Advertisement

Ranji Trophy: ಅಗರ್ವಾಲ್‌, ಪಡಿಕ್ಕಲ್‌ ಆಕರ್ಷಕ ಶತಕ; ಕರ್ನಾಟಕ ನಾಲ್ಕು ವಿಕೆಟಿಗೆ 251

11:37 PM Jan 20, 2024 | Team Udayavani |

ಮೈಸೂರು: ಆರಂಭಿಕ ಆಟಗಾರ ಮಾಯಾಂಕ್‌ ಅಗರ್ವಾಲ್‌ ಮತ್ತು ದೇವದತ್ತ ಪಡಿಕ್ಕಲ್‌ ಅವರ ಆಕರ್ಷಕ ಶತಕದಿಂದಾಗಿ ಕರ್ನಾಟಕ ತಂಡವು ಗೋವಾ ತಂಡದೆದುರಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ.

Advertisement

ಗೋವಾ ತಂಡದ 321 ರನ್ನಿಗೆ ಉತ್ತರವಾಗಿ ಕರ್ನಾಟಕ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟಿಗೆ 251 ರನ್‌ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಲು ಕರ್ನಾಟಕ ಇನ್ನೂ 70 ರನ್‌ ಗಳಿಸಬೇಕಾಗಿದೆ.
ಈ ಮೊದಲು ಎಂಟು ವಿಕೆಟಿಗೆ 228 ರನ್ನುಗಳಿಂದ ದಿನದಾಟ ಆರಂಭಿಸಿದ್ದ ಗೋವಾ ತಂಡವು ಅರ್ಜುನ್‌ ತೆಂಡುಲ್ಕರ್‌ ಮತ್ತು ಸ್ನೇಹಲ್‌ ಕೌಥಂಕರ್‌ ಅವರ ಉತ್ತಮ ಆಟದಿಂದಾಗಿ 321 ರನ್‌ ಗಳಿಸಿ ಆಲೌಟಾಯಿತು. ಕೊನೆಯವರಾಗಿ ಔಟಾಗುವ ಮೊದಲು ಅರ್ಜುನ್‌ ತೆಂಡುಲ್ಕರ್‌ ಅವರು 53 ರನ್‌ ಗಳಿಸಿದ್ದರು. 83 ರನ್‌ ಗಳಿಸಿದ ಕೌಥಂಕರ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ವಿಜಯ ಕುಮಾರ್‌ ವೈಶಾಖ್‌, ಎಂ. ವೆಂಕಟೇಶ್‌ ಮತ್ತು ರೋಹಿತ್‌ ಕುಮಾರ್‌ ತಲಾ 3 ವಿಕೆಟ್‌ ಕಿತ್ತರು.

ದ್ವಿಶತಕ ಜತೆಯಾಟ
ನಿಶ್ಚಲ್‌ ಔಟಾದ ಬಳಿಕ ಮಾಯಾಂಕ್‌ ಅಗರ್ವಾಲ್‌ ಅವರನ್ನು ಸೇರಿಕೊಂಡ ದೇವದತ್ತ ಪಡಿಕ್ಕಲ್‌ ಗೋವಾ ದಾಳಿಯನ್ನು ಸಮರ್ಥ ವಾಗಿ ಎದುರಿಸಿ ದ್ವಿತೀಯ ವಿಕೆಟಿಗೆ 209 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಸಂಕ್ಷಿಪ್ತ ಸ್ಕೋರು: ಗೊವಾ 321 (ಸ್ನೇಹಲ್‌ ಕೌಥಂಕರ್‌ 83, ಅರ್ಜುನ್‌ ತೆಂಡುಲ್ಕರ್‌ 53, ಹೇರಂಬ್‌ ಪರಾಬ್‌ 53, ವೈಶಾಖ್‌ 76ಕ್ಕೆ 3, ವೆಂಕಟೇಶ್‌ 41ಕ್ಕೆ 3, ರೋಹಿತ್‌ 90ಕ್ಕೆ 3); ಕರ್ನಾಟಕ: ನಾಲ್ಕು ವಿಕೆಟಿಗೆ 251 (ಮಾಯಾಂಕ್‌ ಅಗರ್ವಾಲ್‌ 114, ದೇವದತ್ತ ಪಡಿಕ್ಕಲ್‌ 101, ಮೋಹಿತ್‌ ರೇಡ್ಕರ್‌ 65ಕ್ಕೆ 2).

ಉತ್ತಮ ಸ್ಥಿತಿಯಲ್ಲಿ ಮುಂಬಯಿ
ತಿರುವನಂತರಪುರ: ಕೇರಳ ತಂಡದೆದುರಿನ ರಣಜಿ ಪಂದ್ಯದಲ್ಲಿ ಮುಂಬಯಿ ತಂಡವು ಉತ್ತಮ ಸ್ಥಿತಿಯಲ್ಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ ಮುನ್ನಡೆ ಪಡೆದಿದ್ದ ಮುಂಬಯಿ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ 105 ರನ್‌ ಗಳಿಸಿದೆ. ಇದರಿಂದಾಗಿ ತಂಡ ಒಟ್ಟಾರೆ 112 ರನ್‌ ಮುನ್ನಡೆಯಲ್ಲಿದೆ.

Advertisement

ಪಂದ್ಯದ ಮೊದಲ ದಿನ ಮುಂಬಯಿ ತಂಡವು 251 ರನ್‌ ಗಳಿಸಿ ಆಲೌಟಾಗಿತ್ತು. ದ್ವಿತೀಯ ದಿನ ಆಡಿದ ಕೇರಳ ತಂಡವು ಮೋಹಿತ್‌ ಅವಸ್ತಿ ಅವರ ದಾಳಿಗೆ ಕುಸಿದು 244 ರನ್ನಿಗೆ ಆಲೌಟಾ ಯಿತು. ಸಚಿನ್‌ ಬೇಬಿ 65 ಮತ್ತು ರೋಹನ್‌ ಕುಣ್ಣುಮ್ಮಾಳ್‌ 56 ರನ್‌ ಗಳಿಸಿದರು. ಬಿಗು ದಾಳಿ ಸಂಘಟಿ ಸಿದ ಮೋಹಿತ್‌ ಅವಸ್ತಿ 57 ರನ್ನಿಗೆ 7 ವಿಕೆಟ್‌ ಕಿತ್ತು ಮುಂಬಯಿ ಮೇಲುಗೈ ಸಾಧಿಸುವಂತೆ ಮಾಡಿದರು.

ಆಬಳಿಕ ಆಟ ಮುಂದುವರಿಸಿದ ಮುಂಬಯಿಯ ಆರಂಭಿಕರಾದ ಜಯ್‌ ಬಿಸ್ತ ಮತ್ತು ಭೂಪೆನ್‌ ಲಾಲ್ವಾನಿ ಅವರು ಮುರಿಯದ ಮೊದಲ ವಿಕೆಟಿಗೆ ಈಗಾಗಾಲೇ 105 ರನ್‌ ಪೇರಿಸಿದ್ದಾರೆ. ಬಿಸ್ತ 59 ಮತ್ತು ಲಾಲ್ವಾನಿ 41 ರನ್ನುಗಳಿಂದ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next