Advertisement

ರಣಜಿ: ಡ್ರಾ ಸಾಧಿಸಿದ ಮುಂಬಯಿ

06:00 AM Nov 24, 2018 | |

ಬೆಳಗಾವಿ: ಕರ್ನಾಟಕ ಮತ್ತು ಮುಂಬಯಿ ನಡುವಿನ ರಣಜಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಗೆಲುವಿಗೆ 366 ರನ್ನುಗಳ ಗುರಿ ಪಡೆದ ಮುಂಬಯಿ, ಪಂದ್ಯ ಕೊನೆಗೊಂಡಾಗ 64 ಓವರ್‌ಗಳಲ್ಲಿ 4 ವಿಕೆಟಿಗೆ 173 ರನ್‌ ಗಳಿಸಿತ್ತು.

Advertisement

ಕರ್ನಾಟಕದ ಅಂತಿಮ ದಿನದಾಟ ಯೋಜನೆಯಂತೆಯೇ ಸಾಗಿತಾದರೂ ಸ್ಪಷ್ಟ ಗೆಲುವು ಸಾಧಿಸಲು ಮುಂಬಯಿ ಬ್ಯಾಟ್ಸ್‌ಮನ್‌ಗಳು ಅವಕಾಶ ನೀಡಲಿಲ್ಲ. 3 ವಿಕೆಟಿಗೆ 81 ರನ್‌ ಮಾಡಿದ್ದ ಕರ್ನಾಟಕ 5 ವಿಕೆಟಿಗೆ 170 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಮೊದಲ ಇನ್ನಿಂಗ್ಸ್‌ನಂತೆ ಮುಂಬಯಿ ವಿಕೆಟ್‌ಗಳನ್ನು ಪಟಪಟನೆ ಉರುಳಿಸಿ ಸ್ಪಷ್ಟ ಗೆಲುವು ಸಾಧಿಸುವುದು ಆತಿಥೇಯರ ಗುರಿ ಆಗಿತ್ತು. ಜಾಯ್‌ ಬಿಷ್ಟಾ (2) ಬೇಗನೇ ಔಟಾದರೂ ಅಖೀಲ್‌ ಹೆರ್ವಾಡ್ಕರ್‌ (53)-ಸರ್ದೇಸಾಯಿ (27) ಸೇರಿಕೊಂಡು 71 ರನ್‌ ಜತೆಯಾಟ ನಿಭಾಯಿಸಿದರು. ಆದರೆ 100 ರನ್‌ ಆಗುವಷ್ಟರಲ್ಲಿ ಇವರಿಬ್ಬರೂ ನಿರ್ಗಮಿಸಿದಾಗ ಕರ್ನಾಟಕದ ಗೆಲುವಿನ ಆಸೆ ಚಿಗುರಿದ್ದು ಸುಳ್ಳಲ್ಲ. 

ಸ್ಕೋರ್‌ 127ಕ್ಕೆ ಏರಿದಾಗ ಸಿದ್ದೇಶ್‌ ಲಾಡ್‌ ವಿಕೆಟ್‌ ಬಿತ್ತು. ಈ ಹಂತದಲ್ಲಿ ಜತೆಗೂಡಿದ ಸೂರ್ಯಕುಮಾರ್‌ ಯಾದವ್‌ (ಔಟಾಗದೆ 53) ಮತ್ತು ಆದಿತ್ಯ ತಾರೆ (ಔಟಾಗದೆ 29) ಸೇರಿಕೊಂಡು ಕರ್ನಾಟಕದ ಪ್ರಯತ್ನವನ್ನು ವಿಫ‌ಲಗೊಳಿಸಿದರು.
ಕರ್ನಾಟಕದ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಮಿಂಚಿದ ಕೆ. ಸಿದ್ಧಾರ್ಥ್ ಸರ್ವಾಧಿಕ 71 ರನ್‌ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 161 ರನ್‌ ಬಾರಿಸಿದ್ದ ಅವರು ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-400 ಮತ್ತು 5 ವಿಕೆಟಿಗೆ 170 (ಸಿದ್ಧಾರ್ಥ್ ಔಟಾಗದೆ 71, ಬಿನ್ನಿ 30, ಕುಲಕರ್ಣಿ 18ಕ್ಕೆ 2, ಮುಲಾನಿ 47ಕ್ಕೆ 2). ಮುಂಬಯಿ-205 ಮತ್ತು 4 ವಿಕೆಟಿಗೆ 173 (ಹೆರ್ವಾಡ್ಕರ್‌ 53, ಯಾದವ್‌ ಔಟಾಗದೆ 53, ತಾರೆ ಔಟಾಗದೆ 29, ಮಿಥುನ್‌ 22ಕ್ಕೆ 2). 
ಪಂದ್ಯಶ್ರೇಷ್ಠ: ಕೆ. ಸಿದ್ಧಾರ್ಥ್.

Advertisement

Udayavani is now on Telegram. Click here to join our channel and stay updated with the latest news.

Next