ಪಾಟ್ನಾ: ಶನಿವಾರ ಮೊದಲ್ಗೊಂಡ ರಣಜಿ ಟ್ರೋಫಿ 3ನೇ ಹಂತದ ಎಲೈಟ್ ಗ್ರೂಪ್ “ಸಿ’ ಪಂದ್ಯದಲ್ಲಿ ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಬಿಹಾರ ಮೊದಲ ಇನಿಂಗ್ಸ್‌ನಲ್ಲಿ 143ಕ್ಕೆ ಆಲೌಟ್ ಆಗಿದೆ. ಶ್ರೇಯಸ್ ಗೋಪಾಲ್ 4 ಮತ್ತು ಮೊಹ್ಸಿನ್ ಖಾನ್ 3 ವಿಕೆಟ್ ಉರುಳಿಸಿ ಎದುರಾಳಿಯನ್ನು ಕಾಡಿದರು.
ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ 16 ರನ್ ಮಾಡಿದೆ. ನಿಕಿನ್ ಜೋಸ್ (11), ಸುಜಯ್ ಸತೇರಿ (4) ಕ್ರೀಸ್‌ನಲ್ಲಿ ಉಳಿದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಿಹಾರ ತಂಡ, ಕರ್ನಾಟಕದ ಸ್ಪಿನ್ ದಾಳಿಯನ್ನು ಎದುರಿಸಿ ನಿಲ್ಲಲು ವಿಫಲವಾಯಿತು. ಆರಂಭಕಾರ ಶರ್ಮನ್ ನಿಗ್ರೋಧ್ ಸರ್ವಾಧಿಕ 60, ಬಿಪಿನ್ ಸೌರಭ್ 31 ರನ್ ಮಾಡಿದರು.
ಮುಂಬಯಿಗೆ ಸೂರ್ಯಾಂಶ್ ಆಸರೆ
ಅಗರ್ತಲಾ: ತ್ರಿಪುರ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬಯಿ 6 ವಿಕೆಟಿಗೆ 248 ರನ್ ಗಳಿಸಿದೆ. ಕೆಳ ಸರದಿಯ ಆಟಗಾರ ಸೂರ್ಯಾಂಶ್ ಶೆಡ್ಜೆ 99 ರನ್ ಮಾಡಿ ತಂಡಕ್ಕೆ ಆಸರೆಯಾದರು. ಬಿರುಸಿನ ಆಟಕ್ಕಿಳಿದ ಶೆಡ್ಜೆ 93 ಎಸೆತಗಳನ್ನೆದುರಿಸಿ 10 ಬೌಂಡರಿ, 4 ಸಿಕ್ಸರ್ ಸಿಡಿಸಿದರು. ಆದರೆ ಒಂದೇ ರನ್ನಿನಿಂದ ಶತಕ ವಂಚಿತರಾಗಬೇಕಾಯಿತು.
ನಾಯಕ ಅಜಿಂಕ್ಯ ರಹಾನೆ 35 ರನ್ ಹೊಡೆದರು. 38 ರನ್ ಮಾಡಿರುವ ಶಮ್ಸ್ ಮುಲಾನಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಒದ್ದೆ ಅಂಗಳದಿಂದಾಗಿ ದಿನದಾಟ ವಿಳಂಬಗೊಂಡಿತ್ತು.