ಸೂರತ್: ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಸೂರತ್ ಪಿಚ್ ಬೌಲರ್‌ಗಳಿಗೆ ನೆರವು ನೀಡುತ್ತಿರುವ ಕಾರಣ ಚೇಸಿಂಗ್ ವೇಳೆ ಕಠಿನ ಪರಿಸ್ಥಿತಿ ಎದುರಿಸಬೇಕಾದ ಭೀತಿಯಲ್ಲಿದೆ.
ರೈಲ್ವೇಸ್‌ನ 155 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಜವಾಬು ನೀಡಿದ ಕರ್ನಾಟಕ 174ಕ್ಕೆ ಆಲೌಟ್ ಆಗಿ 19 ರನ್ ಲೀಡ್ ಪಡೆಯಿತು. ರೈಲ್ವೇಸ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 8 ವಿಕೆಟಿಗೆ 208 ರನ್ ಗಳಿಸಿದ್ದು, 190 ರನ್ ಮುನ್ನಡೆಯಲ್ಲಿದೆ.
ಎಸ್. ಶರತ್ (24), ಕಿಶನ್ ಬೆಡಾರೆ (17), ವಿಜಯ್‌ಕುಮಾರ್ ವೈಶಾಖ್ (24) ಸೇರಿಕೊಂಡು ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ತಂದಿತ್ತರು. ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ 6 ವಿಕೆಟಿಗೆ 90 ರನ್ ಗಳಿಸಿ ಪರದಾಡುತ್ತಿತ್ತು.
ದ್ವಿತೀಯ ಸರದಿಯಲ್ಲಿ ಆರಂಭಿಕ ಕುಸಿತಕ್ಕೆ ಸಿಲುಕಿದರೂ ಚೇತರಿಸಿಕೊಂಡ ರೈಲ್ವೇಸ್ ಇನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ಮೊಹಮ್ಮದ್ ಸೈಫ್ 51, ಕೀಪರ್ ಸೂರಜ್ ಅಹುಜಾ 48, ನಾಯಕ ಪ್ರಥಮ್ ಸಿಂಗ್ 33 ಮತ್ತು ಸಾಹಬ್ ಯುವ್ರಾಜ್ 28 ರನ್ ಮಾಡಿ ತಂಡಕ್ಕೆ ಆಧಾರವಾದರು. ಇವರಲ್ಲಿ ಸೈಫ್ ಗಾಯಾಳಾಗಿ ನಿವೃತ್ತರಾಗಿದ್ದಾರೆ. ಮೊದಲ ಸರದಿಯಲ್ಲೂ ಮಿಂಚಿದ ಸೈಫ್ 45 ರನ್ ಮಾಡಿದ್ದರು.
ಕರ್ನಾಟಕದ ಯಶಸ್ವಿ ಬೌಲರ್‌ಗಳೆಂದರೆ ವಿಜಯ್‌ಕುಮಾರ್ ವೈಶಾಖ್ (45ಕ್ಕೆ 3), ವಿದ್ವತ್ (35ಕ್ಕೆ 2).
ಸಂಕ್ಷಿಪ್ತ ಸ್ಕೋರ್: ರೈಲ್ವೇಸ್-155 ಮತ್ತು 8 ವಿಕೆಟಿಗೆ 209. ಕರ್ನಾಟಕ-174.