Advertisement

ರಣಜಿ: ಕರ್ನಾಟಕ-ವಿದರ್ಭ ಪಂದ್ಯ ಡ್ರಾ

06:05 AM Nov 16, 2018 | Team Udayavani |

ನಾಗ್ಪುರ: ಕರ್ನಾಟಕ ಮತ್ತು ಹಾಲಿ ಚಾಂಪಿಯನ್‌ ವಿದರ್ಭ ನಡುವಿನ ರಣಜಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ ಡ್ರಾಗೂ ಮುನ್ನ ಒಂದಿಷ್ಟು ನಾಟಕೀಯ ವಿದ್ಯಮಾನಗಳು ಸಂಭವಿಸಿದವು. 

Advertisement

ಕರ್ನಾಟಕ ಬ್ಯಾಟ್ಸ್‌ಮನ್‌ಗಳಿಗೆ ವಿದರ್ಭ ಬೌಲರ್‌ ಆದಿತ್ಯ ಸರ್ವಟೆ ಮತ್ತೂಮ್ಮೆ ಭಾರೀ ಹೊಡೆತ ನೀಡಿದರು. ಇದರಿಂದ ವಿನಯ್‌ ಪಡೆ ಒಂದು ಹಂತದಲ್ಲಿ ಸೋಲುವ ಹಂತದಲ್ಲಿತ್ತು. ಈ ವೇಳೆಗಾಗಲೇ ಅಂತಿಮ ದಿನದ ಆಟ ಮುಕ್ತಾಯವಾಯಿತು. ಸೋಲು ತಪ್ಪಿಸಿಕೊಂಡ ಸಮಾಧಾನದೊಂದಿಗೆ ರಾಜ್ಯ ಆಟಗಾರರು ನಿಟ್ಟುಸಿರು ಬಿಟ್ಟರು.ಇನ್ನೇನು ಗೆಲುವು ಸಿಕ್ಕಿತು ಎನ್ನುವ ಹಂತದಲ್ಲಿ ಡ್ರಾ ಅನುಭವಿಸಿದ ವಿದರ್ಭ ನಿರಾಸೆ ಅನುಭವಿಸಿತು. ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ರಾಜ್ಯ ತಂಡ 3 ಅಂಕ ಪಡೆದರೆ ವಿದರ್ಭ ಒಂದು  ಅಂಕಕ್ಕೆ ಸಮಾಧಾನ ಪಟ್ಟುಕೊಂಡಿತು. ನ. 20ರಂದು ಬೆಳಗಾವಿಯಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ರಾಜ್ಯ ತಂಡ ಮುಂಬಯಿಯನ್ನು ಎದುರಿಸಲಿದೆ.

ಗೆಲುವಿಗಾಗಿ ವಿದರ್ಭ ಪಟ್ಟು
ಕರ್ನಾಟಕ ತಂಡ ಮೂರನೇ ದಿನದ ಆಟದಲ್ಲಿ ಗೆಲುವಿನ 50-50 ಅವಕಾಶ ಹೊಂದಿತ್ತು. ಸುಲಭವಾಗಿ ಡ್ರಾ ಸಾಧಿಸಲಿದೆ ಎಂದು ಕ್ರಿಕೆಟ್‌ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ನಿರೀಕ್ಷಿಸಿದಂತೆ ಯಾವುದು ನಡೆಯಲಿಲ್ಲ. ರಾಜ್ಯದ ಎಲ್ಲ ತಂತ್ರವನ್ನು ಆದಿತ್ಯ ಸರ್ವಟೆ ತಲೆಕೆಳಗಾಗಿಸಿದರು.ಇದಕ್ಕೂ ಮೊದಲು ಜೆ. ಸುಚಿತ್‌ (70ಕ್ಕೆ 5) ವಿಕೆಟ್‌ ದಾಳಿಗೆ ಸಿಲುಕಿ ವಿದರ್ಭ 2ನೇ ಇನಿಂಗ್ಸ್‌ನಲ್ಲಿ 84.4 ಓವರ್‌ಗಳಲ್ಲಿ 228 ರನ್‌ಗೆ ಆಲೌಟಾಯಿತು. ವಿದರ್ಭ ನೀಡಿದ 158 ರನ್‌ ಗೆಲುವಿನ ಗುರಿ ಬೆನ್ನಟ್ಟಿದ ರಾಜ್ಯ ತಂಡ 2ನೇ ಇನಿಂಗ್ಸ್‌ನ ಆರಂಭದಲ್ಲೇ ತತ್ತರಿಸಿತು.  ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ಆದಿತ್ಯ ಸರ್ವಟೆ ರಾಜ್ಯಕ್ಕೆ ಮತ್ತೂಮ್ಮೆ ಮಾರಕವಾಗಿ ಪರಿಣಮಿಸಿದರು.

ಆರಂಭಿಕ ಬ್ಯಾಟ್ಸ್‌ಮನ್‌ ಬಿ.ಆರ್‌. ಶರತ್‌ ಶೂನ್ಯಕ್ಕೆ ಔಟಾದರು. ಶರತ್‌ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು. ಇವರು ಔಟಾದ ವೇಳೆ  ಕರ್ನಾಟಕ ಇನ್ನೂ 2ನೇ ಇನಿಂಗ್ಸ್‌ ರನ್‌ ಖಾತೆ ತೆರೆದಿರಲಿಲ್ಲ. ತಂಡದ ಮೊತ್ತ 9 ರನ್‌ ಆಗುತ್ತಿದ್ದಂತೆ ಕರುಣ್‌ ನಾಯರ್‌ (3 ರನ್‌) ಸರ್ವಟೆಗೆ ಬಲಿಯಾದರು. ತಂಡದ ಮೊತ್ತ 23 ರನ್‌ ಆಗುತ್ತಿದ್ದಂತೆ ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕನಾಗಿ ಕಣಕ್ಕೆ ಇಳಿದು ಶತಕ ಸಿಡಿಸಿದ್ದ ಮತ್ತೋರ್ವ ಬ್ಯಾಟ್ಸ್‌ಮನ್‌ ಡಿ.ನಿಶ್ಚಲ್‌ (9 ರನ್‌) ಅವರನ್ನು ಲಲಿತ್‌ ಯಾದವ್‌ ಔಟ್‌  ಮಾಡಿದರು. ಅಲ್ಲಿಗೆ ರಾಜ್ಯ ತಂಡ ಒತ್ತಡಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಆರಂಭಿಕನಾಗಿ ಕಣಕ್ಕೆ ಇಳಿದಿದ್ದ ಆರ್‌. ಸಮರ್ಥ್ (30 ರನ್‌) ಹಾಗೂ ಕೆ.ವಿ. ಸಿದ್ದಾರ್ಥ್ (16 ರನ್‌) ಎಚ್ಚರಿಕೆಯಿಂದ ಬ್ಯಾಟ್‌ ಮಾಡಿ ತಂಡದ ರಕ್ಷಣೆಗೆ ನಿಂತರು. 9.2 ಓವರ್‌ನಿಂದ ಬ್ಯಾಟಿಂಗ್‌ ಆರಂಭಿಸಿದ್ದ ಇವರಿಬ್ಬರು 29 ಓವರ್‌ ತನಕ ಕ್ರೀಸ್‌ಗೆ ಅಂಟಿಕೊಂಡಿದ್ದರಿಂದ ರಾಜ್ಯ ತಂಡ ಸೋಲು ತಪ್ಪಿಸಿಕೊಂಡಿತು. ತಂಡದ ಮೊತ್ತ 55 ರನ್‌ ಆಗಿದ್ದಾಗ ಸಿದ್ದಾರ್ಥ್ ಔಟ್‌ ಆದರು. ಈ ಹಂತದಲ್ಲಿ ಸಮರ್ಥ್ ಮತ್ತು ಸ್ಟುವರ್ಟ್‌ ಬಿನ್ನಿ (0) ಬಬ್ಬರ ಹಿಂದೆ ಒಬ್ಬರಂತೆ ಔಟಾದರು. ಇದರಿಂದ ಕರ್ನಾಟಕಕ್ಕೆ ಮತ್ತೆ ಸೋಲುವ ಆತಂಕ ಎದುರಾಯಿತು. ಅಂತಿಮವಾಗಿ ದಿನದಾಟದ ಸಮಯ ಮುಕ್ತಾಯವಾಗಿದ್ದರಿಂದ ಡ್ರಾಕ್ಕೆ ನಿಟ್ಟುಸಿರು ಬಿಟ್ಟಿತು. ಶ್ರೇಯಸ್‌ (ಅಜೇಯ 9 ರನ್‌) ಹಾಗೂ ವಿನಯ್‌ ಕುಮಾರ್‌ (ಅಜೇಯ 6 ರನ್‌)ಗಳಿಸಿದರು.

Advertisement

ವಿದರ್ಭಕ್ಕೆ ಕನ್ನಡಿಗ ಸತೀಶ್‌ ನೆರವು
ಅಂತಿಮ ದಿನ ವಿದರ್ಭ 2 ವಿಕೆಟ್‌ 72 ರನ್‌ನಿಂದ ಎರಡನೇ ಇನಿಂಗ್ಸ್‌ ಆರಂಭಿಸಿತು. ಬ್ಯಾಟಿಂಗ್‌ ಮುಂದುವರಿಸಿದ ಕನ್ನಡಿಗ ಗಣೇಶ್‌ ಸತೀಶ್‌ (79 ರನ್‌) ಅರ್ಧ ಶತಕ ದಾಖಲಿಸಿ ವಿದರ್ಭಕ್ಕೆ ನೆರವಾದರು. ಇವರಿಗೆ ಅಪೂರ್ವ ವಂಖಾಡೆ (51 ರನ್‌) ಅರ್ಧಶತಕ ಸಿಡಿಸಿ ಸಾಥ್‌ ನೀಡಿದ್ದರಿಂದ ವಿದರ್ಭ ಪೈಪೋಟಿಯುತ ಮೊತ್ತವನ್ನು ಕಲೆ ಹಾಕಿತು.

Advertisement

Udayavani is now on Telegram. Click here to join our channel and stay updated with the latest news.

Next