Advertisement

Ranji; ಅಗರ್ವಾಲ್‌ ಶತಕ: ಕರ್ನಾಟಕ ಪ್ರಾಬಲ್ಯ

11:22 PM Jan 13, 2024 | Team Udayavani |

ಅಹ್ಮದಾಬಾದ್‌: ನಾಯಕ ಮಾಯಾಂಕ್‌ ಅಗರ್ವಾಲ್‌ ಅವರ ಅಮೋಘ ಶತಕ ಸಾಹಸದಿಂದ ಆತಿಥೇಯ ಗುಜರಾತ್‌ ಎದುರಿನ ರಣಜಿ ಪಂದ್ಯದಲ್ಲಿ ಕರ್ನಾಟಕ ಮಹತ್ವದ ಮುನ್ನಡೆ ಸಾಧಿಸಿದೆ. ಗುಜರಾತ್‌ನ 264 ರನ್‌ಗೆ ಉತ್ತರವಾಗಿ ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 328 ರನ್‌ ಪೇರಿಸಿದೆ. ಇದರಲ್ಲಿ ಅಗರ್ವಾಲ್‌ ಕೊಡುಗೆ 109 ರನ್‌. ಸದ್ಯದ ಮುನ್ನಡೆ 64 ರನ್‌.

Advertisement

172 ರನ್‌ ಜತೆಯಾಟ
ಪ್ರಸಕ್ತ ರಣಜಿ ಸೀಸನ್‌ನ ಆರಂಭಿಕ ಪಂದ್ಯದಲ್ಲಿ ಜೋಡಿ ಸೊನ್ನೆ ಸುತ್ತಿ ಹೋಗಿದ್ದ ಅಗರ್ವಾಲ್‌ ಇಲ್ಲಿ ಕಪ್ತಾನನ ಆಟವಾಡುವಲ್ಲಿ ಯಶಸ್ವಿಯಾದರು. ಅವರಿಗೆ ರವಿಕುಮಾರ್‌ ಸಮರ್ಥ್ ಉತ್ತಮ ಬೆಂಬಲ ನೀಡಿದರು. ಗುಜರಾತ್‌ ಮೊತ್ತವನ್ನು ಇವರಿಬ್ಬರೇ ಸೇರಿಕೊಂಡು ಹಿಂದಿಕ್ಕುವ ರೀತಿಯಲ್ಲಿ ಬ್ಯಾಟಿಂಗ್‌ ಸಾಗಿತು. 39ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಆರಂಭಿಕ ಜೋಡಿ 172 ರನ್‌ ಪೇರಿಸಿತು.

ಅಗರ್ವಾಲ್‌ 124 ಎಸೆತ ಎದುರಿಸಿ 109 ರನ್‌ ಬಾರಿಸಿದರು. ಇದರಲ್ಲಿ 17 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಇದು ಅವರ 16ನೇ ಪ್ರಥಮ ದರ್ಜೆ ಶತಕ. ಸಮರ್ಥ್ ಕೊಡುಗೆ 60 ರನ್‌. 108 ಎಸೆತ ಎದುರಿಸಿ 7 ಬೌಂಡರಿ ಹೊಡೆದರು. ಇಬ್ಬರೂ ಒಂದೇ ಓವರ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ಗುಜರಾತ್‌ ನಿಟ್ಟುಸಿರು ಬಿಟ್ಟಿತು.
ಆದರೆ ಆರಂಭಿಕರು ನಿರ್ಮಿಸಿದ ತಳಪಾಯದ ಮೇಲೆ ದೇವದತ್ತ ಪಡಿಕ್ಕಲ್‌, ನಿಕಿನ್‌ ಜೋಸ್‌, ಮನೀಷ್‌ ಪಾಂಡೆ, ಚೊಚ್ಚಲ ಪಂದ್ಯ ಆಡುತ್ತಿರುವ ಬೆಳಗಾವಿ ಮೂಲದ ಪ್ರತಿಭಾವಂತ ಕೀಪರ್‌ ಸುಜಯ್‌ ಸಾತೇರಿ ಸೇರಿಕೊಂಡು ಇನ್ನಿಂಗ್ಸ್‌ ಬೆಳೆಸುವಲ್ಲಿ ಯಶಸ್ವಿಯಾದರು.

ಪ್ರಚಂಡ ಫಾರ್ಮ್ನಲ್ಲಿರುವ ಪಡಿಕ್ಕಲ್‌ 61 ಎಸೆತ ನಿಭಾಯಿಸಿ 42 ರನ್‌ ಹೊಡೆದರು (6 ಬೌಂಡರಿ, 1 ಸಿಕ್ಸರ್‌). ನಿಕಿನ್‌ ಜೋಸ್‌ ಗಳಿಕೆ 22 ರನ್‌. ಶುಭಾಂಗ್‌ ಹೆಗ್ಡೆ ಮಾತ್ರ ಬೇಗ ಔಟ್‌ ಆದರು (11).
56 ರನ್‌ ಮಾಡಿರುವ ಮನೀಷ್‌ ಪಾಂಡೆ ಮತ್ತು 24 ರನ್‌ ಗಳಿಸಿರುವ ಸುಜಯ್‌ ಸಾತೇರಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇಬ್ಬರೂ ಆಟವೂ ಆಕ್ರಮಣಕಾರಿ ಆಗಿತ್ತು. ಪಾಂಡೆ 97 ಎಸೆತ ಎದುರಿಸಿದ್ದು, 4 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದ್ದಾರೆ. ಸುಜಯ್‌ 35 ಎಸೆತ ನಿಭಾಯಿಸಿದ್ದಾರೆ. ಇದರಲ್ಲಿ 3 ಫೋರ್‌ ಹಾಗೂ ಒಂದು ಸಿಕ್ಸರ್‌ ಸೇರಿದೆ. ಗುಜರಾತ್‌ ಬೌಲಿಂಗ್‌ ಸಂಪೂರ್ಣ ವೈಫ‌ಲ್ಯ ಕಂಡಿತು. ನಾಯಕ ಚಿಂತನ್‌ ಗಜ 43ಕ್ಕೆ 2 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು.

ಕರ್ನಾಟಕ ಶನಿವಾರ ಬ್ಯಾಟಿಂಗ್‌ ಆರಂಭಿಸಿದ್ದು, ಭರ್ತಿ 90 ಓವರ್‌ಗಳನ್ನು ನಿಭಾಯಿಸಿದೆ. ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡರೆ ಗೆಲುವಿನ ಅವಕಾಶ ಇದ್ದೇ ಇದೆ.
ಸಂಕ್ಷಿಪ್ತ ಸ್ಕೋರ್‌: ಗುಜರಾತ್‌-264. ಕರ್ನಾಟಕ-5 ವಿಕೆಟಿಗೆ 328 (ಅಗರ್ವಾಲ್‌ 109, ಸಮರ್ಥ್ 60, ಪಾಂಡೆ ಬ್ಯಾಟಿಂಗ್‌ 56, ಪಡಿಕ್ಕಲ್‌ 42, ಸುಜಯ್‌ ಬ್ಯಾಟಿಂಗ್‌ 24, ಜೋಸ್‌ 22, ಶುಭಾಂಗ್‌ 11, ಚಿಂತನ್‌ ಗಜ 43ಕ್ಕೆ 2, ರಿಂಕೇಶ್‌ ವಾಘೇಲ 90ಕ್ಕೆ 1, ಸಿದ್ಧಾರ್ಥ್ ದೇಸಾಯಿ 111ಕ್ಕೆ 1).

Advertisement

ಆಂಧ್ರಕ್ಕೆ ಬ್ಯಾಟಿಂಗ್‌ ಚಿಂತೆ
ಮುಂಬಯಿ: ಆತಿಥೇಯ ಮುಂಬಯಿ ವಿರುದ್ಧ ಆಂಧ್ರಪ್ರದೇಶ ಬ್ಯಾಟಿಂಗ್‌ ಚಿಂತೆಗೆ ಸಿಲುಕಿದ ಲಕ್ಷಣ ಕಂಡುಬಂದಿದೆ. ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 395 ರನ್‌ ಗಳಿಸಿದ್ದು, ಆಂಧ್ರ 3ಕ್ಕೆ 98 ರನ್‌ ಮಾಡಿ 2ನೇ ದಿನದಾಟ ಕೊನೆಗೊಳಿಸಿದೆ.

ಮುಂಬಯಿ 6ಕ್ಕೆ 281 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಶನಿವಾರ ಕೆಳ ಕ್ರಮಾಂಕದ ಆಟಗಾರರಾದ ತನುಷ್‌ ಕೋಟ್ಯಾನ್‌ (54) ಮತ್ತು ಮೋಹಿತ್‌ ಅವಸ್ಥಿ (53) ಅರ್ಧ ಶತಕ ಬಾರಿಸಿ ಮೊತ್ತವನ್ನು ಏರಿಸುತ್ತ ಹೋದರು. ಧವಳ್‌ ಕುಲಕರ್ಣಿ ಔಟಾಗದೆ 24 ರನ್‌ ಮಾಡಿದರು. ಆಂಧ್ರ ಪರ ಮಧ್ಯಮ ವೇಗಿ ನಿತೀಶ್‌ ರೆಡ್ಡಿ 64ಕ್ಕೆ 5 ವಿಕೆಟ್‌ ಉರುಳಿಸಿದರು.ಆಂಧ್ರದ ಆರಂಭಕಾರ ಪ್ರಶಾಂತ್‌ ಕುಮಾರ್‌ 59 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next