ರಾಣಿಬೆನ್ನೂರ: ಜಗತ್ತಿನಲ್ಲಿ ಧರ್ಮ ಮತ್ತು ದೇವರ ಹೆಸರಿನಲ್ಲಿ ಮಹಾ ಯುದ್ಧಗಳು ನಡೆಯುತ್ತಿವೆ. ಈ ಎರಡು ವಿಷಯಗಳು ಅಫೀಮ್ ಹಾಗೂ ಗಾಂಜಾಕ್ಕಿಂತಲೂ ಅತೀಯಾದ ಅಪಾಯಕಾರಿ ಎಂದು ಐಮಂಗಳದ ಹರಳಯ್ಯ ಗುರು ಪೀಠದ ಹರಳಯ್ಯ ಮಹಾಸ್ವಾಮಿಗಳು ಹೇಳಿದರು.
Advertisement
ತಾಲೂಕಿನ ಸುಕ್ಷೇತ್ರ ಐರಣಿ ಮನಿಮಠದಲ್ಲಿ ಮಂಗಳವಾರ ಸಾಧು ಚಕ್ರವರ್ತಿ ಶ್ರೀ ಸಿದ್ಧಾರೂಢರ ಮತ್ತು ಮಹಾ ತಪಸ್ವಿ ಮುಪ್ಪಿನಾರ್ಯ ಸ್ವಾಮಿಗಳ ಅಖಂಡ ಶಿವಭಜನೆ ಸಪ್ತಾಹ, ಅಡ್ಡಪಲ್ಲಕ್ಕಿ ಉತ್ಸವ, ನೂತನವಾಗಿ ನಿರ್ಮಾಣಗೊಂಡಿರುವ ಮಹಾ ರಥೋತ್ಸವ ಮತ್ತು ಶ್ರೀಮಠದ ಗಜದಂಡ ಮಹಾಸ್ವಾಮಿಗಳ 31ನೇ ವರ್ಷದ ಫಟ್ಟಾಭಿಷೇಕ ಮಹೋತ್ಸವದ ಸವಿ ನೆನಪಿಗಾಗಿ ನಡೆದ ತುಲಾಭಾರ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
Related Articles
Advertisement
ಸಾನಿಧ್ಯ ವಹಿಸಿದ್ದ ಶ್ರೀಮಠದ ಗಜದಂಡ ಮಹಾಸ್ವಾಮಿಗಳು ಮಾತನಾಡಿ, ನವದಂಪತಿ ಗುರುಹಿರಿಯರನ್ನು ಮತ್ತು ತಂದೆ, ತಾಯಿಗಳನ್ನು ಪ್ರೀತಿಯಿಂದ ಕಾಣಬೇಕು. ಸಂಸ್ಕಾರಯುತ ಜೀವನ ನಿಮ್ಮದಾಗಬೇಕು. ಮುಂದೆ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು. ಶ್ರೀ ಸಿದ್ಧಾರೂಢರ ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕು ಹಸನವಾಗಲಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಕೆ.ಆರ್. ನಗರದ ಗುರುಮಲ್ಲೇಶ್ವರ ದಾಸೋಹ ಮಠದ ಮಾತೋಶ್ರೀ ಜಗದೇವಿ ತಾಯಿ, ಚಿತ್ರದುರ್ಗ ಮಡಿವಾಳ ಗುರುಪೀಠದ ಮಡಿವಾಳ ಮಾಚಿದೇವ ಶ್ರೀಗಳು, ತಿಳವಳ್ಳಿ ಕಲ್ಮಠದ ಬಸವ ನಿರಂಜನ ಮಹಾಸ್ವಾಮಿಗಳು, ಬೈಲಹೊಂಗಲ ಸಿದ್ಧಾರೂಢ ಮಠದ ಜಗದೇವ ಮಹಾಸ್ವಾಮಿಗಳು, ಗೋಕಾಕ ರವಿ ಶಂಕರ ಶಿವಾಚಾರ್ಯ ಶ್ರೀಗಳು ಆಶೀರ್ವಚನನೀಡಿದರು. ಸಾಮೂಹಿಕ ವಿವಾಹದಲ್ಲಿ 8 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹನುಮಂತಪ್ಪ ಚಳಗೇರಿ ಕುಟುಂಬದವರು ಶ್ರೀಮಠದ ಗಜದಂಡ ಮಹಾಸ್ವಾಮಿಗಳ ತುಲಾಭಾರ ನೆರವೇರಿಸಿದರು. ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿ ಸಿದ್ಧನಗೌಡ ಪಾಟೀಲ, ಭರಮಪ್ಪ ಪೂಜಾರ, ಹನುಮಂತಪ್ಪ ಚಳಗೇರಿ, ಬಸವರಾಜಪ್ಪ ಹೊನ್ನಾಳಿ, ಬುಳ್ಳಪ್ಪ ಬಣಕಾರ, ನಾಗಪ್ಪ ಕಾಡಜ್ಜಿ, ಗದಿಗೆಪ್ಪ ಸಾರ್ಥಿ, ಪರಸಪ್ಪ ಹಿರೇಬಿದರಿ, ಮಂಜಣ್ಣ ಕುರುಬರಹಳ್ಳಿ, ಕೊಟ್ರೇಶಪ್ಪ ಮತ್ತಿತರರಿದ್ದರು.