Advertisement

ರಣಜಿ: ಕ್ವಾರ್ಟರ್‌ ಫೈನಲ್‌ನತ್ತ ಕರ್ನಾಟಕ

12:30 AM Jan 03, 2019 | Team Udayavani |

ಬೆಂಗಳೂರು: ರಣಜಿ ಕ್ರಿಕೆಟ್‌ ಎಲೈಟ್‌ “ಎ’ ಗುಂಪಿನ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಛತ್ತೀಸ್‌ಗಢವನ್ನು 198 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಇದು ಕರ್ನಾಟಕಕ್ಕೆ ಒಲಿದ 3ನೇ ಜಯ. 

Advertisement

ಎಲೈಟ್‌ “ಎ’ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ನೆಗೆದ ರಾಜ್ಯ ತಂಡವೀಗ ಕ್ವಾರ್ಟರ್‌ ಫೈನಲ್‌ನತ್ತ ಬಲಿಷ್ಠ ಹೆಜ್ಜೆ ಇರಿಸಿದೆ.
ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡಾವನ್ನು ಎದುರಿಸಲಿದೆ. ಈ ಪಂದ್ಯ ಜ. 7ರಿಂದ ಆರಂಭವಾಗಲಿದ್ದು, ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ. ಈ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿದ್ದೇ ಆದರೆ ಯಾವುದೇ ಲೆಕ್ಕಾಚಾರದ ಹಂಗಿಲ್ಲದೆ ನಾಕೌಟ್‌ಗೆರಲಿದೆ.

ಅಂತಿಮ ದಿನವಾದ ಬುಧವಾರ ನಾಯಕ ಮನೀಷ್‌ ಪಾಂಡೆ ಅವರ ಶತಕದಿಂದ ರಂಗೇರಿಸಿಕೊಂಡ ಕರ್ನಾಟಕ, ಛತ್ತೀಸ್‌ಗಢಕ್ಕೆ 355 ರನ್‌ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಛತ್ತೀಸ್‌ಗಢ 156ಕ್ಕೆ ಕುಸಿಯಿತು. ರೋನಿತ್‌ ಮೋರೆ (35ಕ್ಕೆ 4) ಹಾಗೂ ಶ್ರೇಯಸ್‌ ಗೋಪಾಲ್‌ (44ಕ್ಕೆ 4) ಮಾರಕ ಬೌಲಿಂಗ್‌ ದಾಳಿಗೆ ಸಿಲುಕಿದ ತಂಡ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತ ಸಾಗಿತು.

ಮನೀಷ್‌ ಪಾಂಡೆ ಶತಕ
3ನೇ ದಿನದ ಆಟದ ಅಂತ್ಯಕ್ಕೆ ಕರ್ನಾಟಕ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 113 ರನ್‌ ಗಳಿಸಿತ್ತು. ಮನೀಷ್‌ ಪಾಂಡೆ (ಅಜೇಯ 57 ರನ್‌) ಹಾಗೂ ಶ್ರೇಯಸ್‌ ಗೋಪಾಲ್‌ (ಅಜೇಯ 21 ರನ್‌) ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಬುಧವಾರ ಅಂತಿಮ ದಿನದ ಆಟವನ್ನು ಮುಂದುವರಿಸಿದ ರಾಜ್ಯಕ್ಕೆ ಆರಂಭಿಕ ಆಘಾತ ಎದುರಾಯಿತು. ಶ್ರೇಯಸ್‌ ಗೋಪಾಲ್‌ ಒಂದೇ ರನ್‌ ಸೇರಿಸಿ ಔಟಾದರು. ಕೆ. ಗೌತಮ್‌ (20 ರನ್‌) ಹಾಗೂ ವಿನಯ್‌ ಕುಮಾರ್‌ (7 ರನ್‌) ಹೆಚ್ಚು ಹೊತ್ತು ನಿಲ್ಲಲಿಲ್ಲ.

ವಿಕೆಟ್‌ ಉರುಳುತ್ತಿದ್ದರೂ ತಲೆಕೆಡಿಸಿಕೊಳ್ಳದೆ ಬ್ಯಾಟ್‌ ಬೀಸಿದ ಮನೀಷ್‌ ಪಾಂಡೆ (ಅಜೇಯ 102) ಶತಕ ಬಾರಿಸಿದರು. ಒಟ್ಟು 102 ಎಸೆತ ಎದುರಿಸಿದ ಪಾಂಡೆ 14 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದರು. ಅಭಿಮನ್ಯು ಮಿಥುನ್‌ (ಅಜೇಯ 33) ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಕೇವಲ 17 ಎಸೆತ ಎದುರಿಸಿದ ಅಭಿಮನ್ಯು 3 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು. 7 ವಿಕೆಟಿಗೆ 219 ರನ್‌ ಆದಾಗ ಕರ್ನಾಟಕ ಡಿಕ್ಲೇರ್‌ ಘೋಷಿಸಿತು.

Advertisement

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 418 ಮತ್ತು 7 ವಿಕೆಟಿಗೆ 219 ಡಿಕ್ಲೇರ್‌ (ಪಾಂಡೆ 102, ಮಿಥುನ್‌ 33, ಗೋಪಾಲ್‌ 22, ಕೆ. ಗೌತಮ್‌ 20, ಪಂಕಜ್‌ ರಾವ್‌ 67ಕ್ಕೆ 4). ಛತ್ತೀಸ್‌ಗಢ-283 ಮತ್ತು 156 (ಧಲಿವಾಲ್‌ 61, ಖರೆ 35, ಮೋರೆ 35ಕ್ಕೆ 4, ಗೋಪಾಲ್‌ 44ಕ್ಕೆ 4).

2 ವಿಭಾಗಗಳಿಂದ 5 ತಂಡಗಳು
ಎಲೈಟ್‌ “ಎ’ ಹಾಗೂ  ಎಲೈಟ್‌ “ಬಿ’ ಗುಂಪಿನಲ್ಲಿ ಕ್ರಮವಾಗಿ 9 ತಂಡಗಳಂತೆ ಒಟ್ಟು 18 ತಂಡಗಳಿವೆ. ಇವುಗಳಲ್ಲಿ ಎರಡೂ ಗುಂಪುಗಳಿಂದ ಒಳಗೊಂಡಂತೆ ಅಗ್ರ 5 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸುತ್ತವೆ. ಹೀಗಾಗಿ ಎರಡೂ ಬಣಗಳಲ್ಲಿ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.

ಕರ್ನಾಟಕ ಎಲೈಟ್‌ “ಎ’ ಗುಂಪಿನಲ್ಲಿ ಒಟ್ಟು 7 ಪಂದ್ಯ ಆಡಿ 27 ಅಂಕ ಸಂಪಾದಿಸಿದೆ. ವಿದರ್ಭ 28 ಅಂಕ ಹೊಂದಿದೆ. ಎಲ್ಲ ಪಂದ್ಯ ಮುಗಿಸಿರುವ ಗುಜರಾತ್‌ 26 ಅಂಕ ಗಳಿಸಿದೆ. 4ನೇ ಸ್ಥಾನದಲ್ಲಿರುವ ಸೌರಾಷ್ಟ್ರ ಕೂಡ 26 ಅಂಕ ಹೊಂದಿದೆ.
“ಬಿ’ ಗುಂಪಿನಲ್ಲಿ ಮಧ್ಯ ಪ್ರದೇಶ 24 ಅಂಕ, ಹಿಮಾಚಲ ಪ್ರದೇಶ 22 ಅಂಕ, ಬಂಗಾಲ 22 ಅಂಕ ಗಳಿಸಿ ಕ್ವಾರ್ಟರ್‌ ಫೈನಲ್‌ ಸುತ್ತಿಗೆ ಏರುವ ಲೆಕ್ಕಾಚಾರದಲ್ಲಿವೆ. ಎಲ್ಲವೂ 7 ಪಂದ್ಯಗಳನ್ನಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next