Advertisement
ಟಾಸ್ ಗೆದ್ದ ಮುಂಬಯಿ ನಾಯಕ ಪೃಥ್ವಿ ಶಾ ಮೊದಲು ಬ್ಯಾಟಿಂಗ್ ನಡೆಸಲು ಮುಂದಾದರು. “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಪಿಚ್ ಸ್ಟ್ರೋಕ್‌ಪ್ಲೇಗೆ ನೆರವು ನೀಡದಿರುವುದು ಅರಿವಿಗೆ ಬಂತು. ಹೀಗಾಗಿ ಪೃಥ್ವಿ ಶಾ-ಯಶಸ್ವಿ ಜೈಸ್ವಾಲ್ ಬಹಳ ಎಚ್ಚರಿಕೆಯಿಂದ ರನ್ ಪೇರಿಸತೊಸಗಿದರು. 28ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 87 ರನ್ ಒಟ್ಟುಗೂಡಿಸಿದರು. ಈ ಹಂತದಲ್ಲಿ ಸೀಮರ್ ಅನುಭವ್ ಅಗರ್ವಾಲ್ ಮಧ್ಯ ಪ್ರದೇಶಕ್ಕೆ ಮೊದಲ ಯಶಸ್ಸು ತಂದಿತ್ತರು. 47 ರನ್ ಮಾಡಿದ ಶಾ ಬೌಲ್ಡ್ ಆಗಿ ವಾಪಸಾದರು. 79 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 5 ಫೋರ್, ಒಂದು ಸಿಕ್ಸರ್ ಒಳಗೊಂಡಿತ್ತು.
ಯಶಸ್ವಿ ಜೈಸ್ವಾಲ್ 60ನೇ ಓವರ್ ತನಕ ಮಧ್ಯ ಪ್ರದೇಶ ಬೌಲರ್‌ಗಳ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಇವರು ಸಾಗುತ್ತಿದ್ದ ರೀತಿ ಕಂಡಾಗ ಸತತ 4ನೇ ಶತಕದ ನಿರೀಕ್ಷೆ ಮೂಡಿತ್ತು. ಆದರೆ ಅಗರ್ವಾಲ್ ಈ ಬಹು ಮೂಲ್ಯ ವಿಕೆಟ್ ಉಡಾಯಿಸುವಲ್ಲಿ ಯಶಸ್ವಿಯಾದರು. ಜೈಸ್ವಾಲ್ ಆಟ 78 ರನ್ನಿಗೆ ಮುಗಿಯಿತು. ಎದುರಿಸಿದ್ದು 163 ಎಸೆತ; ಸಿಡಿಸಿದ್ದು 7 ಫೋರ್ ಹಾಗೂ ಒಂದು ಸಿಕ್ಸರ್. ಈ ನಡುವೆ ಅರ್ಮಾನ್ ಜಾಫರ್ ಮತ್ತು ಸುವೇದ್ ಪಾರ್ಕರ್ ಅವರಿಂದ ಸಣ್ಣ ಕೊಡುಗೆಯಷ್ಟೇ ಸಂದಾಯ ವಾಯಿತು. ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ್ದ ಜಾಫರ್ 26 ರನ್ ಮಾಡಿದರೆ, ಪದಾರ್ಪಣ ಪಂದ್ಯದಲ್ಲೇ ದ್ವಿಶತಕ ಹೊಡೆದಿದ್ದ ಪಾರ್ಕರ್ 18 ರನ್ ಮಾಡಿ ವಾಪಸಾದರು. ವಿಕೆಟ್ ಕೀಪರ್ ಹಾರ್ದಿಕ್ ತಮೋರೆ ಆಟ 24 ರನ್ನಿಗೆ ಕೊನೆಗೊಂಡಿತು. ನೀಳಕಾಯದ ಸಾರಾಂಶ್ ಜೈನ್ 2 ವಿಕೆಟ್ ಉಡಾಯಿಸಿ ಮುಂಬಯಿಯ ದೊಡ್ಡ ಮೊತ್ತದ ಯೋಜನೆಗೆ ತಡೆ ಯೊಡ್ಡಿದರು. ಜಾಫರ್ ವಿಕೆಟ್ ಎಡಗೈ ಸ್ಪಿನ್ನರ್ ಕುಮಾರ ಕಾರ್ತಿಕೇಯ ಪಾಲಾಯಿತು.
Related Articles
ಈ ಟ್ರ್ಯಾಕ್ ಮೇಲೆ 400 ರನ್ ಪೇರಿಸಿದರೆ ಮುನ್ನಡೆ ಗಳಿಸಬಹು ದೆಂಬುದು ಸದ್ಯದ ಲೆಕ್ಕಾಚಾರ. ಕೂಟದ ಸರ್ವಾಧಿಕ ಸ್ಕೋರರ್ ಸರ್ಫರಾಜ್ ಖಾನ್ 40 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (125 ಎಸೆತ, 3 ಬೌಂಡರಿ). ಇವ ರೊಂದಿಗೆ 12 ರನ್ ಮಾಡಿದ ಶಮ್ಸ್ ಮುಲಾನಿ ಕ್ರೀಸ್‌ನಲ್ಲಿದ್ದಾರೆ.
Advertisement
ಸಂಕ್ಷಿಪ್ತ ಸ್ಕೋರ್ ಮುಂಬಯಿ-5 ವಿಕೆಟಿಗೆ 248 (ಪೃಥ್ವಿ ಶಾ 47, ಯಶಸ್ವಿ ಜೈಸ್ವಾಲ್ 78, ಅರ್ಮಾನ್ ಜಾಫರ್ 26, ಪಾರ್ಕರ್ 18, ತಮೋರೆ 24, ಸರ್ಫರಾಜ್ ಬ್ಯಾಟಿಂಗ್ 40, ಮುಲಾನಿ ಬ್ಯಾಟಿಂಗ್ 12, ಸಾರಾಂಶ್ ಜೈನ್ 31ಕ್ಕೆ 2, ಅನುಭವ್ ಅಗರ್ವಾಲ್ 56ಕ್ಕೆ 2, ಕುಮಾರ ಕಾರ್ತಿಕೇಯ 91ಕ್ಕೆ 1)