ಕೊಲಂಬೋ: ಶ್ರೀಲಂಕಾದ ಮಾಜಿ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ, ಶ್ರೀಲಂಕಾದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಅವರು ನಾಲ್ಕು ಬಾರಿ ಆ ರಾಷ್ಟ್ರದ ಪ್ರಧಾನಿಯಾಗಿದ್ದರು.
ಗುರುವಾರದಂದು, ರಾಷ್ಟ್ರಾ ಧ್ಯಕ್ಷ ಗೊಟಬಾಯ ರಾಜಪಕ್ಸ ಅವರು ವಿಕ್ರಮ ಸಿಂಘೆ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಬುಧವಾರ ರಾತ್ರಿ, ಅಲ್ಲಿನ ರಾಷ್ಟ್ರೀಯ ವಾಹಿನಿಯಲ್ಲಿ ಶ್ರೀಲಂಕಾದ ಜನತೆಯನ್ನುದ್ದೇಶಿಸಿ ಮಾತನಾ ಡಿದ್ದ ಗೊಟಬಾಯ, ಇನ್ನೊಂದು ವಾರದಲ್ಲಿ ದೇಶಕ್ಕೆ ನೂತನ ಪ್ರಧಾನಿ ಹಾಗೂ ಹೊಸ ಸಂಪುಟವನ್ನು ಅಸ್ತಿತ್ವಕ್ಕೆ ತರಲಾಗುತ್ತದೆ ಎಂದು ಹೇಳಿದ್ದರು. ಅದರ ಮರುದಿನವೇ ಪ್ರಧಾನಿಯನ್ನು ನೇಮಿಸಲಾಗಿದೆ.
225 ಸದಸ್ಯ ಬಲದ ಶ್ರೀಲಂಕಾ ಸಂಸತ್ತಿನಲ್ಲಿ ವಿಕ್ರಮ ಸಿಂಘೆ ನೇತೃತ್ವದ ಯುನೈಟೆಡ್ ನ್ಯಾಶನಲ್ ಪಾರ್ಟಿಗೆ ಕೇವಲ ಒಂದು ಸದಸ್ಯ ಬೆಂಬಲವಿದೆ. ಆದರೆ ಆಡಳಿತಾರೂಡ ಗೊಟಬಾಯ ರಾಜಪಕ್ಸೆಯವರ ಪಕ್ಷದ ಎಲ್ಲ ಸದಸ್ಯರ ಬೆಂಬಲದಿಂದ ಅವರು ಪುನಃ ಪ್ರಧಾನಿಯಾಗಿದ್ದಾರೆ.
ಮೇ 17ಕ್ಕೆ ಅವಿಶ್ವಾಸ: ಶ್ರೀಲಂಕಾದ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಪಕ್ಷಗಳು ನಿರ್ಧರಿಸಿವೆ. ಈ ಕುರಿತಂತೆ, ಪ್ರತಿಭಟನನಿರತ ವಿಪಕ್ಷಗಳು ಮನವಿ ಸಲ್ಲಿಸಿದ್ದು ಆ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ಶ್ರೀಲಂಕಾದ ಲೋಕಸಭೆಯ ಸ್ಪೀಕರ್ ಕಚೇರಿಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಮಹಿಂದಾಗೆ ನಿಷೇಧ: ಈ ನಡುವೆ, ಮಾಜಿ ಪಿಎಂ ಮಹಿಂದಾ ರಾಜಪಕ್ಸ ಹಾಗೂ ಅವರ 16 ಆಪ್ತ ರಾಜಕೀಯ ನೇತಾರರ ವಿದೇಶ ಪ್ರಯಾಣಕ್ಕೆ ಕೊಲಂಬೋದ ನ್ಯಾಯಧೀಶರು ನಿಷೇಧ ಹೇರಿದ್ದಾರೆ. ಸೋಮವಾರದಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ನಡೆಸಿ, ಆಗ ನಡೆದ ಪ್ರತಿದಾಳಿಯಲ್ಲಿ 9 ಜನರು ಸಾವಿಗೀಡಾದ ಪ್ರಕರಣವನ್ನು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಕೊಲಂಬೋ ಪೊಲೀಸರಿಗೆ ಆದೇಶಿಸಿದ್ದಾರೆ.