Advertisement

Ranji Trophy: ಕರ್ನಾಟಕ ವಿರುದ್ಧ ಮಧ್ಯಪ್ರದೇಶ 232/4

09:26 PM Oct 12, 2024 | Team Udayavani |

ಇಂದೋರ್‌: ಇಲ್ಲಿನ ಹೋಲ್ಕರ್‌ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್‌ ಗ್ರೂಪ್‌ “ಸಿ’ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮಧ್ಯಪ್ರದೇಶ ತಂಡ ಸಾಧಾರಣ ರನ್‌ ಪೇರಿಸಿದೆ. ಶನಿವಾರ 2ನೇ ದಿನದಾಟದ ಅಂತ್ಯಕ್ಕೆ ಅದು, 83 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 232 ರನ್‌ ಕಲೆಹಾಕಿದೆ.

Advertisement

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮಧ್ಯಪ್ರದೇಶದಿಂದ ಆರಂಭಿಕ ಬ್ಯಾಟರ್‌ಗಳಾದ ಯಶ್‌ ದುಬೆ 20 ರನ್‌ ಬಾರಿಸಿದರೆ, ಹಿಮಾಂಶು ಮಂತ್ರಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಇನ್ನು ಸುಭ್ರಾಂಶು ಸೇನಾಪತಿ 28, ನಾಯಕ ಶುಭಂ ಶರ್ಮಾ 40, ರಜತ್‌ ಪಾಟೀದಾರ್‌ 31 ರನ್‌ ಸೇರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ತಕ್ಕಮಟ್ಟಿಗೆ ನೆರವಾದರು. ಆದರೆ 5ನೇ ಕ್ರಮಾಂಕದಲ್ಲಿ ಆಡಿದ ಹರ್ಪ್ರೀತ್‌ ಸಿಂಗ್‌ 75 ರನ್‌ ಗಳಿಸಿ ಗಮನಾರ್ಹ ರನ್‌ ಕೊಡುಗೆ ನೀಡಿದರು.

ಹರ್ಪ್ರೀತ್‌ ಮತ್ತು ವೆಂಕಟೇಶ್‌ ಅಯ್ಯರ್‌ (25) ಕ್ರೀಸಿನಲ್ಲಿ ಉಳಿದಿದ್ದು, 3ನೇ ದಿನವಾದ ಭಾನುವಾರ ಮಧ್ಯಪ್ರದೇಶ ತಂಡ ಮೊತ್ತವನ್ನು 300ರ ಸನಿಹ ಕೊಂಡೊಯ್ಯುವ ನಿರೀಕ್ಷೆಯಿದೆ. ಎಂ.ಪಿ. ಇನಿಂಗ್ಸ್‌ ವೇಳೆ ರಾಜ್ಯದ ವಾಸುಕಿ ಕೌಶಿಕ್‌, ಪ್ರಸಿದ್ಧ್ ಕೃಷ್ಣ, ವೈಶಾಕ್‌ ವಿಜಯ್‌ ಕುಮಾರ್‌ ಮತ್ತು ಹಾರ್ದಿಕ್‌ ರಾಜ್‌ ತಲಾ 1 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌:

ಮಧ್ಯಪ್ರದೇಶ 1ನೇ ಇನಿಂಗ್ಸ್‌, 83 ಓವರ್‌ಗೆ 232/4 (ಶುಭಂ 40, ಹರ್ಪ್ರೀತ್‌ ಅಜೇಯ 75, ಪ್ರಸಿದ್ಧ್ 20ಕ್ಕೆ 1).

Advertisement

ಅಗ್ರ ಕ್ರಮಾಂಕದ ನಾಲ್ವರೂ ಶತಕ:

ಇತಿಹಾಸ ಬರೆದ ಹಿಮಾಚಲ ಪ್ರದೇಶ ಧರ್ಮಶಾಲಾದಲ್ಲಿ ನಡೆಯುತ್ತಿರುವ ರಣಜಿ ಎಲೈಟ್‌ ಗ್ರೂಪ್‌ “ಬಿ’ಯಲ್ಲಿ ಉತ್ತರಾಖಂಡ ವಿರುದ್ಧ ಹಿಮಾಚಲ ಪ್ರದೇಶದ ಅಗ್ರ ಕ್ರಮಾಂಕದ ನಾಲ್ವರೂ ಬ್ಯಾಟರ್‌ಗಳು ಶತಕ ಬಾರಿಸಿದ್ದಾರೆ. ಈ ಮೂಲಕ 2ನೇ ಬಾರಿ ರಣಜಿ ಇನಿಂಗ್ಸ್‌ ಒಂದರಲ್ಲಿ ಆರಂಭಿಕ ನಾಲ್ವರು ಶತಕ ಬಾರಿಸಿದಂತಾಗಿದೆ. ಇದಕ್ಕೂ ಮುನ್ನ 2019ರಲ್ಲಿ ಗೋವಾ ತಂಡ ಈ ಸಾಧನೆ ಮಾಡಿತ್ತು. ಹಿಮಾಚಲ ಪ್ರದೇಶದ ಶುಭಂ ಅರೋರಾ (118), ಪ್ರಶಾಂತ್‌ ಚೋಪ್ರಾ (171), ಅಂಕಿತ್‌ ಕಲ್ಸಿ (ಅಜೇಯ 205), ಏಕಾಂತ್‌ ಸಿಂಗ್‌ (101) ಶತಕ ಬಾರಿಸಿದ್ದರಿಂದ ಈ ದಾಖಲೆ ನಿರ್ಮಾಣವಾಗಿದೆ. 1ನೇ ಇನಿಂಗ್ಸ್‌ನಲ್ಲಿ ಹಿಮಾಚಲ ಪ್ರದೇಶ 3 ವಿಕೆಟ್‌ ನಷ್ಟಕ್ಕೆ 663 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿದ್ದು, ಉತ್ತರಾಖಂಡ ತಂಡ 50 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದೆ.

22 ವರ್ಷ ಬಳಿಕ ಕಾಶ್ಮೀರ ಪರ ದ್ವಿಶತಕ:  ದಾಖಲೆ ಬರೆದ ಶುಭಂ ಖುಜಾರಿಯ:

ಶ್ರೀನಗರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್‌ ಗ್ರೂಪ್‌ “ಎ’ಯಲ್ಲಿ ಮಹಾರಾಷ್ಟ್ರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಬ್ಯಾಟರ್‌ ಶುಭಂ ಖುಜಾರಿಯ ದ್ವಿಶತಕ ಬಾರಿಸಿದ್ದಾರೆ. ಅವರು ರಣಜಿಯಲ್ಲಿ 22 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ಪರ ದ್ವಿಶತಕ ಬಾರಿಸಿದ ಮೊದಲಿಗನಾಗಿ ಗುರುತಿಸಿಕೊಂಡಿದ್ದಾರೆ. 255 ರನ್‌ ಬಾರಿಸಿ ಶುಭಂ ಈ ಸಾಧನೆ ಮೆರೆದರು. ಜಮ್ಮು-ಕಾಶ್ಮೀರ ಪರ 2002ರಲ್ಲಿ ಅಶ್ವಾನಿ ಗುಪ್ತಾ ಕೊನೇ ಬಾರಿ ದ್ವಿಶತಕ ಬಾರಿಸಿದ್ದರು. 1ನೇ ಇನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ 7ಕ್ಕೆ 519 ರನ್‌ ಬಾರಿಸಿ ಡಿಕ್ಲೇರ್‌ ಘೋಷಿಸಿದ್ದರೆ, ಇನಿಂಗ್ಸ್‌ ಆಡುತ್ತಿರುವ ಮಹಾರಾಷ್ಟ್ರ 1 ವಿಕೆಟ್‌ ನಷ್ಟಕ್ಕೆ 28 ರನ್‌ ಬಾರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next