Advertisement

ರಣಜಿ ಕ್ರಿಕೆಟ್‌: ಕರ್ನಾಟಕಕ್ಕೆ ಶಿವಂ ದುಬೆ ತಡೆ

06:00 AM Nov 22, 2018 | |

ಬೆಳಗಾವಿ: ಮುಂಬಯಿ ಎದುರಿನ ರಣಜಿ ಕ್ರಿಕೆಟ್‌ ಪಂದ್ಯದ 2ನೇ ದಿನದಾಟದಲ್ಲಿ ಮಧ್ಯಮ ವೇಗಿ ಶಿವಂ ದುಬೆ ದಾಳಿಗೆ ಕರ್ನಾಟಕ ಆರಂಭದಲ್ಲಿಯೇ ಮುಗ್ಗರಿಸಿತಾದರೂ ಬಳಿಕ ಚೇತರಿಸಿಕೊಂಡು 400 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿದೆ. ಜವಾಬು ನೀಡಲಾರಂಭಿಸಿದ ಮುಂಬಯಿ 2 ವಿಕೆಟಿಗೆ 99 ರನ್‌ ಗಳಿಸಿದೆ.

Advertisement

ರಾಜ್ಯ ಬ್ಯಾಟ್ಸಮನ್‌ಗಳನ್ನು ಕಟ್ಟಿ ಹಾಕಿದ ಮುಂಬಯಿಯ ಭರವಸೆಯ ಬೌಲರ್‌ ಶಿವಂ ದುಬೆ 53ಕ್ಕೆ 7 ವಿಕೆಟ್‌ ಪಡೆದರು. ಭೋಜನ ವಿರಾಮದ ಬಳಿಕ ಇನ್ನಿಂಗ್ಸ್‌ ಆರಂಭಿಸಿದ್ದ ಮುಂಬಯಿ ಅಖೀಲ್‌ ಹೆರ್ವಾಡ್ಕರ್‌ ಅವರನ್ನು ಬಹಳ ಬೇಗ ಕಳೆದುಕೊಂಡಿತು. 5 ರನ್‌ ಮಾಡಿದ ಅವರನ್ನು ಮಿಥುನ್‌ ಪೆವಿಲಿಯನ್‌ಗೆ ಕಳುಹಿಸಿದರು. 23 ರನ್‌ ಮಾಡಿದ ಆಶಯ್‌ ಸರ್ದೇಸಾಯಿ ಔಟಾದೊಡನೆ ದಿನದಾಟವನ್ನು ಕೊನೆಗೊಳಿಸಲಾಯಿತು. ಈ ವಿಕೆಟ್‌ ರೋನಿತ್‌ ಮೋರೆ ಪಾಲಾಯಿತು. ಬಿಷ್ಟಾ-ಸರ್ದೇಸಾಯಿ 2ನೇ ವಿಕೆಟಿಗೆ 57 ರನ್‌ ಒಟ್ಟುಗೂಡಿಸಿದರು. 69 ರನ್‌ ಮಾಡಿರುವ ಜಾಯ್‌ ಬಿಷ್ಟಾ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 111 ಎಸೆತ ಎದುರಿಸಿದ ಬಿಸ್ಟಾ 11 ಬೌಂಡರಿ ಸಿಡಿಸಿ ತಂಡದ ನೆರವಿಗೆ ನಿಂತಿದ್ದಾರೆ.

ಕರ್ನಾಟಕ ಕುಸಿತ
ಕರ್ನಾಟಕ ಮೊದಲ ದಿನದಾಟದಲ್ಲಿ 4ಕ್ಕೆ 263 ರನ್‌ ಗಳಿಸಿತ್ತು. ಬುಧವಾರದ 3ನೇ ಓವರ್‌ನಲ್ಲಿಯೇ ಧವಳ್‌ ಕುಲಕರ್ಣಿ ಎಸೆತಕ್ಕೆ ಶ್ರೇಯಸ್‌ ಗೋಪಾಲ್‌ (48) ಎಲ್‌ಬಿ ಆದರು. ಅನಂತರ ಬಂದ ಬಿ.ಆರ್‌. ಶರತ್‌ ಖಾತೆ ತೆರೆಯುವ ಮೊದಲೇ ಕುಲಕರ್ಣಿ ಎಸೆತಕ್ಕೆ ಎಲ್‌ಬಿ ಆಗಿ ತೆರಳಿದರು. 104 ರನ್‌ ಹೊಡೆದು ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಕೆ.ವಿ. ಸಿದ್ಧಾರ್ಥ್ ಮಾತ್ರ ಗಟ್ಟಿಯಾಗಿ ನಿಂತು ಮುಂಬಯಿ ಬೌಲರ್‌ಗಳಿಗೆ ಬೆವರಿಳಿಸುತ್ತ ಹೋದರು. ಅಂತಿಮವಾಗಿ 161 ರನ್‌ ಬಾರಿಸಿ ದುಬೆಗೆ ವಿಕೆಟ್‌ ಒಪ್ಪಿಸಿದರು. 299 ಎಸೆತಗಳ ಈ ಜವಾಬ್ದಾರಿಯುತ ಆಟದಲ್ಲಿ 19 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು. 

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ ಪ್ರಥಮ ಇನ್ನಿಂಗ್ಸ್‌-400 (ಕೆ.ವಿ.ಸಿದ್ಧಾರ್ಥ್ 161,  ಅಬ್ಟಾಸ್‌ 64, ಶ್ರೇಯಸ್‌ ಗೋಪಾಲ್‌ 48, ಶಿವಂ ದುಬೆ 53ಕ್ಕೆ 7, ಕುಲಕರ್ಣಿ 54ಕ್ಕೆ 2). ಮುಂಬಯಿ ಪ್ರಥಮ ಇನ್ನಿಂಗ್ಸ್‌- (ಜಾಯ್‌ ಬಿಷ್ಟಾ ಬ್ಯಾಟಿಂಗ್‌ 69, ಸರ್ದೇಸಾಯಿ 23, ಮಿಥುನ್‌ 22ಕ್ಕೆ 1, ಮೋರೆ 22ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next