ಹೊಸದಿಲ್ಲಿ : ದೇಶದ ಅತ್ಯುನ್ನತ ಹಾಗೂ ಐತಿಹಾಸಿಕ ಕ್ರಿಕೆಟ್ ಪಂದ್ಯಾವಳಿಯಾದ “ರಣಜಿ ಟ್ರೋಫಿ’ಯನ್ನು ಇದೇ ಮೊದಲ ಬಾರಿಗೆ ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಕಾರಣ, ಕೊರೊನಾ. ಬಹುತೇಕ ರಾಜ್ಯ ಕ್ರಿಕೆಟ್ ಮಂಡಳಿಗಳ ನಿರ್ಧಾರದಂತೆ 2020-21ನೇ ಸಾಲಿನ ರಣಜಿ ಪಂದ್ಯಾವಳಿಯನ್ನು ಕೈಬಿಡಲಾಗುತ್ತಿದೆ ಎಂದು ಬಿಸಿಸಿಐ ತಿಳಿಸಿದೆ.
ಆದರೆ “ರಣಜಿ ಒನ್‌ಡೇ’ ಎಂದೇ ಜನಪ್ರಿಯ ಗೊಂಡಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ, ಅಂಡರ್-19 ವಯೋಮಿತಿಯ ವಿನೂ ಮಂಕಡ್ ಟ್ರೋಫಿ ಹಾಗೂ ವನಿತೆಯರ ರಾಷ್ಟ್ರೀಯ ಏಕದಿನ ಪಂದ್ಯಾವಳಿ ಎಂದಿನಂತೆ ನಡೆ ಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಇವೆಲ್ಲವೂ ಜೈವಿಕ ಸುರಕ್ಷಾ ವಲಯದಲ್ಲಿ ನಡೆಯಲಿದ್ದು, ದಿನಾಂಕವನ್ನು ಇನ್ನಷ್ಟೇ ನಿರ್ಧರಿಸಲಾಗುವುದು.
1934-35ರಿಂದ ಮೊದಲ್ಗೊಂಡ “ರಣಜಿ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿ 2019-20ನೇ ಋತುವಿನ ತನಕ ನಿರಾತಂಕವಾಗಿ ನಡೆದುಕೊಂಡು ಬಂದಿತ್ತು. 87 ವರ್ಷಗಳ ಭವ್ಯ ಇತಿಹಾಸದಲ್ಲಿ ಇದೇ ಮೊದಲ ಸಲ ರದ್ದುಗೊಳ್ಳುತ್ತಿರುವುದು ಕ್ರಿಕೆಟಿಗರಿಗೆ ಹಾಗೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಕ್ರಿಕೆಟ್ ಮಂಡಳಿಗಳ ಆಯ್ಕೆ
ರಣಜಿ ಮತ್ತು ವಿಜಯ್ ಹಜಾರೆ ಕ್ರಿಕೆಟ್‌ಗಳಲ್ಲಿ ಯಾವುದನ್ನು ಆಡಿಸಬೇಕು ಎಂಬ ಆಯ್ಕೆಯನ್ನು ಬಿಸಿಸಿಐ ರಾಜ್ಯ ಕ್ರಿಕೆಟ್ ಮಂಡಳಿಗಳ ಮುಂದಿಟ್ಟಿತ್ತು. ಇದಕ್ಕೆ ವಿಜಯ್ ಹಜಾರೆ ಟ್ರೋಫಿ ಪರ ಹೆಚ್ಚಿನ ಒಲವು ತೋರಲಾಯಿತು. ಇದರಂತೆಯೇ 2020-21ರ ಋತುವಿನ ರಣಜಿ ಪಂದ್ಯಾವಳಿಯನ್ನು ಕೈಬಿಡಲು ನಿರ್ಧರಿಸಲಾಯಿತು ಎಂದು ಜಯ್ ಶಾ ಹೇಳಿದರು.
Related Articles
ರಣಜಿ ಟ್ರೋಫಿ ಪಂದ್ಯಾವಳಿಗೆ ಕನಿಷ್ಠ 2 ತಿಂಗಳ ಕಾಲಾವಕಾಶ ಅಗತ್ಯವಿದ್ದು, ದೇಶದ ವಿವಿಧ ಕೇಂದ್ರಗಳಲ್ಲಿ ಜೈವಿಕ ಸುರಕ್ಷಾ ವಲಯವನ್ನು ನಿರ್ಮಿಸಿ ಇದನ್ನು ಆಡಿಸುವುದು ದೊಡ್ಡ ಸವಾಲು ಎಂಬುದು ಬಿಸಿಸಿಐ ಲೆಕ್ಕಾಚಾರ. ಇದಕ್ಕೀಗ ಸಮ ಯಾವಕಾಶವೂ ಇಲ್ಲವಾಗಿದೆ. ಮಾಮೂಲು ವೇಳಾ ಪಟ್ಟಿಯಂತೆ ಈ ವೇಳೆ ರಣಜಿ ಟ್ರೋಫಿ ಪಂದ್ಯಾವಳಿ ಅಂತಿಮ ಹಂತದಲ್ಲಿರುತ್ತದೆ.
ವೇತನ ಪಾವತಿ
ಕೂಟ ನಡೆಯದೇ ಹೋದರೂ ರಣಜಿ ಆಟಗಾರರಿಗೆ ವೇತನ ಪಾವತಿಸಲು ಬಿಸಿಸಿಐ ನಿರ್ಧರಿಸಿದೆ. ಪಂದ್ಯವೊಂದರ ಆಟಗಾರರ ಸಂಭಾವನೆ 1.5 ಲಕ್ಷ ರೂ.ಗಳಷ್ಟಾಗುತ್ತದೆ.
ಇದೇ ವೇಳೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಜಯ್ ಶಾ ಕೃತಜ್ಞತೆ ಸಲ್ಲಿಸಿದ್ದಾರೆ.