ಅಹ್ಮದಾಬಾದ್: ದೇಶೀಯ ಕ್ರಿಕೆಟ್ ಕೂಟವಾದ ರಣಜಿ ಟ್ರೋಫಿಯ ದ್ವಿತೀಯ ಸುತ್ತಿನ ಪಂದ್ಯಗಳು ವಿವಿಧ ತಾಣಗಳಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಎಲೈಟ್ “ಸಿ’ ಬಣದಲ್ಲಿ ಮೊದಲ ಸುತ್ತಿನಲ್ಲಿ ಜಯಭೇರಿ ಬಾರಿಸಿರುವ ಕರ್ನಾಟಕ ಮತ್ತು ಗುಜರಾತ್ ತಂಡಗಳು ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೋರಾಡಲಿವೆ.
“ಸಿ’ ಬಣದಲ್ಲಿ ಕರ್ನಾಟಕ, ಗುಜರಾತ್ ಮತ್ತು ತ್ರಿಪುರ ಮೊದಲ ಸುತ್ತಿನ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ತ್ರಿಪುರ ಬಣದ ಅಗ್ರಸ್ಥಾನದಲ್ಲಿದೆ. “ಡಿ’ ಬಣದಲ್ಲಿ ಬರೋಡ ಮತ್ತು ಪುದುಚೇರಿ ತಲಾ ಆರಂಕದೊಂದಿಗೆ ಮೊದಲೆರಡು ಸ್ಥಾನದಲ್ಲಿದೆ.
ಎಲೈಟ್ “ಎ’ ಬಣದಲ್ಲಿ ಮಹಾರಾಷ್ಟ್ರ ಏಳಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ವಿದರ್ಭ ದ್ವಿತೀಯ ಸ್ಥಾನದಲ್ಲಿದೆ. ಮುಂಬಯಿ ಮತ್ತು ಛತ್ತೀಸ್‌ಗಢ ತಲಾ ಏಳಂಕದೊಂದಿಗೆ “ಬಿ’ ಬಣದಲ್ಲಿ ಮೊದಲೆರಡು ಸ್ಥಾನದಲ್ಲಿದೆ. ಮೊದಲ ಸುತ್ತಿನಲ್ಲಿ ಆ ಎರಡು ತಂಡಗಳು ತಮ್ಮ ಎದುರಾಳಿ ವಿರುದ್ಧ ಜಯ ಸಾಧಿಸಿತ್ತು.
ಮುಂಬಯಿಗೆ ಮರಳಿದ ಅಯ್ಯರ್
“ಬಿ’ ಬಣದಲ್ಲಿರುವ ಮುಂಬಯಿ ತಂಡವು ದ್ವಿತೀಯ ಪಂದ್ಯದಲ್ಲಿ ಆಂಧ್ರ ತಂಡವನ್ನು ಎದುರಿಸಲಿದೆ. ಈ ಪಂದ್ಯ ಮುಂಬಯಿಯ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತ ತಂಡದ ಪರ ಆಡುತ್ತಿದ್ದ ಶ್ರೇಯಸ್ ಅಯ್ಯರ್ ಮುಂಬಯಿ ತಂಡಕ್ಕೆ ಮರಳಿದ್ದಾರೆ. ಇದರಿಂದ ಮುಂಬಯಿಯ ಬ್ಯಾಟಿಂಗ್ ಇನ್ನಷ್ಟು ಬಲಗೊಂಡಿದೆ.
ಅಘಾ^ನಿಸ್ಥಾನ ವಿರುದ್ಧದ ಸರಣಿಗಾಗಿ ಭಾರತೀಯ ತಂಡವನ್ನು ಸೇರಿಕೊಂಡಿದ್ದರಿಂದ ಮುಂಬಯಿ ತಂಡವು ಆಲ್‌ರೌಂಡರ್ ಶಿವಂ ದುಬೆ ಅವರ ಅನುಪಸ್ಥಿತಿಯಲ್ಲಿ ಆಡಬೇಕಾಗಿದೆ. 41 ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಮುಂಬಯಿ ತಂಡವು ಮೊದಲ ರಣಜಿ ಪಂದ್ಯದಲ್ಲಿ ಬಿಹಾರ ವಿರುದ್ಧ ಸುಲಭವಾಗಿ ಜಯಿಸಿತ್ತು.