Advertisement

ಉದ್ಯಮ ರಂಗದಲ್ಲಿ  ಸಂಚಲನ: ರಣಜಿ ಕ್ರಿಕೆಟಿಗೆ ಬಿರ್ಲಾ !

08:15 AM Nov 15, 2017 | |

ಇಂದೋರ್‌: ಭಾರತದ ಖ್ಯಾತ ಉದ್ಯಮ ಸಂಸ್ಥೆ “ಆದಿತ್ಯ ಬಿರ್ಲಾ ಗ್ರೂಪ್‌’ನ ಕುಡಿಯೊಂದು ರಣಜಿ ಕ್ರಿಕೆಟ್‌ನಲ್ಲಿ ಅವಕಾಶ ಪಡೆಯುವ ಮೂಲಕ ಸುದ್ದಿಯಲ್ಲಿದೆ. ಈ ಅದೃಷ್ಟಶಾಲಿ ಕ್ರಿಕೆಟಿಗ 21ರ ಹರೆಯದ ಆರ್ಯಮನ್‌ ಬಿರ್ಲಾ, “ಆದಿತ್ಯ ಬಿರ್ಲಾ ಗ್ರೂಪ್‌’ನ ಅಧ್ಯಕ್ಷ ಕುಮಾರ ಮಂಗಲಂ ಅವರ ಪುತ್ರ!

Advertisement

ಎಡಗೈ ಬ್ಯಾಟಿಂಗ್‌ ಆಲ್‌ರೌಂಡರ್‌ ಆಗಿರುವ ಆರ್ಯಮನ್‌ ಬಿರ್ಲಾ ಮಂಗಳ ವಾರ ಮಧ್ಯಪ್ರದೇಶ ರಣಜಿ ತಂಡಕ್ಕೆ ಆಯ್ಕೆ ಯಾದರು. ಸಾಮಾನ್ಯವಾಗಿ ಶ್ರೀಮಂತ ಉದ್ಯಮಿಗಳ ಕುಟುಂಬದವರು ಕ್ರೀಡಾಕ್ಷೇತ್ರ ದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಆರ್ಯಮನ್‌ ಅಪವಾದವಾದರು. ಹಾಗೆಯೇ ಬಿರ್ಲಾ ಗ್ರೂಪ್‌ ಈವರೆಗೆ ಐಪಿಎಲ್‌ನಿಂದಲೂ ಬಹಳ ದೂರ ಉಳಿದಿದ್ದು, ಯಾವುದೇ ಫ್ರಾಂಚೈಸಿಯನ್ನೂ ಖರೀದಿಸಿಲ್ಲ. ಹೀಗಾಗಿ ಆರ್ಯಮನ್‌ ಅವರ ರಣಜಿ ಪ್ರವೇಶ ಸಹಜವಾಗಿಯೇ ದೇಶದ ಕ್ರಿಕೆಟ್‌ ಹಾಗೂ ಉದ್ಯಮ ರಂಗಗಳೆರಡರಲ್ಲೂ ಭಾರೀ ಸಂಚಲನ ಮೂಡಿಸಿದೆ!

ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಅಂಡರ್‌-23 ಕ್ರಿಕೆಟ್‌ ಪಂದ್ಯಾ ವಳಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ಆರ್ಯಮನ್‌ ರಣಜಿಗೆ ಆಯ್ಕೆಯಾದರು. ಇಲ್ಲಿ 2 ಶತಕ ಹಾಗೂ ಒಂದು ದ್ವಿಶತಕ ಸಹಿತ 602 ರನ್‌ ಬಾರಿಸುವ ಜತೆಗೆ 10 ವಿಕೆಟ್‌ಗಳನ್ನು ಉರುಳಿಸಿದ್ದೂ ಆರ್ಯಮನ್‌ ಹೆಗ್ಗಳಿಕೆ. ಇವರಿಂದ ಛತ್ತೀಸ್‌ಗಢ ವಿರುದ್ಧ ದ್ವಿಶತಕ, ಒಡಿಶಾ ಮತ್ತು ಉತ್ತರಪ್ರದೇಶ ವಿರುದ್ಧ ಶತಕ ದಾಖಲಾಯಿತು. ಇನ್ನು ನಮನ್‌ ಓಜಾ, ಜಲಜ್‌ ಸಕ್ಸೇನಾ, ಯೋಗೇಶ್‌ ರಾವತ್‌, ಮೊಹಿ°ಶ್‌ ಮಿಶ್ರಾ, ಈಶ್ವರ್‌ ಪಾಂಡೆ ಮೊದಲಾದ ಖ್ಯಾತ ಆಟಗಾರರ ಜತೆ ಆಡುವ ಅವಕಾಶ ಆರ್ಯಮನ್‌ ಅವರದ್ದಾಗಲಿದೆ.

ಮುಂಬಯಿಯಲ್ಲಿ ಅವಕಾಶವಿಲ್ಲ !
ಮುಂಬಯಿಯಲ್ಲಿ ಕಾಮರ್ಸ್‌ ಪದವಿ ಪಡೆದಿರುವ ಆರ್ಯಮನ್‌ ಬಿರ್ಲಾ ತವರಿನಲ್ಲಿ ಕ್ರಿಕೆಟ್‌ ಅವಕಾಶ ಸಿಗದ ಕಾರಣ ಮಧ್ಯಪ್ರದೇಶಕ್ಕೆ ಹೋಗಬೇಕಾಯಿತು ಎಂದು ಅವರ ತಾಯಿ ನೀರಜಾ ಮಿಶ್ರಾ ಹೇಳಿದ್ದಾರೆ.  ನ. 17ರಿಂದ ಮಧ್ಯಪ್ರದೇಶ ತಂಡ ಇಂದೋರ್‌ನಲ್ಲಿ ತಮಿಳು ನಾಡು ವಿರುದ್ಧ ರಣಜಿ ಪಂದ್ಯವಾಡಲಿದ್ದು, ಆರ್ಯಮನ್‌ ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆ ಮಾಡುವುದು ಬಹುತೇಕ ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next