ಚೆನ್ನೈ: ಜಮ್ಮು ಕಾಶ್ಮೀರ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆಲುವಿನತ್ತ ಹೆಜ್ಜೆ ಇರಿಸಿದೆ. 508 ರನ್ನುಗಳ ಕಠಿನ ಗುರಿ ಪಡೆದಿರುವ ಜಮ್ಮು ಕಾಶ್ಮೀರ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.
209 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸಿದ ಕರ್ನಾಟಕ, ದ್ವಿತೀಯ ಸರದಿಯಲ್ಲಿ 3ಕ್ಕೆ 298 ರನ್ ಬಾರಿಸಿ ಡಿಕ್ಲೇರ್ ಮಾಡಿತು. ಆರ್. ಸಮರ್ಥ್ 62, ದೇವದತ್ತ ಪಡಿಕ್ಕಲ್ 49, ಕರುಣ್ ನಾಯರ್ ಮತ್ತೊಮ್ಮೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 71, ಸಿದ್ಧಾರ್ಥ್ 72, ಮನೀಷ್ ಪಾಂಡೆ ಅಜೇಯ 37 ರನ್ ಬಾರಿಸಿದರು.
ಪ್ರಸಿದ್ಧ್ ಕೃಷ್ಣ ಮೊದಲ ಓವರ್‌ನಲ್ಲೇ ಕಮ್ರಾನ್ ಇಕ್ಬಾಲ್ (4) ಅವರನ್ನು ಲೆಗ್ ಬಿಫೋರ್ ಬಲೆಗೆ ಕೆಡವಿದರು. ಬಳಿಕ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಜಮ್ಮು ಕಾಶ್ಮೀರಕ್ಕೆ ಸಿಂಹಸ್ವಪ್ನರಾಗಿ ಪರಿಣಮಿಸಿದರು. ಉರುಳಿದ 4 ವಿಕೆಟ್‌ಗಳಲ್ಲಿ 3 ವಿಕೆಟ್ ಶ್ರೇಯಸ್ ಪಾಲಾಗಿದೆ. ನಾಯಕ ಇಯಾನ್ ದೇವ್ ಸಿಂಗ್ 45 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೀಪರ್ ಫಜಿಲ್ ರಶೀದ್ 65 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ- 302 ಮತ್ತು 3 ವಿಕೆಟಿಗೆ 298 (ಕೆ. ಸಿದ್ಧಾರ್ಥ್ 72, ಕರುಣ್ ನಾಯರ್ ಔಟಾಗದೆ 71, ಆರ್. ಸಮರ್ಥ್ 62, ದೇವದತ್ತ ಪಡಿಕ್ಕಲ್ 49, ಮನೀಷ್ ಪಾಂಡೆ ಔಟಾಗದೆ 37, ಅಬಿದ್ ಮುಷ್ತಾಕ್ 65ಕ್ಕೆ 3).
ಜಮ್ಮು ಕಾಶ್ಮೀರ-93 ಮತ್ತು 4 ವಿಕೆಟಿಗೆ 149 (ರಶೀದ್ 65, ಇಯಾನ್ ದೇವ್ 45, ಶ್ರೇಯಸ್ ಗೋಪಾಲ್ 58ಕ್ಕೆ 3).