Advertisement

ರಣಜಿ: ಕರ್ನಾಟಕವನ್ನು ಕಾಡಿದ ಪೂಜಾರ,ಜಾಕ್ಸನ್‌

11:28 PM Jan 11, 2020 | Team Udayavani |

ರಾಜ್‌ಕೋಟ್‌: ಟೆಸ್ಟ್‌ ಸ್ಪೆಷಲಿಸ್ಟ್‌ ಖ್ಯಾತಿಯ ಚೇತೇಶ್ವರ್‌ ಪೂಜಾರ ಅವರ ಅಜೇಯ ಶತಕ ಹಾಗೂ ಶೆಲ್ಡನ್‌ ಜಾಕ್ಸನ್‌ ಅವರ ತಾಳ್ಮೆಯ ಬ್ಯಾಟಿಂಗ್‌ ನೆರವಿನಿಂದ ಕರ್ನಾಟಕ ವಿರುದ್ಧದ ರಣಜಿ ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯ ಸೌರಾಷ್ಟ್ರ ಕೇವಲ 2 ವಿಕೆಟಿಗೆ 296 ರನ್‌ ಗಳಿಸಿದೆ. ಪೂಜಾರ 162 ಮತ್ತು ಜಾಕ್ಸನ್‌ 99 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರ ಬಾರಿಸಿದ 50ನೇ ಶತಕ ಎಂಬುದು ವಿಶೇಷ.

Advertisement

ಶನಿವಾರ ಇಲ್ಲಿನ “ಮಾಧವರಾವ್‌ ಸಿಂಧಿಯಾ ಕ್ರೀಡಾಂಗಣ’ದಲ್ಲಿ ಆರಂಭಗೊಂಡ 5ನೇ ಸುತ್ತಿನ ರಣಜಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಸೌರಾಷ್ಟ್ರ 33 ರನ್ನಿಗೆ 2 ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಆರಂಭಿಕರಾದ ಹಾರ್ವಿಕ್‌ ದೇಸಾಯಿ (13) ಮತ್ತು ಸ್ನೆಲ್‌ ಪಟೇಲ್‌ (16) ಜಗದೀಶ್‌ ಸುಚಿತ್‌ ಮೋಡಿಗೆ ಸಿಲುಕಿ ಬೇಗನೇ ಪೆವಿಲಿಯನ್‌ ಸೇರಿದರು.

ಆದರೆ ಕರ್ನಾಟಕದ ಬೌಲಿಂಗ್‌ ಆರ್ಭಟ ಇಲ್ಲಿಗೇ ಕೊನೆಗೊಂಡಿತು. 3ನೇ ವಿಕೆಟಿಗೆ ಜತೆಗೂಡಿದ ಚೇತೇಶ್ವರ್‌ ಪೂಜಾರ ಹಾಗೂ ಶೆಲ್ಡನ್‌ ಜಾಕ್ಸನ್‌ ಕ್ರೀಸಿಗೆ ಅಂಟಿಕೊಂಡು ನಿಂತರು. ಮುರಿಯದ 3ನೇ ವಿಕೆಟಿಗೆ 263 ರನ್‌ ಜತೆಯಾಟ ನಿರ್ವಹಿಸಿ ರಾಜ್ಯದ ಬೌಲರ್‌ಗಳನ್ನು ಕಾಡಿದ್ದಾರೆ.

16 ರನ್ನಿಗಾಗಿ 53 ಎಸೆತ ಎದುರಿಸಿದ ಸ್ನೆಲ್‌ ಪಟೇಲ್‌ (2 ಬೌಂಡರಿ) ಸುಚಿತ್‌ಗೆ ರಿಟರ್ನ್ ಕ್ಯಾಚ್‌ ನೀಡಿದರು. ಆಗ ಸೌರಾಷ್ಟ್ರ 28 ರನ್‌ ಮಾಡಿತ್ತು. ಮತ್ತೆ 5 ರನ್‌ ಆಗುವಷ್ಟರಲ್ಲಿ ಹಾರ್ವಿಕ್‌ ದೇಸಾಯಿ ಸಿದ್ಧಾರ್ಥ್ಗೆ ಕ್ಯಾಚ್‌ ನೀಡಿ ವಾಪಸಾದರು. 59 ಎಸೆತ ಎದುರಿಸಿದ ದೇಸಾಯಿ 2 ಬೌಂಡರಿ ಹೊಡೆದರು.

ಪೂಜಾರ-ಜಾಕ್ಸನ್‌
263 ರನ್‌ ಜತೆಯಾಟ
ಆರಂಭಿಕ ಆಘಾತಕ್ಕೆ ಸಿಲುಕಿದ ತಂಡಕ್ಕೆ ಪೂಜಾರ-ಜಾಕ್ಸನ್‌ ನಿಧಾನವಾಗಿ ಶಕ್ತಿ ತುಂಬತೊಡಗಿದರು. ಮೊದಲೇ ಸ್ಟಾರ್‌ ಆಟಗಾರರ ಸೇವೆಯಿಂದ ವಂಚಿತವಾಗಿದ್ದ ಕರ್ನಾಟಕ, ಅನುಭವಿ ಅಭಿಮನ್ಯು ಮಿಥುನ್‌ ಅವರಿಗೆ ವಿಶ್ರಾಂತಿ ನೀಡುವ ಮೂಲಕ ಇವರಿಬ್ಬರ ಹಾದಿಯನ್ನು ಸುಗಮಗೊಳಿಸಿತು. ಕರ್ನಾಟಕದ ಬೌಲರ್‌ಗಳು ದಿನವಿಡೀ ಬೆವರಿಳಿಸಿಕೊಂಡರು.

Advertisement

ರಕ್ಷಣಾತ್ಮಕ ಆಟದ ಜತೆಗೇ ಆಗಾಗ ಅಬ್ಬರಿಸಿದ ಪೂಜಾರ-ಜಾಕ್ಸನ್‌ ಜೋಡಿ ತಂಡದ ಮೊತ್ತವನ್ನು ಮುನ್ನೂರರ ಸಮೀಪಕ್ಕೆ ತಂದು ನಿಲ್ಲಿಸಿದೆ. ಟೆಸ್ಟ್‌ ಅನುಭವಿ ಪೂಜಾರ ಒಟ್ಟು 238 ಎಸೆತವನ್ನು ಎದುರಿಸಿದ್ದಾರೆ. ಈ ಮ್ಯಾರಥಾನ್‌ ಬ್ಯಾಟಿಂಗ್‌ನಲ್ಲಿ 17 ಬೌಂಡರಿ, 1 ಸಿಕ್ಸರ್‌ ಒಳಗೊಂಡಿದೆ. ರವಿವಾರ ದ್ವಿಶತಕ ಬಾರಿಸುವ ಎಲ್ಲ ಸಾಧ್ಯತೆ ಇದೆ.

ಪೂಜಾರ ಅವರಿಗೆ ಶೆಲ್ಡನ್‌ ಜಾಕ್ಸನ್‌ ಅಮೋಘ ಬೆಂಬಲ ನೀಡಿದರು. 191 ಎಸೆತ ಎದುರಿಸಿರುವ ಜಾಕ್ಸನ್‌ 4 ಬೌಂಡರಿ, 2 ಸಿಕ್ಸರ್‌ ಬಾರಿಸಿದ್ದಾರೆ. ದ್ವಿತೀಯ ದಿನ ಬಹಳ ಬೇಗ ಶತಕ ಸಂಭ್ರಮ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಕರುಣ್‌ ನಾಯರ್‌ ಗೈರಲ್ಲಿ ಶ್ರೇಯಸ್‌ ಗೋಪಾಲ್‌ ಮೊದಲ ಸಲ ಕರ್ನಾಟಕ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದರು. ಮೊದಲ ದಿನವಂತೂ ಅವರ ನಾಯಕತ್ವ ವಿಫ‌ಲವಾಗಿದೆ. ಶ್ರೇಯಸ್‌ ಸೇರಿದಂತೆ ಒಟ್ಟು 5 ಬೌಲರ್‌ಗಳು ವಿಕೆಟ್‌ ಉರುಳಿಸುವಲ್ಲಿ ವಿಫ‌ಲರಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಸೌರಾಷ್ಟ್ರ-2 ವಿಕೆಟಿಗೆ 296 (ಪೂಜಾರ ಬ್ಯಾಟಿಂಗ್‌ 162, ಜಾಕ್ಸನ್‌ ಬ್ಯಾಟಿಂಗ್‌ 99, ಹಾರ್ವಿಕ್‌ ದೇಸಾಯಿ 13, ಸ್ನೆಲ್‌ ಪಟೇಲ್‌ 16, ಜೆ. ಸುಚಿತ್‌ 85ಕ್ಕೆ 2).

ಮುಂಬಯಿ ನೆರವಿಗೆ ಮುಲಾನಿ, ತಾರೆ
ಚೆನ್ನೆ: ಆತಿಥೇಯ ತಮಿಳುನಾಡು ವಿರುದ್ಧ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದ ಮುಂಬಯಿಗೆ ಕೆಳ ಕ್ರಮಾಂಕದ ಆಟಗಾರರಾದ ಶಮ್ಸ್‌ ಮುಲಾನಿ ಮತ್ತು ಆದಿತ್ಯ ತಾರೆ ರಕ್ಷಣೆ ಒದಗಿಸಿದ್ದಾರೆ. ಎಲೈಟ್‌ ಎ-ಬಿ ವಿಭಾಗದ ರಣಜಿ ಪಂದ್ಯದ ಮೊದಲ ದಿನ ಮುಂಬಯಿ 6 ವಿಕೆಟಿಗೆ 284 ರನ್‌ ಗಳಿಸುವಲ್ಲಿ ಯಶಸ್ವಿಯಾಗಿದೆ. ಮುಲಾನಿ 87 ರನ್ನುಗಳ ಕೊಡುಗೆ ಸಲ್ಲಿಸಿದರೆ, ತಾರೆ 69 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಆರ್‌. ಅಶ್ವಿ‌ನ್‌ (58ಕ್ಕೆ 3) ಮತ್ತು ಆರ್‌. ಸಾಯಿ ಕಿಶೋರ್‌ (77ಕ್ಕೆ 3) ದಾಳಿಗೆ ತತ್ತರಿಸಿದ ಮುಂಬಯಿ 129 ರನ್‌ ಮಾಡುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜತೆಗೂಡಿದ ಮುಲಾನಿ-ತಾರೆ 6ನೇ ವಿಕೆಟಿಗೆ 155 ರನ್‌ ಪೇರಿಸಿ ತಮಿಳುನಾಡು ಬೌಲರ್‌ಗಳಿಗೆ ಬೆವರಿಳಿಸಿದರು. ದಿನದ ಕೊನೆಯ ಓವರಿನಲ್ಲಿ ಮುಲಾನಿ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದ ತಮಿಳುನಾಡು ನಿಟ್ಟುಸಿರೆಳೆದಿದೆ.

ಮುಂಬಯಿ ಪರ ಜಾಯ್‌ ಬಿಷ್ಟಾ 41, ಭೂಪೇನ್‌ ಲಾಲ್ವಾನಿ ಮತ್ತು ಹಾರ್ದಿಕ್‌ ತಮೋರೆ ತಲಾ 21, ಸಫ‌ìರಾಜ್‌ ಖಾನ್‌ 36 ರನ್‌ ಮಾಡಿದರು. ಸಿದ್ದೇಶ್‌ ಲಾಡ್‌ ಖಾತೆ ತೆರೆಯಲು ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next