ಬೆಂಗಳೂರು: ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವವನ್ನು ಮುಂಬೈ ತಂಡ ಸಾಧಿಸಿದೆ. ಉತ್ತರಾಖಂಡ ವಿರುದ್ಧ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ 725 ರನ್ ಅಂತರದ ಗೆಲುವು ಸಾಧಿಸಿದೆ.
ಇದು ಈಗ ಪ್ರಥಮ ದರ್ಜೆಯ ಇತಿಹಾಸದಲ್ಲಿ (ರನ್‌ಗಳಿಂದ) ಗೆಲುವಿನ ಅತ್ಯಧಿಕ ಅಂತರವಾಗಿದೆ. 1929/30 ರಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧ ನ್ಯೂ ಸೌತ್ ವೇಲ್ಸ್ ತಂಡ 685 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಮೊದಲ ಇನ್ನಿಂಗ್ಸ್ ಭಾರಿ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮಂಬೈಗೆ ನಾಯಕ ಪೃಥ್ವಿ ಶಾ (72) ಮತ್ತು ಯಶಸ್ವಿ ಜೈಸ್ವಾಲ್ (103) ನೆರವಾದರು. ಮೂರು ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಮುಂಬೈ ತಂಡ ಉತ್ತರಾಖಂಡಕ್ಕೆ 795 ರನ್‌ಗಳ ಗುರಿಯನ್ನು ನೀಡಿತು.
ಇದನ್ನೂ ಓದಿ:ನಡೆಯಿತು ಸ್ವಯಂ ವಿವಾಹ: ತನ್ನನ್ನು ತಾನೇ ವಿವಾಹವಾದ ಕ್ಷಮಾ ಬಿಂದು
ಬೃಹತ್ ಗುರಿ ಬೆನ್ನತ್ತಿದ್ದ ಉತ್ತರಾಖಂಡ ತಂಡವು ಸತತ ವಿಕೆಟ್ ಕಳೆದುಕೊಂಡಿತು. ಕೇವಲ 69 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಉತ್ತರಾಖಂಡವು 725 ರನ್ ಅಂತರದಲ್ಲಿ ಸೋಲನುಭವಿಸಿತು. ಮುಂಬೈ ಪರ ಧವಳ್ ಕುಲಕರ್ಣಿ, ಶಮ್ಸ್ ಮಲಾನಿ ಮತ್ತು ತನುಶ್ ಕೋಟ್ಯಾನ್ ತಲಾ ಮೂರು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ನಲ್ಲಿ ಮುಂಬೈ ತಂಡ ಎಂಟು ವಿಕೆಟ್ ನಷ್ಟಕ್ಕೆ 647 ರನ್ ಗಳಿಸಿತ್ತು. ಚೊಚ್ಚಲ ಪಂದ್ಯವಾಡಿದ ಸುವೇದ್ ಪಾರ್ಕರ್ 252 ರನ್, ಸರ್ಫರಾಜ್ ಖಾನ್ 153 ರನ್ ಗಳಿಸಿದ್ದರು. ಉತ್ತರಾಖಂಡ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 114 ರನ್ ಗಳಿಸಿತ್ತು.