Advertisement
ಮೊದಲ ದಿನ ಮಾಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಅವರ ಬ್ಯಾಟಿಂಗ್ ವೈಭವವನ್ನು ವೀಕ್ಷಿಸಿದ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಶುಕ್ರವಾರ ಆಲ್‌ರೌಂಡರ್‌ಗಳಾದ ಸ್ಟುವರ್ಟ್ ಬಿನ್ನಿ ಮತ್ತು ಶ್ರೇಯಸ್ ಗೋಪಾಲ್ ಸೊಗಸಾದ ಆಟದ ಮೂಲಕ ಭರಪೂರ ರಂಜನೆ ಒದಗಿಸಿದರು. ಬಿನ್ನಿ 10ನೇ ಪ್ರಥಮ ದರ್ಜೆ ಶತಕ ಬಾರಿಸಿ ಸಂಭ್ರಮಿಸಿದರೆ, ಶ್ರೇಯಸ್ ಗೋಪಾಲ್ ಕೇವಲ 8 ರನ್ ಕೊರತೆಯಿಂದ ಶತಕ ವಂಚಿತರಾಗಬೇಕಾಯಿತು. 169 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಾಯಾಂಕ್ ಅಗರ್ವಾಲ್ 176ಕ್ಕೆ ತಲುಪಿದಾಗ ದುರದೃಷ್ಟವಶಾತ್ ರನೌಟ್ ಆದರು. ಈ ನಡುವೆ ಕೀಪರ್ ಸಿ.ಎಂ. ಗೌತಮ್ 46, ಅಭಿಮನ್ಯು ಮಿಥುನ್ ಅಜೇಯ 35 ರನ್ ಮಾಡಿ ಕರ್ನಾಟಕದ ದೊಡ್ಡ ಮೊತ್ತದಲ್ಲಿ ತಮ್ಮ ಪಾಲನ್ನೂ ಸಲ್ಲಿಸಿದರು.
4ಕ್ಕೆ 348 ರನ್ ಗಳಿಸಿದಲ್ಲಿಂದ ಶುಕ್ರವಾರದ ಆಟ ಮುಂದುವರಿಸಿದ ಕರ್ನಾಟಕ, ಹತ್ತೇ ರನ್ ಸೇರಿಸುವಷ್ಟರಲ್ಲಿ ಅಗರ್ವಾಲ್ ಅವರನ್ನು ಕಳೆದುಕೊಂಡಿತು. ಅವರಿಗೆ ಸೇರಿಸಲು ಸಾಧ್ಯವಾದದ್ದು ಏಳೇ ರನ್. ಭರ್ತಿ 250 ಎಸೆತ ಎದುರಿಸಿದ ಅಗರ್ವಾಲ್ 24 ಬೌಂಡರಿ, 3 ಸಿಕ್ಸರ್ ನೆರವಿನಿಂದ 176 ರನ್ ಸೂರೆಗೈದರು.
Related Articles
Advertisement
ಅಂತಿಮ ವಿಕೆಟಿಗೆ 101 ರನ್!8ನೇ ಕ್ರಮಾಂಕದಲ್ಲಿ ಆಡಲಿಳಿದ ಶ್ರೇಯಸ್ ಗೋಪಾಲ್ ಕೂಡ ಕ್ರೀಸಿಗೆ ಅಂಟಿಕೊಂಡರು. ಹೀಗಾಗಿ ತಂಡದ ಮೊತ್ತ 600ರ ಆಚೆ ವಿಸ್ತರಿಸಲ್ಪಟ್ಟಿತು. ಕೆ. ಗೌತಮ್ (12) ಮತ್ತು ವಿನಯ್ ಕುಮಾರ್ (0) ಐದೇ ರನ್ ಅಂತರದಲ್ಲಿ ನಿರ್ಗಮಿಸಿದಾಗ ಕರ್ನಾಟಕದ ಸ್ಕೋರ್ 9ಕ್ಕೆ 548 ರನ್ ಆಗಿತ್ತು. ಇಲ್ಲಿಂದ ಮುಂದೆ ಗೋಪಾಲ್-ಮಿಥುನ್ ಕೂಡಿಕೊಂಡು ದಿಲ್ಲಿ ಬೌಲರ್‌ಗಳಿಗೆ ಮತ್ತೆ ಬೆವರಿಳಿಸತೊಡಗಿದರು. ಅಂತಿಮ ವಿಕೆಟಿಗೆ ನೂರೊಂದು ರನ್ ಪೇರಿಸಿದ್ದು ಈ ಜೋಡಿಯ ಹೆಗ್ಗಳಿಕೆ. ಆದರೆ ಗೋಪಾಲ್‌ಗೆ “ನೂರು’ ಒಲಿಯದೇ ಹೋಯಿತು. 165 ಎಸೆತ ಎದುರಿಸಿದ ಅವರು 11 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ 92 ರನ್ ಮಾಡಿ ಮಿಶ್ರಾಗೆ ಬೌಲ್ಡ್ ಆದರು. ಅಲ್ಲಿಗೆ ಕರ್ನಾಟಕದ ಇನ್ನಿಂಗ್ಸ್ ಕೂಡ ಮುಗಿಯಿತು. ಆಲೂರು ಅಂಗಳ ಅಪ್ಪಟ ಬ್ಯಾಟಿಂಗ್ ಟ್ರ್ಯಾಕ್‌ನಂತೆ ಗೋಚರಿಸುತ್ತಿದೆ. ಶನಿವಾರ ದಿಲ್ಲಿ ಕೂಡ ಕರ್ನಾಟಕದಂತೆ ಬ್ಯಾಟಿಂಗ್ ಮಾಡಿದರೆ ಈ ಪಂದ್ಯದ ಕುತೂಹಲವೆಲ್ಲ ಮೊದಲ ಇನ್ನಿಂಗ್ಸ್ ಮುನ್ನಡೆಗಷ್ಟೇ ಸೀಮಿತಗೊಳ್ಳುವುದು ಖಚಿತ. ಅಕಸ್ಮಾತ್ ರಾಜ್ಯ ಬೌಲರ್‌ಗಳು ಮೇಲುಗೈ ಸಾಧಿಸಿ ಪಂತ್ ಪಡೆಗೆ ಕಡಿವಾಣ ಹಾಕಿ ಭಾರೀ ಮುನ್ನಡೆ ಸಾಧಿಸಿದರೆ ಅಥವಾ ಫಾಲೋಆನ್ ಹೇರಿದರಷ್ಟೇ ಸ್ಪಷ್ಟ ಫಲಿತಾಂಶದ ನಿರೀಕ್ಷೆ ಇರಿಸಿಕೊಳ್ಳಬಹುದು. 3ನೇ ದಿದನಾಟದಲ್ಲಿ ಗೌತಮ್-ಗೋಪಾಲ್ ಜೋಡಿಯ ಸ್ಪಿನ್ ದಾಳಿಯನ್ನು ದಿಲ್ಲಿ ಹೇಗೆ ಎದುರಿಸಲಿದೆ ಎಂಬುದರ ಮೇಲೆ ಪಂದ್ಯದ ಗತಿಯನ್ನು ನಿರ್ಧರಿಸಬಹುದು. ಸಂಕ್ಷಿಪ್ತ ಸ್ಕೋರ್: ಕರ್ನಾಟಕ-649 (ಅಗರ್ವಾಲ್ 176, ಬಿನ್ನಿ 118, ಗೋಪಾಲ್ 92, ಪಾಂಡೆ 74, ಸಮರ್ಥ್ 58, ವಿಕಾಸ್ ಮಿಶ್ರಾ 152ಕ್ಕೆ 3, ಮನನ್ ಶರ್ಮ 151ಕ್ಕೆ 3). ದಿಲ್ಲಿ-ವಿಕೆಟ್ ನಷ್ಟವಿಲ್ಲದೆ 20 (ಗಂಭೀರ್ ಬ್ಯಾಟಿಂಗ್ 12, ಚಂದ್ ಬ್ಯಾಟಿಂಗ್ 8).