ನಾಗ್ಪುರ: ಒಂದು ತಿಂಗಳ ಲೀಗ್ ಹಣಾಹಣಿಯ ಬಳಿಕ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಸ್ಪರ್ಧೆಗೆ ಸಮಯ ಕೂಡಿಬಂದಿದೆ. ಬಹುತೇಕ ಬಲಿಷ್ಠ ತಂಡಗಳೇ ನಾಕೌಟ್‌ಗೆ ಪ್ರವೇಶ ಪಡೆದಿವೆ. ಇವುಗಳಲ್ಲಿ ಕರ್ನಾಟಕವೂ ಒಂದು. ನಾಗ್ಪುರದಲ್ಲಿ ನಡೆಯುವ ಮುಖಾಮುಖೀಯಲ್ಲಿ ಮಾಯಾಂಕ್ ಅಗರ್ವಾಲ್ ಪಡೆ ವಿದರ್ಭವನ್ನು ಎದುರಿಸಲಿದೆ.
41 ಬಾರಿಯ ಚಾಂಪಿಯನ್ ಮುಂಬಯಿ, ತಮಿಳುನಾಡು, ಬರೋಡ, ಸೌರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಮಧ್ಯ ಪ್ರದೇಶ ಉಳಿದ ತಂಡಗಳು.
ವಿದರ್ಭ ಅಜೇಯ ತಂಡ:
ಕರ್ನಾಟಕದ ಎದುರಾಳಿಯಾಗಿರುವ ವಿದರ್ಭಕ್ಕೆ ಇದು ತವರಿನ ಪಂದ್ಯ. ಗ್ರೂಪ್ ವಿಭಾಗದಲ್ಲಿ ಅತ್ಯಧಿಕ 5 ಪಂದ್ಯ ಗೆದ್ದ ಕೇವಲ 2ನೇ ತಂಡವೆಂಬುದು ವಿದರ್ಭದ ಹಿರಿಮೆ. ಇನ್ನೊಂದು ತಂಡ ಮುಂಬಯಿ. ವಿದರ್ಭ “ಎ’ ವಿಭಾಗದ ಟಾಪ್ ಟೀಮ್. ಒಂದು ಪಂದ್ಯ ಸೋತ ಕರ್ನಾಟಕ “ಸಿ’ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು.
ಫಯಾಜ್ ಫಜಲ್ ಕೊನೆಯ ಲೀಗ್ ಪಂದ್ಯದ ಬಳಿಕ ನಿವೃತ್ತಿ ಘೋಷಿಸಿದ್ದು ವಿದರ್ಭಕ್ಕೆ ಎದುರಾದ ದೊಡ್ಡ ಹಿನ್ನಡೆ. ನಾಯಕ ಅಕ್ಷಯ್ ವಾಡ್ಕರ್ (431 ರನ್), ಧ್ರುವ ಶೋರಿ (427 ರನ್) ಹಾಗೂ ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್ (391 ರನ್) ವಿದರ್ಭದ ಪ್ರಮುಖ ಬ್ಯಾಟರ್‌ಗಳಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆದಿತ್ಯ ಸರ್ವಟೆ, ಆದಿತ್ಯ ಠಾಕರೆ ತಲಾ 30 ವಿಕೆಟ್ ಉಡಾಯಿಸಿ ಅಪಾಯಕಾರಿಗಳಾಗಿ ಗೋಚರಿಸಿದ್ದಾರೆ.
ಕಾಡಲಿದೆ ಪಡಿಕ್ಕಲ್ ಗೈರು :
ಕರ್ನಾಟಕಕ್ಕೆ ದೇವದತ್ತ ಪಡಿಕ್ಕಲ್ ಗೈರು ಖಂಡಿತ ಕಾಡಲಿದೆ. ಅವರು ಭಾರತದ ಟೆಸ್ಟ್ ತಂಡದಲ್ಲಿದ್ದಾರೆ. ನಾಲ್ಕೇ ಪಂದ್ಯಗಳಲ್ಲಿ 556 ರನ್ ಪೇರಿಸಿದ ಹೆಗ್ಗಳಿಕೆ ಪಡಿಕ್ಕಲ್ ಅವರದ್ದಾಗಿದೆ. ಸರಾಸರಿ 92.66. ಹಿರಿಯ ಬ್ಯಾಟರ್ ಮನೀಷ್ ಪಾಂಡೆ (464 ರನ್), ಶರತ್ ಶ್ರೀನಿವಾಸ್ (429 ರನ್) ಕರ್ನಾಟಕದ ಟಾಪ್-2 ಬ್ಯಾಟರ್‌ಗಳಾಗಿದ್ದಾರೆ.
ನಾಯಕ ಮಾಯಾಂಕ್ ಅಗರ್ವಾಲ್, ಇವರ ಆರಂಭಿಕ ಜತೆಗಾರ ಆರ್. ಸಮರ್ಥ್, ನಿಕಿನ್ ಜೋಸ್ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶಿಸಬೇಕಾದ ಅಗತ್ಯವಿದೆ.
ಕ್ವಾರ್ಟರ್ ಫೈನಲ್ಸ್ :
- ವಿದರ್ಭ-ಕರ್ನಾಟಕ (ನಾಗ್ಪುರ)
- ಮುಂಬಯಿ-ಬರೋಡ (ಮುಂಬಯಿ)
- ತಮಿಳುನಾಡು-ಸೌರಾಷ್ಟ್ರ (ಕೊಯಮತ್ತೂರು)
- ಮಧ್ಯ ಪ್ರದೇಶ-ಆಂಧ್ರ ಪ್ರದೇಶ (ಇಂದೋರ್)