Advertisement

ರಣಜಿ ಟ್ರೋಫಿ ಕ್ರಿಕೆಟ್‌: ಗೋವಾ ವಿರುದ್ಧ ಬೇಕಿದೆ ಗರಿಷ್ಠ ಅಂಕ

11:31 PM Dec 26, 2022 | Team Udayavani |

ಪಣಜಿ: ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ಮೂರನೇ ಸುತ್ತಿನ ಕದನ ಮಂಗಳವಾರದಿಂದ ಆರಂಭವಾಗಲಿದೆ. “ಸಿ’ ವಿಭಾಗದಲ್ಲಿರುವ ಕರ್ನಾಟಕ ತಂಡ ಆತಿಥೇಯ ಗೋವಾವನ್ನು ಎದುರಿಸಲು ಹೊಸ ಆತ್ಮವಿಶ್ವಾಸದಿಂದ ಸಜ್ಜಾಗಿದೆ.

Advertisement

ಮೊದಲೆರಡು ಪಂದ್ಯಗಳಲ್ಲಿ ಸರ್ವೀಸಸ್‌ ಹಾಗೂ ಪುದುಚೇರಿ ತಂಡಗಳನ್ನು “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಎದುರಿಸಿದ್ದ ಕರ್ನಾಟಕಕ್ಕೆ ಇದು ತವರಿನಾಚೆಯ ಮೊದಲ ಪಂದ್ಯ. ಸರ್ವೀಸಸ್‌ ವಿರುದ್ಧ ಡ್ರಾ ಸಾಧಿಸಿದ್ದ ಮಾಯಾಂಕ್‌ ಅಗರ್ವಾಲ್‌ ಬಳಗ, ಬಳಿಕ ಪುದುಚೇರಿಯನ್ನು ಮೂರೇ ದಿನಗಳಲ್ಲಿ ಮುಗಿಸಿತ್ತು.

ಅಂಕಪಟ್ಟಿಯಲ್ಲಿ ಕರ್ನಾಟಕಕ್ಕೆ ಸದ್ಯ 2ನೇ ಸ್ಥಾನ (10 ಅಂಕ). ಎರಡೂ ಪಂದ್ಯ ಗೆದ್ದಿರುವ ಛತ್ತೀಸ್‌ಗಢ ಅಗ್ರಸ್ಥಾನದಲ್ಲಿದೆ (13 ಅಂಕ). ಕರ್ನಾಟಕವನ್ನು ತವರಲ್ಲೇ ಎದುರಿಸಲಿರುವ ಗೋವಾ 4 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಜಮ್ಶೆಡ್‌ಪುರದಲ್ಲಿ ನಡೆದ ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ಗೋವಾ ಸ್ವಲ್ಪದರಲ್ಲೇ ಇನ್ನಿಂಗ್ಸ್‌ ಮುನ್ನಡೆಯ ಅವಕಾಶವನ್ನು ಕಳೆದುಕೊಂಡಿತ್ತು.

ಕರ್ನಾಟಕದ ವೇಗದ ವಿಭಾಗ ಹೆಚ್ಚು ಬಲಿಷ್ಠವಾಗಿದೆ. ವಿದ್ವತ್‌ ಕಾವೇರಪ್ಪ, ವೈಶಾಖ್‌ ವಿಜಯ್‌ ಕುಮಾರ್‌, ರೋನಿತ್‌ ಮೋರೆ ಉತ್ತಮ ಲಯದಲ್ಲಿದ್ದಾರೆ. ಪುದುಚೇರಿ ವಿರುದ್ಧದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ ಅವರಿಗೆ ಸಿಕ್ಕಿದ್ದು ಎರಡೇ ಓವರ್‌. ಪಂದ್ಯ 4ನೇ ದಿನಕ್ಕೆ ಕಾಲಿಟ್ಟರೆ ಶ್ರೇಯಸ್‌ಗೆ ಬೌಲಿಂಗ್‌ ನೀಡಲು ಯೋಚಿಸಿದ್ದೆವು ಎಂಬುದಾಗಿ ಕೋಚ್‌ ಪಿ.ವಿ. ಶಶಿಕಾಂತ್‌ ಹೇಳಿದ್ದರು.

ಕರ್ನಾಟಕದ ಬ್ಯಾಟಿಂಗ್‌ ಕೂಡ ಬಲಿಷ್ಠವಾಗಿಯೇ ಗೋಚರಿಸುತ್ತದೆ. ಆದರೆ ನೈಜ ಸಾಮರ್ಥ್ಯ ಹೊರಹೊಮ್ಮಿ ಸಲು ಬಹುತೇಕ ಬ್ಯಾಟರ್ ವಿಫ‌ಲ ರಾಗಿದ್ದಾರೆ. ಪುದುಚೇರಿ ವಿರುದ್ಧ ದಾಖಲಾದ 304 ರನ್ನುಗಳಲ್ಲಿ ಆರಂಭಕಾರ ರವಿಕುಮಾರ್‌ ಸಮರ್ಥ್ ಒಬ್ಬರ ಪಾಲೇ 137 ರನ್‌ ಆಗಿತ್ತು. ಮಾಯಾಂಕ್‌ ಅಗರ್ವಾಲ್‌ ಅರ್ಧ ಶತಕ ಹೊಡೆದರೆ (54), ಮತ್ತೋರ್ವ ಅನುಭವಿ ಆಟಗಾರ ಮನೀಷ್‌ ಪಾಂಡೆ 45 ರನ್‌ ಮಾಡಿದ್ದರು. ರೋನಿತ್‌ ಮೋರೆ ಖಾತೆಯನ್ನೇ ತೆರೆದಿರಲಿಲ್ಲ.

Advertisement

ಮಧ್ಯಮ ಕ್ರಮಾಂಕದ ಹೊಸಬರಾದ ವಿಶಾಲ್‌ ಓನತ್‌ ಮತ್ತು ನಿಕಿನ್‌ ಜೋಸ್‌ ಲಭಿಸಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕಿದೆ. ಈಗಿನ ಸಾಮಾನ್ಯ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ, ಮುಂದೆ ಬಲಿಷ್ಠ ತಂಡಗಳನ್ನು ಎದುರಿಸುವಾಗ ಹೆಚ್ಚಿನ ಆತ್ಮವಿಶ್ವಾಸ ಲಭಿಸುವುದರಲ್ಲಿ ಅನುಮಾನವಿಲ್ಲ.

ಒಟ್ಟಾರೆ ಗೋವಾ ವಿರುದ್ಧ ಗರಿಷ್ಠ ಅಂಕ ಗಳಿಸುವುದೇ ತಂಡದ ಗುರಿ ಆಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next