ಭರ್ಜರಿ ಆರಂಭ ಪಡೆದಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡು 4 ವಿಕೆಟಿಗೆ 307 ರನ್‌ ಪೇರಿಸಿದೆ.

ಸುದೀಪ್‌ ಕುಮಾರ್‌ ಘರಾಮಿ ಮತ್ತು ಅನುಸ್ತೂಪ್‌ ಮಜುಮಾªರ್‌ ಅವರ ಶತಕ ಬಂಗಾಲ ಸರದಿಯ ಆಕರ್ಷಣೆ ಆಗಿತ್ತು. ಘರಾಮಿ 213 ಎಸೆತಗಳಿಂದ 112 ರನ್‌ (12 ಬೌಂಡರಿ, 2 ಸಿಕ್ಸರ್‌), ಮಜುಮಾªರ್‌ 206 ಎಸೆತ ಎದುರಿಸಿ 120 ರನ್‌ (13 ಬೌಂಡರಿ, 1 ಸಿಕ್ಸರ್‌) ಬಾರಿಸಿದರು.

ಇವರಿಂದ 3ನೇ ವಿಕೆಟಿಗೆ 241 ರನ್‌ ಸಂಗ್ರಹಗೊಂಡಿತು. ಇಬ್ಬರೂ ದ್ವಿತೀಯ ದಿನಕ್ಕೆ ಬ್ಯಾಟಿಂಗ್‌ ವಿಸ್ತರಿಸುವ ಎಲ್ಲ ಸಾಧ್ಯತೆ ಇತ್ತು. ಆದರೆ ದಿನದಾಟದ ಮುಕ್ತಾಯಕ್ಕೆ ಇನ್ನೇನು 5 ಓವರ್‌ ಉಳಿದಿರುವಾಗ, 4 ರನ್‌ ಅಂತರದಲ್ಲಿ ಇವರಿಬ್ಬರನ್ನೂ ಔಟ್‌ ಮಾಡುವ ಮೂಲಕ ಮಧ್ಯಪ್ರದೇಶ ನಿಟ್ಟುಸಿರೆಳೆಯಿತು.

ಅನುಭವ್‌ ಅಗರ್ವಾಲ್‌ 2, ಆವೇಶ್‌ ಖಾನ್‌ ಮತ್ತು ಗೌರವ್‌ ಯಾದವ್‌ ತಲಾ ಒಂದು ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next