ಕಾನ್ಪುರ: ಮನೀಶ್ ಪಾಂಡೆ (238 ರನ್) ದ್ವಿಶತಕ ಹಾಗೂ ಡಿ.ನಿಶ್ಚಲ್ (195 ರನ್) ಶತಕ, ಪ್ರಚಂಡ ಬ್ಯಾಟಿಂಗ್ ಪ್ರದರ್ಶನಕ್ಕೆ ಸಿಲುಕಿ ಉತ್ತರ ಪ್ರದೇಶ ತಂಡ ಅಕ್ಷರಶಃ ಬೆವರಿ ಬೆಂಡಾಗಿದೆ.
ಶುಕ್ರವಾರ 2ನೇ ದಿನದ ಅಂತ್ಯಕ್ಕೆ ಕರ್ನಾಟಕ ಮೊದಲ ಇನಿಂಗ್ಸ್ 7 ವಿಕೆಟ್‌ಗೆ 642 ರನ್ ಪೇರಿಸಿದೆ. ಸದ್ಯ ರಾಜ್ಯ ತಂಡ ಸುಭದ್ರ ಸ್ಥಿತಿಯಲ್ಲಿದ್ದು ಶನಿವಾರ ಉತ್ತರ ಪ್ರದೇಶ ತಂಡಕ್ಕೆ ಬ್ಯಾಟಿಂಗ್ ಬಿಟ್ಟು ಕೊಡುವ ನಿರೀಕ್ಷೆ ಇದೆ. ಸಿ.ಎಂ.ಗೌತಮ್ (ಅಜೇಯ 4 ರನ್) ಹಾಗೂ ಆರ್.ವಿನಯ್ ಕುಮಾರ್ (ಅಜೇಯ 1 ರನ್)ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮನೀಶ್ ದ್ವಿಶತಕ. ನಿಶ್ಚಲ್‌ಗೆ ಚೊಚ್ಚಲ ಶತಕ: ಮೊದಲ ದಿನದ 1ನೇ ಇನಿಂಗ್ಸ್‌ನ ಬ್ಯಾಟಿಂಗ್‌ನಲ್ಲಿ ಕರ್ನಾಟಕ ದಿನದ ಅಂತ್ಯಕ್ಕೆ 3 ವಿಕೆಟ್‌ಗೆ 327 ರನ್‌ಗಳಿಸಿತ್ತು. ಡಿ.ನಿಶ್ಚಲ್ ಅಜೇಯ 90 ರನ್ ಹಾಗೂ ಮನೀಶ್ ಪಾಂಡೆ ಅಜೇಯ 63 ರನ್‌ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಉಳಿಸಿಕೊಂಡಿದ್ದರು.
2ನೇ ದಿನ ಬ್ಯಾಟಿಂಗ್ ಮುಂದುವರಿಸಿದ ಈ ಜೋಡಿ ನಿರಂತರವಾಗಿ ಉತ್ತರ ಪ್ರದೇಶ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿತು. ಒಟ್ಟಾರೆ ಇವರಿಬ್ಬರು ಸೇರಿಕೊಂಡು ನಾಲ್ಕನೇ ವಿಕೆಟ್‌ಗೆ 354 ರನ್ ಜತೆಯಾಟ ನಿರ್ವಹಿಸಿದರು. ತಂಡದ ಒಟ್ಟಾರೆ ಮೊತ್ತ 590 ರನ್ ಆಗಿದ್ದಾಗ ನಿಶ್ಚಲ್ ಕುಮಾರ್ ಔಟಾದರು. ಅವರು ಕೇವಲ 5 ರನ್‌ಗಳಿಂದ ದ್ವಿಶತಕ ವಂಚಿತರಾದರು. ಇದಕ್ಕೂ ಮೊದಲು ನಿಶ್ಚಲ್ ಕುಮಾರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೊದಲ ಶತಕದ ಸಂಭ್ರಮವನ್ನು ಆಚರಿಸಿದ್ದರು. ಮನೀಶ್ ಪಾಂಡೆ ವೃತ್ತಿ ಜೀವನದ 2ನೇ ದ್ವಿಶತಕ ಸಿಡಿಸಿದರು. ಒಟ್ಟಾರೆ ಅವರ 16ನೇ ಶತಕ ಎನ್ನುವುದು ವಿಶೇಷ. ಅಷ್ಟೇ ಅಲ್ಲ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟಾರೆ 82 ಪಂದ್ಯಗಳಿಂದ 49.17 ರನ್ ಸರಾಸರಿಯಲ್ಲಿ 5500 ರನ್ ಸಿಡಿಸಿದ ಸಾಧನೆಯನ್ನು ಮನೀಶ್ ಪಾಂಡೆ ಮಾಡಿದರು.
ಮೋಡಿ ಮಾಡಲಿಲ್ಲ ಬಿನ್ನಿ: ಮನೀಶ್ ಪಾಂಡೆ ಹಾಗೂ ನಿಶ್ಚಲ್ ಔಟಾಗಿದ್ದ ವೇಳೆ ರಾಜ್ಯ ತಂಡದ ಒಟ್ಟಾರೆ ಮೊತ್ತ 5 ವಿಕೆಟ್‌ಗೆ 633 ರನ್ ಆಗಿತ್ತು. ಆದರೆ ಆನಂತರ ಬಂದ ಸ್ಟುವರ್ಟ್ ಬಿನ್ನಿ (25 ರನ್) ಮೋಡಿ ಮಾಡಲಿಲ್ಲ. ಅವರು ಇಮಿ¤ಯಾಜ್ ಎಸೆತದಲ್ಲಿ ಔಟಾಗಿ ಹೊರ ನಡೆದರು. ಬಳಿಕ ಕ್ರೀಸ್‌ಗೆ ಬಂದ ಶ್ರೇಯಸ್ ಗೋಪಾಲ್ (1 ರನ್) ಅವರ ವಿಕೆಟ್ ಕೂಡ ಕಳೆದುಕೊಂಡಿತು. ಅಲ್ಲಿಗೆ ಕರ್ನಾಟಕ ಮೊತ್ತ 7 ವಿಕೆಟ್‌ಗೆ 636 ರನ್ ಆಗಿತ್ತು.
ವಿಕೆಟ್ ಕೀಳಲು ಯುಪಿ ಹರಸಾಹಸ: ಕರ್ನಾಟಕ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲು ಉತ್ತರ ಪ್ರದೇಶ ಬೌಲರ್‌ಗಳಿಗೆ ಸಾಧ್ಯವೇ ಆಗಲಿಲ್ಲ. ಉತ್ತರ ಪ್ರದೇಶ ಪರ ಇಮಿಯಾಜ್ ಅಹ್ಮದ್ (101ಕ್ಕೆ3) ಹಾಗೂ ಡಿ.ಪಿ.ಸಿಂಗ್ (108ಕ್ಕೆ3) ವಿಕೆಟ್ ಕಿತ್ತು ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸಿದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 1ನೇ ಇನಿಂಗ್ಸ್ 642/7 (ಮನೀಶ್ ಪಾಂಡೆ 238 , ಡಿ.ನಿಶ್ಚಲ್ 195, ಇಮಿಯಾಜ್ ಅಹ್ಮದ್ 101ಕ್ಕೆ3)