Advertisement

Ranji Trophy:ಗೋವಾಕ್ಕೆ ಕಡಿವಾಣ ಹಾಕಿದ ಕರ್ನಾಟಕ

12:10 AM Jan 20, 2024 | Team Udayavani |

ಮೈಸೂರು: ಇಲ್ಲಿನ “ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌’ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ 3ನೇ ಸುತ್ತಿನ “ಸಿ’ ವಿಭಾಗದ ರಣಜಿ ಪಂದ್ಯದಲ್ಲಿ ಕರ್ನಾಟಕ ಬೌಲರ್ ಗೋವಾಕ್ಕೆ ಕಡಿವಾಣ ಹಾಕಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಗೋವಾ 8 ವಿಕೆಟಿಗೆ 228 ರನ್‌ ಗಳಿಸಿದೆ.

Advertisement

ಗೋವಾದ 3 ವಿಕೆಟ್‌ಗಳನ್ನು 45 ರನ್ನಿಗೆ ಉರುಳಿಸಲು ಕರ್ನಾಟಕ ಯಶಸ್ವಿಯಾಗಿತ್ತು. ಟಾಪ್‌ ಆರ್ಡರ್‌ ಬ್ಯಾಟರ್‌ಗಳಾದ ಇಶಾನ್‌ ಗಾಡೇಕರ್‌ (6), ಕೀಪರ್‌ ಕೆ. ಸಿದ್ಧಾರ್ಥ್ (2) ಮತ್ತು ಸುಯಶ್‌ ಪ್ರಭುದೇಸಾಯಿ (24) ಯಶಸ್ಸು ಕಾಣಲಿಲ್ಲ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸ್ನೇಹಲ್‌ ಕೌಥಂಕರ್‌ ಮತ್ತು ನಾಯಕ ದರ್ಶನ್‌ ಮಿಸಾಲ್‌ ಸೇರಿ ಕೊಂಡು ಹೋರಾಟವೊಂದನ್ನು ಜಾರಿಯಲ್ಲಿ ರಿಸಿದರು. ಇವರಿಂದ 4ನೇ ವಿಕೆಟಿಗೆ 82 ರನ್‌ ಒಟ್ಟುಗೂಡಿತು. ಕೌಥಂಕರ್‌ 193 ಎಸೆತಗಳನ್ನು ನಿಭಾಯಿಸಿ ಸರ್ವಾಧಿಕ 83 ರನ್‌ ಹೊಡೆದರು (9 ಬೌಂಡರಿ, 1 ಸಿಕ್ಸರ್‌). 39 ರನ್‌ ಮಾಡಿದ ಮಿಸಾಲ್‌ ಅವರದು ಅನಂತರದ ಹೆಚ್ಚಿನ ಗಳಿಕೆ (98 ಎಸೆತ, 4 ಬೌಂಡರಿ).

ಈ ಜೋಡಿಯನ್ನು ಮುರಿಯುವ ಮೂಲಕ ರೋಹಿತ್‌ ಕುಮಾರ್‌ ಕರ್ನಾಟಕಕ್ಕೆ ಬ್ರೇಕ್‌ ಒದಗಿಸಿದರು. ಗೋವಾ ಸರದಿ ಮತ್ತೆ ಕುಸಿತಕ್ಕೆ ಸಿಲುಕಿತು. ಸ್ಕೋರ್‌ 198ಕ್ಕೆ ಏರಿದಾಗ ಕೌಥಂಕರ್‌ ಅವರನ್ನು ವಾಪಸ್‌ ಕಳುಹಿಸಲು ಎಂ. ವೆಂಕಟೇಶ್‌ ಯಶಸ್ವಿಯಾದರು. ಶತಕದ ನಿರೀಕ್ಷೆಯಲ್ಲಿದ್ದ ಕೌಥಂಕರ್‌ 7ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆರ್ಜುನ್‌ ತೆಂಡುಲ್ಕರ್‌ 10 ರನ್‌ ಮತ್ತು ಹೇರಂಬ ಪರಬ್‌ 8 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ತಲಾ 3 ವಿಕೆಟ್‌ ಉರುಳಿಸಿದ ವಿಜಯ್‌ಕುಮಾರ್‌ ವೈಶಾಖ್‌ ಮತ್ತು ರೋಹಿತ್‌ ಕುಮಾರ್‌ ಕರ್ನಾಟಕದ ಯಶಸ್ವಿ ಬೌಲರ್‌ಗಳು.

ಆರಂಭಿಕ ಪಂದ್ಯದಲ್ಲಿ ಪಂಜಾಬ್‌ಗ 7 ವಿಕೆಟ್‌ಗಳ ಸೋಲುಣಿಸಿದ ಮಾಯಾಂಕ್‌ ಅಗರ್ವಾಲ್‌ ಪಡೆ, ಬಳಿಕ ಗುಜರಾತ್‌ ವಿರುದ್ಧ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳೆದುಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌
ಗೋವಾ-8 ವಿಕೆಟಿಗೆ 228 (ಸ್ನೇಹಲ್‌ ಕೌಥಂಕರ್‌ 83, ದರ್ಶನ್‌ ಮಿಸಾಲ್‌ 39, ಸುಯಶ್‌ ಪ್ರಭುದೇಸಾಯಿ 24, ಸಮರ್‌ ದುಭಾಷಿ 19, ಮೋಹಿತ್‌ ರೇಡ್ಕರ್‌ 16, ವಿಜಯ್‌ಕುಮಾರ್‌ ವೈಶಾಖ್‌ 45ಕ್ಕೆ 3, ರೋಹಿತ್‌ ಕುಮಾರ್‌ 66ಕ್ಕೆ 3, ಮುರಳೀಧರ್‌ ವೆಂಕಟೇಶ್‌ 25ಕ್ಕೆ 1, ವಾಸುಕಿ ಕೌಶಿಕ್‌ 36ಕ್ಕೆ 1).

Advertisement

ಕೇರಳ ವಿರುದ್ಧ ಮುಂಬಯಿ 251 ಆಲೌಟ್‌
ತಿರುವನಂತಪುರ: ಬಾಸಿಲ್‌ ಥಂಪಿ ಪಂದ್ಯದ ಮೊದಲೆರಡು ಎಸೆತಗಳಲ್ಲೇ 2 ವಿಕೆಟ್‌ ಕೆಡವಿದ ಬಳಿಕ ಚೇತರಿಸಿಕೊಂಡ ಮುಂಬಯಿ, ಆತಿಥೇಯ ಕೇರಳ ವಿರುದ್ಧದ ರಣಜಿ ಪಂದ್ಯದಲ್ಲಿ 251 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದಿದೆ.

ಓಪನರ್‌ ಜಾಯ್‌ ಬಿಷ್ಟಾ ಮತ್ತು ನಾಯಕ ಅಜಿಂಕ್ಯ ರಹಾನೆ ಅವರನ್ನು ಥಂಪಿ ಶೂನ್ಯಕ್ಕೆ ರವಾನಿಸಿದರು. ಆಗಿನ್ನೂ ಮುಂಬಯಿ ಖಾತೆ ತೆರೆದಿರಲಿಲ್ಲ. ದುರಂತವೆಂದರೆ, ಅಜಿಂಕ್ಯ ರಹಾನೆ ಪ್ರಸಕ್ತ ರಣಜಿ ಪಂದ್ಯವಳಿಯಲ್ಲಿ 2ನೇ ಸಲ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದ್ದು!

ಮುಂಬಯಿ ಸರದಿಯನ್ನು ಆಧರಿಸಿ ನಿಂತವರೆಂದರೆ ಭೂಪೇನ್‌ ಲಾಲ್ವಾನಿ (50), ಶಿವಂ ದುಬೆ (51) ಮತ್ತು ತನುಷ್‌ ಕೋಟ್ಯಾನ್‌ (55). ಕರ್ನಾಟಕ ಮೂಲದ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ 25ಕ್ಕೆ 4 ವಿಕೆಟ್‌ ಉರುಳಿಸಿ ಕೇರಳದ ಮೇಲುಗೈಯಲ್ಲಿ ಮಹತ್ವದ ಪಾತ್ರ ವಹಿಸಿದರು. ಬಾಸಿಲ್‌ ಥಂಪಿ ಮತ್ತು ಜಲಜ್‌ ಸಕ್ಸೇನಾ ತಲಾ 2 ವಿಕೆಟ್‌ ಕೆಡವಿದರು.

Advertisement

Udayavani is now on Telegram. Click here to join our channel and stay updated with the latest news.

Next