Advertisement

ರಣಜಿ: ಸೆಮಿಫೈನಲಿಗೆ ದಿಲ್ಲಿ, ವಿದರ್ಭ, ಬಂಗಾಲ

06:25 AM Dec 12, 2017 | Team Udayavani |

ಹೊಸದಿಲ್ಲಿ: 2017-18ನೇ ಋತುವಿನ ರಣಜಿ ಟ್ರೋಫಿ ಕ್ರಿಕೆಟ್‌ ಸ್ಪರ್ಧೆಗಳು ಸೆಮಿಫೈನಲ್‌ನತ್ತ ಮುಖ ಮಾಡಿವೆ. ಸೋಮವಾರಕ್ಕೆ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮುಗಿದಿದ್ದು, ಡಿ. 17ರಿಂದ ಸೆಮಿಫೈನಲ್‌ ಹಣಾಹಣಿ ಆರಂಭವಾಗಲಿದೆ.

Advertisement

ಆರ್‌. ವಿನಯ್‌ ಕುಮಾರ್‌ ಸಾರಥ್ಯದ ಕರ್ನಾಟಕ ಒಂದು ದಿನ ಮೊದಲೇ ಮುಂಬಯಿಗೆ ಇನ್ನಿಂಗ್ಸ್‌ ಸೋಲುಣಿಸಿ ಸೆಮಿಫೈನಲಿಗೆ ಲಗ್ಗೆ ಇರಿಸಿತ್ತು. ಈಗ ದಿಲ್ಲಿ, ವಿದರ್ಭ ಮತ್ತು ಬಂಗಾಲ ತಂಡಗಳು ಈ ಸಾಲಿಗೆ ಸೇರಿವೆ. ಇವುಗಳಲ್ಲಿ ದಿಲ್ಲಿ ಮತ್ತು ವಿದರ್ಭ ಸ್ಪಷ್ಟ ಗೆಲುವು ಸಾಧಿಸಿದರೆ, ಬಂಗಾಲ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಸೆಮಿಫೈನಲ್‌ ಪ್ರವೇಶಿಸಿತು. ಕಳೆದ ಬಾರಿಯ ಚಾಂಪಿಯನ್‌ ಗುಜರಾತ್‌, ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ ಕಂಡ ಕೇರಳ ಹಾಗೂ ಮಧ್ಯಪ್ರದೇಶ ತಂಡಗಳು ಕೂಟದಿಂದ ಹೊರಬಿದ್ದವು.

ಒಂದು ಸೆಮಿಫೈನಲ್‌ನಲ್ಲಿ ಕರ್ನಾಟಕ-ವಿದರ್ಭ ಮುಖಾಮುಖೀಯಾಗಲಿವೆ. ಇನ್ನೊಂದು ಸೆಮಿಫೈನಲ್‌ ಪಂದ್ಯ ದಿಲ್ಲಿ-ಬಂಗಾಲ ನಡುವೆ ನಡೆಯಲಿದೆ.

ದಿಲ್ಲಿಗೆ 7 ವಿಕೆಟ್‌ ಜಯ
ವಿಜಯವಾಡ:
ಇಲ್ಲಿ ನಡೆದ ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 7 ಬಾರಿಯ ಚಾಂಪಿಯನ್‌ ದಿಲ್ಲಿ ತಂಡ ಮಧ್ಯಪ್ರದೇಶವನ್ನು 7 ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿತು. 217 ರನ್ನುಗಳ ಗೆಲುವಿನ ಗುರಿ ಪಡೆದಿದ್ದ ದಿಲ್ಲಿ ಪಂದ್ಯದ ಅಂತಿಮ ದಿನವಾದ ಸೋಮವಾರ 3 ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿತು.

4ನೇ ದಿನದ ಅಂತ್ಯಕ್ಕೆ ರಿಷಬ್‌ ಪಂತ್‌ ನೇತೃತ್ವದ ದಿಲ್ಲಿ ವಿಕೆಟ್‌ ನಷ್ಟವಿಲ್ಲದೆ 8 ರನ್‌ ಮಾಡಿತ್ತು. ಸ್ಕೋರ್‌ 11ಕ್ಕೆ ತಲಪುವಷ್ಟರಲ್ಲಿ ವಿಕಾಸ್‌ ತೋಕಾಸ್‌ (6) ವಿಕೆಟ್‌ ಬಿತ್ತು. ದ್ವಿತೀಯ ವಿಕೆಟಿಗೆ ಜತೆಗೂಡಿದ ಕುಣಾಲ್‌ ಚಾಂಡೇಲ ಮತ್ತು ಗೌತಮ್‌ ಗಂಭೀರ್‌ 98 ರನ್‌ ಒಟ್ಟುಗೂಡಿಸಿದರು. ಬಳಿಕ ಗಂಭೀರ್‌-ಧ್ರುವ ಶೋರಿ ಜೋಡಿಯಿಂದ 95 ರನ್ನುಗಳ ಜತೆಯಾಟ ದಾಖಲಾಯಿತು. ಗೆಲವಿಗೆ ಇನ್ನೇನು 13 ರನ್‌ ಬೇಕಿರುವಾಗ ಶತಕದ ಹಾದಿಯಲ್ಲಿದ್ದ ಗಂಭೀರ್‌ ರನೌಟಾದರು. ಗಂಭೀರ್‌ ಗಳಿಕೆ 95 ರನ್‌. 129 ಎಸೆತಗಳ ಈ ಸೊಗಸಾದ ಆಟದಲ್ಲಿ 9 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಚಾಂಡೇಲ 57, ಶೋರಿ ಔಟಾಗದೆ 46 ರನ್‌ ಮಾಡಿದರು.

Advertisement

ಆದರೆ ಪಂದ್ಯಶ್ರೇಷ್ಠ ಗೌರವ ಮಧ್ಯಪ್ರದೇಶದ ಬ್ಯಾಟ್ಸ್‌ಮನ್‌ ಹರ್‌ಪ್ರೀತ್‌ ಸಿಂಗ್‌ ಪಾಲಾಯಿತು. ಅವರು ಕ್ರಮವಾಗಿ 107 ಹಾಗೂ 78 ರನ್‌ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: ಮಧ್ಯಪ್ರದೇಶ-338 ಮತ್ತು 283. ದಿಲ್ಲಿ-405 ಮತ್ತು 3 ವಿಕೆಟಿಗೆ 217. ಪಂದ್ಯಶ್ರೇಷ್ಠ: ಹರ್‌ಪ್ರೀತ್‌ ಸಿಂಗ್‌.

ವಿದರ್ಭ ಬೃಹತ್‌ ವಿಜಯ
ಸೂರತ್‌:
ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆದ ಕೇರಳ ತಂಡ ವಿದರ್ಭದ ಕೈಯಲ್ಲಿ 412 ರನ್ನುಗಳ ಬೃಹತ್‌ ಅಂತರದ ಸೋಲುಂಡು ಕೂಟದಿಂದ ನಿರ್ಗಮಿಸಿದೆ. ವಿದರ್ಭ ರಣಜಿ ಚರಿತ್ರೆಯ ದೊಡ್ಡ ಜಯವೊಂದನ್ನು ದಾಖಲಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

ಗೆಲುವಿಗೆ 578 ರನ್ನುಗಳ ಕಠಿನ ಗುರಿ ಪಡೆದಿದ್ದ ಕೇರಳ ಕೇವಲ 165 ರನ್ನಿಗೆ ಆಲೌಟ್‌ ಆಯಿತು. ಆಫ್ಸ್ಪಿನ್ನರ್‌ ಆದಿತ್ಯ ಸರ್ವಟೆ 41 ರನ್ನಿಗೆ 6 ವಿಕೆಟ್‌ ಕಿತ್ತು ವಿದರ್ಭದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇರಳ ಪರ ಸಲ್ಮಾನ್‌ ನಿಜಾರ್‌ 64 ಬಾರಿಸಿದ್ದನ್ನು ಹೊರತುಪಡಿಸಿದರೆ ಉಳಿದವರ್ಯಾರೂ ಕ್ರೀಸ್‌ ಆಕ್ರಮಿಸಿಕೊಳ್ಳಲಿಲ್ಲ.

ಇದಕ್ಕೂ ಮುನ್ನ 6ಕ್ಕೆ 431 ರನ್‌ ಮಾಡಿದ್ದ ವಿದರ್ಭ, ಅಂತಿಮ ದಿನದಾಟದಲ್ಲಿ 9ಕ್ಕೆ 507 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಿತ್ತು ಕೇರಳವನ್ನು ನಿಯಂತ್ರಿಸಿದ ರಜನೀಶ್‌ ಗುರ್ಬಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ-246 ಮತ್ತು 9 ವಿಕೆಟಿಗೆ 507 ಡಿಕ್ಲೇರ್‌. ಕೇರಳ-176 ಮತ್ತು 165. ಪಂದ್ಯಶ್ರೇಷ್ಠ: ರನಜೀಶ್‌ ಗುರ್ಬಾನಿ.

ಬಂಗಾಲ-ಗುಜರಾತ್‌ ಪಂದ್ಯ ಡ್ರಾ
ಜೈಪುರ
: ಬಂಗಾಲ ಮತ್ತು ಗುಜರಾತ್‌ ತಂಡಗಳ ನಡುವೆ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯ ಡ್ರಾಗೊಂಡಿತು. ಆದರೆ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಬಂಗಾಲ ಸೆಮಿಫೈನಲ್‌ ಪ್ರವೇಶಿಸಿತು. ಹಾಲಿ ಚಾಂಪಿಯನ್‌ ಗುಜರಾತ್‌ ಕೂಟದಿಂದ ಹೊರಬಿತ್ತು.

4ನೇ ದಿನದಾಟ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 483 ರನ್‌ ಮಾಡಿದ್ದ ಬಂಗಾಲ, ಅಂತಿಮ ದಿನವನ್ನು ಬ್ಯಾಟಿಂಗ್‌ ಅಭ್ಯಾಸಕ್ಕೆ ಬಳಸಿಕೊಂಡಿತು. ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವಾಗ ಬಂಗಾಲ 6 ವಿಕೆಟಿಗೆ 695 ರನ್‌ ಪೇರಿಸಿತ್ತು. ಅಂತಿಮ ದಿನದಾಟದಲ್ಲಿ ಅನುಸ್ತೂಪ್‌ ಮಜುಮಾªರ್‌ ಶತಕ ಬಾರಿಸಿ ಮೆರೆದರು (ಅಜೇಯ 132). ಇದು ಬಂಗಾಲದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಾಖಲಾದ 3ನೇ ಶತಕ. ಆರಂಭಕಾರ ಅಭಿಮನ್ಯು ಈಶ್ವರನ್‌ 114, ಋತಿಕ್‌ ಚಟರ್ಜಿ 216 ರನ್‌ ಹೊಡೆದಿದ್ದರು. ಮೊದಲ ಸರದಿಯಲ್ಲೂ ಶತಕ ಹೊಡೆದಿದ್ದ ಈಶ್ವರನ್‌ (129) ಪಂದ್ಯಶ್ರೇಷ್ಠರೆನಿಸಿದರು.

ಸಂಕ್ಷಿಪ್ತ ಸ್ಕೋರ್‌: ಬಂಗಾಲ-354 ಮತ್ತು 6 ವಿಕೆಟಿಗೆ 695. ಗುಜರಾತ್‌-224. ಪಂದ್ಯಶ್ರೇಷ್ಠ: ಅಭಿಮನ್ಯು ಈಶ್ವರನ್‌.

Advertisement

Udayavani is now on Telegram. Click here to join our channel and stay updated with the latest news.

Next