Advertisement

Ranji;ಆತಿಥೇಯ ಗುಜರಾತ್‌ ಮೇಲೆ ಸವಾರಿ: ಗೆಲುವಿನತ್ತ ಕರ್ನಾಟಕ

11:01 PM Jan 14, 2024 | Team Udayavani |

ಅಹ್ಮದಾಬಾದ್‌: ಆತಿಥೇಯ ಗುಜರಾತ್‌ ಮೇಲೆ ಸವಾರಿ ಮುಂದುವರಿಸಿರುವ ಕರ್ನಾಟಕ ಗೆಲುವಿನತ್ತ ದಾಪುಗಾಲಿಕ್ಕಿದೆ. ರಣಜಿ ಟ್ರೋಫಿ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 171 ರನ್‌ ಗಳಿಸಿರುವ ಗುಜರಾತ್‌ ಕೇವಲ 61 ರನ್‌ ಮುನ್ನಡೆಯಲ್ಲಿದೆ. ಇದರಿಂದ ಮಾಯಾಂಕ್‌ ಪಡೆಯ ಗೆಲುವು ಖಾತ್ರಿ ಎನ್ನಲಡ್ಡಿಯಿಲ್ಲ.
ಗುಜರಾತ್‌ ತಂಡದ 264 ರನ್ನುಗಳ ಮೊತ್ತಕ್ಕೆ ಜವಾಬು ನೀಡಿದ ಕರ್ನಾಟಕ, 3ನೇ ದಿನದಾಟದಲ್ಲಿ 374ಕ್ಕೆ ಆಲೌಟ್‌ ಆಯಿತು. ಲಭಿಸಿದ ಮುನ್ನಡೆ 110 ರನ್‌. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕರ್ನಾಟಕದ ಬೌಲರ್ ಗುಜರಾತ್‌ಗೆ ಆಘಾತವಿಕ್ಕಿದ್ದಾರೆ.

Advertisement

ಕರ್ನಾಟಕ 5ಕ್ಕೆ 328 ರನ್‌ ಮಾಡಿದಲ್ಲಿಂದ ರವಿವಾರದ ಆಟ ಮುಂದುವರಿಸಿತ್ತು. 348ರ ಮೊತ್ತದಲ್ಲಿ ಸುಜಯ್‌ ಸಾತೇರಿ ಔಟಾದೊಡನೆ ಕರ್ನಾಟಕದ ಕುಸಿತ ಮೊದಲ್ಗೊಂಡಿತು. 26 ರನ್‌ ಅಂತರದಲ್ಲಿ ಕೊನೆಯ 4 ವಿಕೆಟ್‌ ಉರುಳಿತು. ಮೊದಲ ರಣಜಿ ಪಂದ್ಯ ಆಡುತ್ತಿದ್ದ ಕೀಪರ್‌ ಸಾತೇರಿ 31 ರನ್‌ ಮಾಡಿದರು. ಗಾಯಾಳು ಪ್ರಸಿದ್ಧ್ ಕೃಷ್ಣ ಆಡಲಿಳಿಯಲಿಲ್ಲ. ಅವರು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ದಾಳಿಗೂ ಇಳಿಯದಿದ್ದುದು ಕರ್ನಾ ಟಕಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ದ್ವಿತೀಯ ಸರದಿಯಲ್ಲೂ ವಾಸುಕಿ ಕೌಶಿಕ್‌ ಗುಜರಾತ್‌ಗೆ ಘಾತಕವಾಗಿ ಪರಿಣಮಿಸಿದರು. 14 ಓವರ್‌ಗಳಲ್ಲಿ 10 ಮೇಡನ್‌ ಮಾಡಿರುವ ಕೌಶಿಕ್‌, ಕೇವಲ 11 ರನ್‌ ನೀಡಿ 3 ವಿಕೆಟ್‌ ಕೆಡವಿದ್ದಾರೆ. 2 ವಿಕಟ್‌ ರೋಹಿತ್‌ ಕುಮಾರ್‌ ಪಾಲಾಗಿವೆ.

ಗುಜರಾತ್‌ ಪರ ಬ್ಯಾಟಿಂಗ್‌ ಹೋರಾಟ ನಡೆಸಿದವರೆಂದರೆ ಮನನ್‌ ಹಿಂಗ್ರಾಜಿಯಾ. ಅವರು 135 ಎಸೆತ ಎದುರಿಸಿ 56 ರನ್‌ ಹೊಡೆದರು. 29 ರನ್‌ ಮಾಡಿರುವ ಉಮಂಗ್‌ ಕುಮಾರ್‌ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಗುಜರಾತ್‌-264 ಮತ್ತು 7 ವಿಕೆಟಿಗೆ 171 (ಹಿಂಗ್ರಾಜಿಯಾ 56, ಉಮಂಗ್‌ ಬ್ಯಾಟಿಂಗ್‌ 29, ಸುಪ್ರೀತ್‌ಸಿಂಗ್‌ 27, ಕ್ಷಿತಿಜ್‌ 26, ಕೌಶಿಕ್‌ 11ಕ್ಕೆ 3, ರೋಹಿತ್‌ 42ಕ್ಕೆ 2). ಕರ್ನಾಟಕ-374.

Advertisement

ಆಂಧ್ರಕ್ಕೆ ಫಾಲೋಆನ್‌
ಮುಂಬಯಿ: 211 ರನ್ನುಗಳ ಹಿನ್ನಡೆಗೆ ಸಿಲುಕಿದ ಆಂಧ್ರಪ್ರದೇಶದ ಮೇಲೆ ಮುಂಬಯಿ ಫಾಲೋಆನ್‌ ಹೇರಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಆಂಧ್ರ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದ್ದು, 166ಕ್ಕೆ 5 ವಿಕೆಟ್‌ ಕಳೆದುಕೊಂಡಿದೆ. ಇನ್ನಿಂಗ್ಸ್‌ ಸೋಲಿನಿಂದ ಪಾರಾಗಲು ಇನ್ನೂ 45 ರನ್‌ ಮಾಡಬೇಕಿದೆ.

ಮುಂಬಯಿ 395 ರನ್‌ ಪೇರಿಸಿತ್ತು. ಜವಾಬಿತ್ತ ಆಂಧ್ರ 184ಕ್ಕೆ ಆಲೌಟ್‌ ಆಯಿತು. ಶಮ್ಸ್‌ ಮುಲಾನಿ 6 ವಿಕೆಟ್‌ ಉಡಾಯಿಸಿ ಆಂಧ್ರವನ್ನು ಕಾಡಿದರು. ದ್ವಿತೀಯ ಇನ್ನಿಂಗ್ಸ್‌ನ 3 ವಿಕೆಟ್‌ಗಳೂ ಮುಲಾನಿ ಪಾಲಾಗಿವೆ.
ಶೇಖ್‌ ರಶೀದ್‌ 52 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಹನುಮ ವಿಹಾರಿ 46 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next