Advertisement

ರಣಜಿ ಟ್ರೋಫಿ ಕ್ರಿಕೆಟ್‌: ಸೌರಾಷ್ಟ್ರ ಗೆಲುವು; ಕರ್ನಾಟಕದ ಎದುರಾಳಿ

11:08 PM Feb 04, 2023 | Team Udayavani |

ರಾಜ್‌ಕೋಟ್: ಅರ್ಪಿತ್‌ ವಸವಾಡ ನಾಯಕತ್ವದ ಸೌರಾಷ್ಟ್ರ 4ನೇ ತಂಡವಾಗಿ ರಣಜಿ ಟ್ರೋಫಿ ಸೆಮಿಪೈನಲ್‌ ಪ್ರವೇಶಿಸಿದೆ. ಇಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಮುಖಾಮುಖಿ ಯಲ್ಲಿ ಅದು ಪಂಜಾಬ್‌ಗ 71 ರನ್ನು ಗಳ ಸೋಲುಣಿಸಿತು.

Advertisement

ಸೌರಾಷ್ಟ್ರವಿನ್ನು 8 ಬಾರಿಯ ಚಾಂಪಿ ಯನ್‌ ಕರ್ನಾಟಕವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ. ಈ ಪಂದ್ಯದ ತಾಣ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’. ಇನ್ನೊಂದು ಸೆಮಿಫೈನಲ್‌ ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ಮತ್ತು ಬಂಗಾಲ ನಡುವೆ ಇಂದೋರ್‌ನಲ್ಲಿ ನಡೆಯಲಿದೆ. ಎರಡೂ ಪಂದ್ಯಗಳು ಫೆ. 8ರಂದು ಆರಂಭವಾಗಲಿವೆ.

ಕರ್ನಾಟಕ, ಮಧ್ಯಪ್ರದೇಶ ಮತ್ತು ಬಂಗಾಲ ತಂಡಗಳು ಶುಕ್ರವಾರವೇ ಸೆಮಿಫೈನಲ್‌ಗೆ ನೆಗೆದಿದ್ದವು. ಇವು ಕ್ರಮವಾಗಿ ಉತ್ತರಾಖಂಡ, ಆಂಧ್ರ ಪ್ರದೇಶ ಮತ್ತು ಜಾರ್ಖಂಡ್‌ ತಂಡಗಳ ವಿರುದ್ಧ ಜಯ ಸಾಧಿಸಿದವು. ಇದೀಗ ಸೌರಾಷ್ಟ್ರ ಜಯದೊಂದಿಗೆ ನಾಲ್ಕೂ ತಂಡಗಳು ಸ್ಪಷ್ಟ ಫ‌ಲಿತಾಂಶ ದಾಖಲಿಸಿದಂತಾಯಿತು.

ಸೌರಾಷ್ಟ್ರ-ಪಂಜಾಬ್‌ ನಡುವಿನ ಪಂದ್ಯವಷ್ಟೇ 5ನೇ ದಿನಕ್ಕೆ ಕಾಲಿಟ್ಟಿತ್ತು. ಪಂಜಾಬ್‌ ಜಯಕ್ಕೆ 252 ರನ್‌ ಗುರಿ ನಿಗದಿಯಾಗಿತ್ತು. 4ನೇ ದಿನದಾಟದ ಕೊನೆಯಲ್ಲಿ 2 ವಿಕೆಟ್‌ ಕಳೆದುಕೊಂಡು 52 ರನ್‌ ಮಾಡಿದ್ದ ಪಂಜಾಬ್‌, ಅಂತಿಮ ದಿನವಾದ ಶನಿವಾರ 180 ರನ್ನಿಗೆ ಆಲೌಟ್‌ ಆಯಿತು.

ತ್ರಿವಳಿ ಸ್ಪಿನ್ನರ್‌ಗಳಾದ ಪಾರ್ಥ್ ಭಟ್‌, ಧರ್ಮೇಂದ್ರಸಿನ್ಹ ಜಡೇಜ ಮತ್ತು ಯುವರಾಜ್‌ ಸಿಂಗ್‌ ದೋಡಿಯ ಸೇರಿಕೊಂಡು ಪಂಜಾಬ್‌ಗ ಬಲವಾದ ಪಂಚ್‌ ಕೊಟ್ಟರು. ಕ್ರಮವಾಗಿ 5, 3 ಹಾಗೂ 2 ವಿಕೆಟ್‌ ಕಿತ್ತು ಸೌರಾಷ್ಟ್ರ ಜಯಭೇರಿ ಮೊಳಗಿಸಿದರು.

Advertisement

ಹಿನ್ನಡೆ ಬಳಿಕ ಗೆಲುವು
128 ರನ್‌ ಹಿನ್ನಡೆಗೆ ಸಿಲುಕಿಯೂ ಈ ಪಂದ್ಯವನ್ನು ಜಯಿಸಿದ್ದು ಸೌರಾಷ್ಟ್ರದ ಕ್ರಿಕೆಟ್‌ ಸಾಹಸಕ್ಕೆ ಸಾಕ್ಷಿ. ಸೌರಾಷ್ಟ್ರದ 303ಕ್ಕೆ ಉತ್ತರವಾಗಿ ಪಂಜಾಬ್‌ 431 ರನ್‌ ಪೇರಿಸಿತ್ತು. ಆರಂಭಿಕರಿಬ್ಬರೂ ಸೆಂಚುರಿ ಬಾರಿಸಿದ್ದರು. ಪ್ರಭ್‌ಸಿಮ್ರಾನ್‌ ಸಿಂಗ್‌ 126, ನಮನ್‌ ಧಿರ್‌ 131 ರನ್‌ ಹೊಡೆದು 212 ರನ್ನುಗಳ ಅಡಿಪಾಯ ನಿರ್ಮಿಸಿದ್ದರು.

ಆರಂಭಿಕ ಕುಸಿತದಿಂದ ಚೇತರಿಸಿ ಕೊಂಡ ಸೌರಾಷ್ಟ್ರ ದ್ವಿತೀಯ ಸರದಿಯಲ್ಲಿ 379 ರನ್‌ ಬಾರಿಸಿತು. ಬೌಲರ್‌ಗಳಾದ ಪ್ರೇರಕ್‌ ಮಂಕಡ್‌ (88), ಪಾರ್ಥ್ ಭಟ್‌ (51) ಅಮೋಘ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಅರ್ಪಿತ್‌ ವಸವಾಡ ಮತ್ತು ಚಿರಾಗ್‌ ಜಾನಿ ತಲಾ 77 ರನ್‌ ಹೊಡೆದರು. ಪಂಜಾಬ್‌ ತಂಡದ ಎಡಗೈ ಸ್ಪಿನ್ನರ್‌ ವಿಜಯ್‌ ಚೌಧರಿ 7 ವಿಕೆಟ್‌ ಕಿತ್ತು ಮಿಂಚಿದರು.

ದ್ವಿತೀಯ ಸರದಿಯಲ್ಲಿ ಪಂಜಾಬ್‌ಗ ಬ್ಯಾಟಿಂಗ್‌ ಮ್ಯಾಜಿಕ್‌ ಸಾಧ್ಯವಾಗಲಿಲ್ಲ. ಮೊದಲ ಸರದಿಯ ಶತಕವೀರರಾದ ಪ್ರಭ್‌ಸಿಮ್ರಾನ್‌ ಸಿಂಗ್‌ 22, ನಮನ್‌ ಧಿರ್‌ ಕೇವಲ 11 ರನ್ನಿಗೆ ಆಟ ಮುಗಿಸಿ ದರು. 45 ರನ್‌ ಮಾಡಿದ ನಾಯಕ ಮನ್‌ದೀಪ್‌ ಸಿಂಗ್‌ ಅವರದೇ ಪಂಜಾಬ್‌ ಸರದಿಯ ಗರಿಷ್ಠ ಗಳಿಕೆ. ಪುಖಾಜ್‌ ಮಾನ್‌ 42 ರನ್‌ ಮಾಡಿದರು.
ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-303 ಮತ್ತು 379. ಪಂಜಾಬ್‌-431 ಮತ್ತು 180. ಪಂದ್ಯಶ್ರೇಷ್ಠ: ಪಾರ್ಥ್ ಭಟ್‌.

ರಣಜಿ ಟ್ರೋಫಿ
ಸೆಮಿಫೈನಲ್ಸ್‌ (ಫೆ. 8-12)
1. ಬಂಗಾಲ-ಮಧ್ಯಪ್ರದೇಶ (ಇಂದೋರ್‌)
2. ಕರ್ನಾಟಕ-ಸೌರಾಷ್ಟ್ರ (ಬೆಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next