ಲಕ್ನೋ: ಪ್ರಸಕ್ತ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲ ವಾಗಿರುವ ಕರ್ನಾಟಕ, ಬುಧವಾರ ಆರಂಭವಾಗಲಿರುವ ಎಲೈಟ್ ಸಿ ವಿಭಾಗದ 5ನೇ ಸುತ್ತಿನ ಪಂದ್ಯದಲ್ಲಿ ಉತ್ತರಪ್ರದೇಶವನ್ನು ಎದುರಿಸಲಿದೆ. ನಾಕೌಟ್ ತಲುಪಲು ಇದೂ ಸೇರಿ ಮುಂದಿನ 3 ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡ ಕರ್ನಾಟಕದ ಮೇಲಿದೆ.
ಕರ್ನಾಟಕ ಈವರೆಗಿನ 4 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದು 9 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆದರೆ ಯಾವುದೇ ಪಂದ್ಯವನ್ನು ಸೋತಿಲ್ಲ.
ಕರ್ನಾಟಕದ ಮೊದಲೆರಡು ಪಂದ್ಯಗಳಿಗೆ ಮಳೆಯಿಂದ ಆಡಚಣೆ ಆಗಿತ್ತು. ಹೀಗಾಗಿ ಮಧ್ಯಪ್ರದೇಶ, ಕೇರಳ ಎದುರಿನ ಪಂದ್ಯ ನೀರಸ ಅಂತ್ಯ ಕಂಡಿತು. ಬಳಿಕ ಬಿಹಾರವನ್ನು 8 ವಿಕೆಟ್ಗಳಿಂದ ಸೋಲಿಸಿ ಗೆಲುವಿನ ಖಾತೆ ತೆರೆಯಿತು. ಆದರೆ ಬೆಂಗಳೂರಿನಲ್ಲೇ ಆಡಲಾದ ಕೊನೆಯ ಪಂದ್ಯದಲ್ಲಿ ಬಂಗಾಲ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.
ಇಲ್ಲಿಂದ ಮುಂದೆ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಬೇಕಾದ ಒತ್ತಡ ಕರ್ನಾಟಕದ ಮೇಲಿದೆ. ಪಂಜಾಬ್ ಮತ್ತು ಹರಿಯಾಣ ಉಳಿದೆರಡು ಎದುರಾಳಿಗಳಾಗಿವೆ.
ಕರ್ನಾಟಕದ ಪ್ರಮುಖ ಆಟಗಾರರು ಭಾರತ ಹಾಗೂ ಭಾರತ ಎ ತಂಡದ ಪರ ಆಡುತ್ತಿರುವುದರಿಂದ ರಾಜ್ಯ ತಂಡ ಒತ್ತಡದಲ್ಲಿದೆ. ಗಾಯಾಳುಗಳ ಸಮಸ್ಯೆಯೂ ಇದೆ. ಬಂಗಾಲ ವಿರುದ್ಧ ಬ್ಯಾಟರ್ ನಿಕಿನ್ ಜೋಸ್ ತಲೆಗೆ ಏಟು ತಿಂದಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಸ್ವತಃ ನಾಯಕ ಮಾಯಾಂಕ್ ಅಗರ್ವಾಲ್ ಅನಾರೋಗ್ಯಕ್ಕೊಳಗಾಗಿದ್ದರು.
ಆರ್ಯನ್ ಜುಯಲ್ ನಾಯಕತ್ವದ ಉತ್ತರಪ್ರದೇಶ ಕರ್ನಾಟಕಕ್ಕಿಂತಲೂ ಕಳಪೆ ಪ್ರದರ್ಶನ ನೀಡಿದೆ. 4 ಪಂದ್ಯಗಳನ್ನಾಡಿದ್ದು, ಇನ್ನೂ ಗೆಲುವಿನ ಮುಖ ಕಂಡಿಲ್ಲ. ಒಂದನ್ನು ಸೋತಿದೆ, ಮೂರನ್ನು ಡ್ರಾ ಮಾಡಿಕೊಂಡಿದೆ. ಸದ್ಯ 6ನೇ ಸ್ಥಾನದಲ್ಲಿದೆ. ಹೀಗಾಗಿ ತವರಿನ ಈ ಸ್ಪರ್ಧೆ ಯುಪಿ ಪಾಲಿಗೆ ಕರ್ನಾಟಕಕ್ಕಿಂತಲೂ ಹೆಚ್ಚು ಮಹತ್ವದ್ದಾಗಿದೆ.