ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ ಧಾರಾವಾಹಿ ನೋಡಿದವರಿಗೆ ಖಂಡಿತ ಈ ಹುಡುಗಿಯ ಮುಖ ಪರಿಚಯ ಇದ್ದೇ ಇರುತ್ತದೆ. ಹೌದು, ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿ ಪಾತ್ರದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಪ್ರೇಕ್ಷಕರನ್ನು ಟಿವಿ ಮುಂದೆ ತನ್ನ ಅಭಿನಯದ ಮೂಲಕ ಹಿಡಿದು ಕೂರಿಸಿ, ರಂಜಿಸಿದ್ದ ಈ ಚೆಲುವೆಯ ಹೆಸರು ರಂಜನಿ ರಾಘವನ್. ಸದ್ಯ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಹೊಸ ಕಥಾಹಂದರವೊಂದು ಸೇರ್ಪಡೆಯಾಗಿದ್ದು, ಜೊತೆಗೆ ಧಾರಾವಾಹಿಗೆ ಕೆಲವೊಂದು ತಿರುವುಗಳು ಸಿಕ್ಕು ಒಂದಷ್ಟು ಬದಲಾವಣೆಗಳಾಗಿರುವುದರಿಂದ, ಇನ್ನು ಮುಂದೆ ಈ ಧಾರಾವಾಹಿಯಲ್ಲಿ ಗೌರಿ ಪಾತ್ರದಲ್ಲಿ ರಂಜನಿ ರಾಘವನ್ ಕಾಣಿಸಿಕೊಳ್ಳುತ್ತಿಲ್ಲ. ಇದೇ ವೇಳೆ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡಿರುವ ರಂಜನಿ ಮುಂದಿನ ದಿನಗಳಲ್ಲಿ ದೊಡ್ಡ ಪರದೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವ ಖುಷಿಯಲ್ಲಿದ್ದಾರೆ.
ಬೆಂಗಳೂರು ಮೂಲದ ರಂಜನಿ ರಾಘವನ್ ಸಂಪ್ರದಾಯಸ್ಥ ಕುಟುಂಬದ ಹುಡುಗಿ. ತಂದೆ ಪ್ರತಿಷ್ಠಿತ ಬಿಇಎಲ್ ಸಂಸ್ಥೆಯ ಉದ್ಯೋಗಿ. ತಾಯಿ ಗೃಹಿಣಿ. ತಂಗಿ ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಲಾ ವಿದರ ಕುಟುಂಬದ ಹಿನ್ನೆಲೆ ಇಲ್ಲದಿದ್ದರೂ, ಮನೆಯಲ್ಲಿ ಯಾರೂ ಕಲಾವಿದರಲ್ಲದಿದ್ದರೂ ಅಭಿನಯದ ಕಡೆಗಿದ್ದ ಆಸಕ್ತಿ ರಂಜನಿ ಅವರನ್ನು ಕಿರುತೆರೆಗೆ ಕರೆದುತಂದಿತು. ಒಮ್ಮೆ ಕಾಲೇಜ್‌ಗೆ ಹೋಗುತ್ತಿದ್ದಾಗ ಕಾಲೇಜ್ ಹತ್ತಿರವೇ ಹಿರಿಯ ನಿರ್ದೇಶಕ ಟಿ. ಎಸ್. ನಾಗಾಭರಣ ಅವರ ಧಾರಾವಾಹಿಯೊಂದಕ್ಕೆ ಪಬ್ಲಿಕ್ ಆಡಿಷನ್ ನಡೆಯುತ್ತಿತ್ತು. ಯಾರೂ ಬೇಕಾದರೂ ಈ ಆಡಿಷನ್‌ನಲ್ಲಿ ಭಾಗವಹಿಸಬಹುದಾಗಿದ್ದರಿಂದ, ಸ್ನೇಹಿತರ ಒತ್ತಾಯದ ಮೇರೆಗೆ ರಂಜನಿ ಕೂಡ ಆಡಿಷನ್‌ನಲ್ಲಿ ಭಾಗವಹಿಸಿದ್ದರು. ಅವಕಾಶ ಸಿಗಬಹುದೋ, ಇಲ್ಲವೋ… ಎಂಬ ಅನುಮಾನದಿಂದಲೇ ಆಡಿಷನ್‌ನಲ್ಲಿ ಭಾಗವಹಿಸಿದ್ದ ರಂಜನಿ ಆ ಧಾರಾವಾಹಿಯ ಪಾತ್ರವೊಂದಕ್ಕೆ ಆಯ್ಕೆಯಾದರು. ಹೀಗೆ ಅಭಿನಯಕ್ಕೆ ಅಡಿಯಿಟ್ಟ ರಂಜನಿಗೆ ದೊಡ್ಡ ಹೆಸರು ಮತ್ತು ಖ್ಯಾತಿ ತಂದು ಕೊಟ್ಟಿದ್ದು ಪುಟ್ಟ ಗೌರಿ ಮದುವೆ.
ಸುಮಾರು ಮೂರೂವರೆ ವರ್ಷಗಳ ಕಾಲ ಗೌರಿ ಪಾತ್ರವನ್ನು ನಿರ್ವಹಿಸಿದ್ದ ರಂಜನಿ, ನಮ್ಮ ಮನೆಮಗಳು ಎನ್ನುವಷ್ಟರ ಮಟ್ಟಿಗೆ ನೋಡುಗರಿಗೆ ಹತ್ತಿರವಾಗಿದ್ದರು. ಈ ಧಾರಾವಾಹಿಯ ನಡುವೆಯೇ ರಾಜಹಂಸ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ರಂಜನಿ, ಹಿರಿತೆರೆಯನ್ನೂ ಸಮರ್ಥವಾಗಿ ನಿರ್ವಹಿಸಬಲ್ಲೆ ಎಂಬುದನ್ನು ತೋರಿಸಿದ್ದರು. ರಾಜಹಂಸ ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲ್ಲದಿದ್ದರೂ, ಚಿತ್ರದ ಬಗ್ಗೆ ಮತ್ತು ರಂಜನಿ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡಿರುವ ರಂಜನಿ, ಟಕ್ಕರ್ ಎಂಬ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನೂ ಒಂದೆರಡು ಚಿತ್ರಗಳು ಮಾತುಕತೆ ಹಂತದಲ್ಲಿದ್ದು, ಇದೇ ವರ್ಷಾಂತ್ಯಕ್ಕೆ ಆ ಚಿತ್ರಗಳೂ ಘೋಷಣೆಯಾಗುವ ಸಾಧ್ಯತೆ ಇದೆ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವ ರಂಜನಿ ರಾಘವನ್, ಕಿರುತೆರೆ ನನಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟು ನನ್ನನ್ನು ಗುರುತಿಸುವಂತೆ ಮಾಡಿದೆ. ಸದ್ಯ ನನ್ನ ಭವಿಷ್ಯವನ್ನು ಚಿತ್ರರಂಗದಲ್ಲಿ ರೂಪಿಸಿಕೊಳ್ಳುವ ಯೋಚನೆಯಿದೆ. ಎನ್ನುತ್ತಾರೆ ಅವರು.